ದಕ್ಷಿಣ ಕೊಡಗಿನಲ್ಲಿ ಲಘು ಭೂ ಕಂಪನ ಅನುಭವ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಹಲವು ಗ್ರಾಮಗಳಲ್ಲಿ ಗುರುವಾರ ರಾತ್ರಿ ಗುಡುಗಿನೊಂದಿಗೆ ಕೇಳಿಸಿದ ಶಬ್ದ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿತು. ಸಂಜೆ 6.45ರ ಸುಮಾರಿನಲ್ಲಿ ವಿವಿಧ ಗ್ರಾಮಗಳಲ್ಲಿ ಹಂತ ಹಂತವಾಗಿ ಲಘು ಭೂಕಂಪನದ ಅನುಭವವಾಗಿದೆ.

ಪೊನ್ನಂಪೇಟೆ, ಮತ್ತೂರು, ಬಾಳಾಜಿ ಗ್ರಾಮಗಳಲ್ಲಿ ಸಂಜೆ 6.45 ಸುಮಾರಿಗೆ ಮಿಂಚು, ಗುಡುಗಿನೊಂದಿಗೆ ಭೂಮಿ ಕಂಪಿಸಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸುಮಾರು 30 ಸೆಕೆಂಡ್‌ಗಳು ಭೂಮಿಯಲ್ಲಿ ಭಯಾನಕ ಶಬ್ದ ಕೇಳಿ ಬಂದಿದೆ. ಮನೆಯ ವಸ್ತುಗಳು ಅಲುಗಾಡಿವೆ. ಇದೇ ರೀತಿ ಕಾನೂರು, ಬಾಳೆಲೆ, ನಾಲ್ಕೇರಿ, ಕಳತ್ಮಾಡ್, ಕೋಟೂರು, ಬಲ್ಯಮುಂಡೂರು, ತೂಚಮಕೇರಿ, ಕುಮಟೂರು ಸುತ್ತಮುತ್ತ ಗ್ರಾಮದ ಜನತೆ ಲಘು ಭೂಕಂಪನದ ಅನುಭವ ಹಂಚಿಕೊಂಡಿದ್ದಾರೆ. ನಾಲ್ಕೇರಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಈ ರೀತಿ ನಡೆದಿದೆ. ಬಾಳೆಲೆಯ ಬೇಕರಿಯೊಂದರ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗೋಡು, ಕಟ್ಟೆಮಾಡು ಗ್ರಾಮದಲ್ಲಿ ಗುರುವಾರ ರಾತ್ರಿ ಭೂಮಿಯಲ್ಲಿ ಕೆಲವು ಸೆಕೆಂಡ್ ಲಘು ಕಂಪನ ಆಗಿರುವ ಅನುಭವವನ್ನು ಹಲವರು ಹಂಚಿಕೊಂಡಿದ್ದಾರೆ. ರಾತ್ರಿ 8.40, 8.45 ರ ಹೊತ್ತಿನಲ್ಲಿ ಈ ಅನುಭವ ಆಗಿದೆ ಎಂದು ಕಟ್ಟೆಮನೆ ರೋಷನ್, ಗೋಪಾಲ್ ಸೋಮಯ್ಯ ಹೇಳಿದ್ದಾರೆ.

ಮನೆಯಿಂದ ಹೊರ ಬಂದರು: ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ರಾತ್ರಿ 9.45 ಸುಮಾರಿಗೆ ಒಂದೆರಡು ನಿಮಿಷಗಳ ಕಾಲ ಭೂಮಿಯಲ್ಲಿ ಶಬ್ದ ಕೇಳಿಬಂದಿದೆ. ಮನೆಯ ವಸ್ತುಗಳು ಅಲುಗಾಡಿವೆ. ಇದರಿಂದ ಗಾಬರಿಗೊಂಡು ಗ್ರಾಮದ ಅಜ್ಜಮಾಡ ಕುಶಾಲಪ್ಪ ಹಾಗೂ ಮನೆಯಲ್ಲಿದ್ದವರು ಹೊರಬಂದಿದ್ದಾರೆ. ಗುಡುಗಿಗೆ ಹೀಗೆ ಆಗುತ್ತಿದೆ ಎಂದು ಪರಸ್ಪರ ಚರ್ಚಿಸಿಕೊಂಡು ಶಬ್ದ ನಿಂತ ನಂತರ ಮನೆಗೆ ಸೇರಿಕೊಂಡೆವು ಎಂದು ಕುಶಾಲಪ್ಪ ಮಾಹಿತಿ ನೀಡಿದ್ದಾರೆ.

ಬಲ್ಯಮುಂಡೂರು ತಾವರೆಕೆರೆ ರಸ್ತೆಯ ವ್ಯಾಪ್ತಿಯಲ್ಲಿ ಸಿಡಿಲು, ಮಿಂಚಿಗೆ ಭೂಮಿಯ ಕುರುಚಲು ಕಾಡು 50 ಮೀ. ಅಗಲದಷ್ಟು ಬೆಂದು ಹೋಗಿದೆ. ಕಾಂಕ್ರೀಟ್ ರಸ್ತೆ, ವಿದ್ಯುತ್ ಕಂಬದಲ್ಲಿನ ಕಾಂಕ್ರೀಟ್ ಕಿತ್ತು ಬಂದಿದೆ. ಬಲ್ಯಮುಂಡೂರು ಗ್ರಾಮ ಪಂಚಾಯಿತಿಯ ನೀರೆತ್ತುವ ಪಂಪ್‌ಸೆಟ್ ಸುಟ್ಟು ಹೋಗಿದೆ. ಗ್ರಾಮದ ಬಹುತೇಕ ಮನೆಗಳ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಹೋಗಿವೆ.

Leave a Reply

Your email address will not be published. Required fields are marked *