ರೋಹಿತ್, ಮಯಾಂಕ್​ಗೆ ಜೀವನಶ್ರೇಷ್ಠ ರ‍್ಯಾಂಕ್

ನವದೆಹಲಿ: ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ ಮೊದಲ ಎರಡು ಇನಿಂಗ್ಸ್​ಗಳಲ್ಲಿಯೇ ಶತಕ ಬಾರಿಸಿ ಇತಿಹಾಸ ನಿರ್ವಿುಸಿದ್ದ ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮ ಐಸಿಸಿ ಟೆಸ್ಟ್ ರ‍್ಯಾಂಕಿಂಗ್​​ನಲ್ಲಿ ಜೀವನಶ್ರೇಷ್ಠ ಸ್ಥಾನ ಪಡೆದಿದ್ದಾರೆ.

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 176 ಹಾಗೂ 127 ರನ್ ಸಿಡಿಸಿದ್ದ ರೋಹಿತ್ ಶರ್ಮ, 36 ಸ್ಥಾನದ ಏರಿಕೆಯೊಂದಿಗೆ 17ನೇ ಸ್ಥಾನ ಪಡೆದಿದ್ದಾರೆ. ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ್ದ ಮತ್ತೊಬ್ಬ ಆರಂಭಿಕ ಆಟಗಾರ ಕರ್ನಾಟಕದ ಮಯಾಂಕ್ ಅಗರ್ವಾಲ್ ಕೂಡ 38 ಸ್ಥಾನಗಳ ಏರಿಕೆಯೊಂದಿಗೆ ಜೀವನಶ್ರೇಷ್ಠ 25ನೇ ಸ್ಥಾನ ಪಡೆದಿದ್ದಾರೆ.

ಮೊದಲ ಇನಿಂಗ್ಸ್​ನಲ್ಲಿ 20 ಹಾಗೂ 2ನೇ ಇನಿಂಗ್ಸ್​ನಲ್ಲಿ ಅಜೇಯ 31 ರನ್ ಬಾರಿಸಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (899 ಅಂಕ), 2018ರ ಜನವರಿಯ ಬಳಿಕ ಮೊದಲ ಬಾರಿಗೆ 900 ಅಂಕಗಳಿಂದ ಕೆಳಗೆ ಇಳಿದಿದ್ದಾರೆ. ಇದರಿಂದಾಗಿ ಅಗ್ರಸ್ಥಾನಿ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಹಾಗೂ 2ನೇ ಸ್ಥಾನಿ ವಿರಾಟ್ ಕೊಹ್ಲಿ ನಡುವೆ 38 ಅಂಕಗಳ ವ್ಯತ್ಯಾಸ ಉಂಟಾಗಿದೆ.

2018ರ ಡಿಸೆಂಬರ್ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವಾಡಿದ ಅನುಭವಿ ಆಫ್ ಸ್ಪಿನ್ನರ್, ಆರ್ ಅಶ್ವಿನ್ ಪಂದ್ಯದಲ್ಲಿ 8 ವಿಕೆಟ್ ಉರುಳಿಸಿ ಗಮನಸೆಳೆದರು. ಇದರಿಂದಾಗಿ ರ್ಯಾಂಕಿಂಗ್​ನಲ್ಲಿ ಪ್ರಗತಿ ಕಂಡಿರುವ ಅಶ್ವಿನ್ 4 ಸ್ಥಾನದ ಏರಿಕೆಯೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ರ್ಯಾಂಕಿಂಗ್​ನಲ್ಲೂ ಅಗ್ರ 5 ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ. ವೇಗದ ಬೌಲರ್ ಮೊಹಮದ್ ಶಮಿ ಜೀವನಶ್ರೇಷ್ಠ 710 ಅಂಕ ಸಂಪಾದನೆ ಮಾಡಿದ್ದು, 18 ರಿಂದ 16ನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದಾರೆ.ಆಲ್ರೌಂಡರ್ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್​ರನ್ನು ಹಿಂದೆ ಹಾಕಿ, 2ನೇ ಸ್ಥಾನಕ್ಕೇರಿದ್ದಾರೆ. -ಪಿಟಿಐ

Leave a Reply

Your email address will not be published. Required fields are marked *