ಕಲಕೇರಿ: ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಗುರಿ ಮತ್ತು ಗುರು ಇಲ್ಲದ ಜೀವನ ನಿರರ್ಥಕ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಭಗವತ್ಪಾದರು ಅಭಿಪ್ರಾಯಪಟ್ಟರು.
ಕಲಕೇರಿಯ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠದಲ್ಲಿ ಬುಧವಾರ ಜರುಗಿದ ಪುರಾಣ ಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ಧರ್ಮ ವೀರಶೈವ. ಈ ಧರ್ಮದ ತತ್ವ ಸಿದ್ಧಾಂತಗಳು ಜೀವನ ವಿಕಾಸಕ್ಕೆ ಅಡಿಪಾಯವಾಗಿವೆ. ಸ್ವಾರ್ಥ ಗೆದ್ದವನು ಶಾಂತಿ ಪಡೆದವನು ಮತ್ತು ಸತ್ಯ ಅರಿತವನು ನಿಜವಾದ ಸುಖಿ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.
ಕಲಬುರಗಿಯ ಶರಣ ಬಸವೇಶ್ವರರಿಗೆ ಶಿವದೀಕ್ಷೆಯಿತ್ತು, ಅನುಗ್ರಹಿಸಿದ ಶ್ರೇಯಸ್ಸು ಶ್ರೀಮಠಕ್ಕೆ ಸಲ್ಲುತ್ತದೆ. ಲಿಂ. ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಅಮೃತ ಶಿಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಇಂದಿನ ಪಟ್ಟಾಧ್ಯಕ್ಷ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಮಾತನಾಡಿ, ಮನುಷ್ಯನಿಗೆ ಶಾಸದ ಭಯವಾದರೂ ಇರಬೇಕು. ಇಲ್ಲವೆ ಶಸದ ಭಯವಾದರೂ ಇರಬೇಕು. ಶಾಸದ ಮರ್ಯಾದೆ ಮೀರಿ ನಡೆದಾಗ ಆತಂಕ ತಪ್ಪಿದ್ದಲ್ಲ ಎಂದರು.
ಜಳಕೋಟ ಶಿವಾನಂದ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಹಲಕರ್ಟಿ ಅಭಿನವ ಮುನೀಂದ್ರ ಶಿವಾಚಾರ್ಯರು, ಕಲಕೇರಿ ಗದ್ದಿಗಿಮಠದ ಗುರು ಮಡಿವಾಳೇಶ್ವರ ಶಿವಾಚಾರ್ಯರು, ದೇವರಹಿಪ್ಪರಗಿ ಜಡಿ ಸಿದ್ಧೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು.
ರಾಜಗುರು ಗುರುಸ್ವಾಮಿ ಗವಾಯಿ, ಚಾಣಕ್ಯ ಕರಿಯರ್‌ನ ಎನ್.ಎಂ. ಬಿರಾದಾರ ಹಲವರಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಆಶೀರ್ವದಿಸಿದರು. ಕಾಲಜ್ಞಾನಿ ಕಡಕೋಳದ ಮಡಿವಾಳೇಶ್ವರ ಪುರಾಣ ಮಂಗಲಗೊಂಡಿತು.