More

    ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಹೆತ್ತ ಮಗುವನ್ನೇ ಕೊಂದ ತಾಯಿಗೆ ಜೀವಾವಧಿ ಶಿಕ್ಷೆ

    ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಹೆತ್ತ ಮಗುವನ್ನೇ ಹತ್ಯೆ ಮಾಡಿದ ತಾಯಿಗೆ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ಕೊಡಿಗೆಹಳ್ಳಿಯ ನಿವಾಸಿ ಶ್ರದ್ಧಾ (26) ಜೀವಾವಧಿ ಜೈಲು ಶಿಕ್ಷೆಗೊಳಗಾದ ಮಹಿಳೆ. ಪ್ರಧಾನ ಜಿಲ್ಲಾ ನ್ಯಾಯಾಲಯ ಬೆಂಗಳೂರು ಗ್ರಾಮಾಂತರ ವಿಭಾಗದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ. 5 ಸಾವಿರ ರೂ. ಜುಲ್ಮಾನೆ ಹಾಗೂ ಸಾಕ್ಷ್ಯ ನಾಶಕ್ಕೆ 3 ವರ್ಷ ಕಠಿಣ ಸಜೆ ವಿಧಿಸಲಾಗಿದೆ. ಆರೋಪಿ ಮಹಿಳೆ ವಿರುದ್ಧ ಹಿರಿಯ ಸರ್ಕಾರಿ ಅಭಿಯೋಜಕ ಎಸ್.ವಿ. ಭಟ್ ವಾದ ಮಂಡಿಸಿದ್ದರು.

    ಪ್ರಕರಣದ ವಿವರ: ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಶ್ರದ್ಧಾ, ಕೆಲ ವರ್ಷಗಳ ಹಿಂದೆ ಪರಿಚಿತ ನೊಬ್ಬನನ್ನು ಪ್ರೀತಿಸಿ ವಿವಾಹವಾಗಿದ್ದಳು. ದಂಪತಿಗೆ ಅಂಜನಾ (2) ಹೆಣ್ಣು ಮಗುವಿತ್ತು. ಕೆಲ ಸಮಯದ ಬಳಿಕ ಪತಿ ಜತೆ ಜಗಳ ಮಾಡಿಕೊಂಡು ಆತನನ್ನು ತೊರೆದಿದ್ದ ಶ್ರದ್ಧಾ ತಾನು ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗ ಪ್ರೀತಿಸುತ್ತಿದ್ದ ಶರತ್​ಕುಮಾರ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಅಲ್ಲದೆ, ಆತನನ್ನು ವಿವಾಹವಾಗಲು ನಿರ್ಧರಿಸಿದ್ದಳು.

    ಶರತ್ ಜತೆ ವಿವಾಹಕ್ಕೆ ಮಗಳು ಅಡ್ಡಿಯಾಗುತ್ತಾಳೆಂದು ಹತ್ಯೆ ಮಾಡಲು ಪ್ರಿಯಕರನ ಜತೆ ಸಂಚು ಮಾಡಿದ್ದಳು. ಅದರಂತೆ 2017 ನ.11ರಂದು ಮಗಳು ಅಂಜನಾಳನ್ನು ಗೋಡೆಗೆ ಜೋರಾಗಿ ತಳ್ಳಿದ್ದಳು. ನಂತರ ನೋವಿನಿಂದ ನರಳುತ್ತಿದ್ದ ಮಗಳ ಮುಖಕ್ಕೆ ತಲೆದಿಂಬನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಳು. ನಂತರ ಶರತ್​ಗೆ ಕರೆ ಮಾಡಿ ತಿಳಿಸಿದ್ದಳು. ಮಗು ಮಂಚದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದೆ ಎಂದು ಇಬ್ಬರೂ ಬಿಂಬಿಸಿದ್ದರು.

    ಮರಣೋತ್ತರ ವರದಿ ನೀಡಿದ ಸುಳಿವು

    ವೈದ್ಯರು ಮಗುವಿನ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮಂಚದಿಂದ ಬಿದ್ದು ಮಗು ಸತ್ತಿಲ್ಲ. ತುಟಿ ಮತ್ತು ಬಾಯಿಯನ್ನು ಒತ್ತಡದಿಂದ ಮುಚ್ಚಿದಾಗ ಮಿದುಳಿನಲ್ಲಿ ರಕ್ತಸ್ರಾವವಾಗಿ ಮಗು ಮೃತಪಟ್ಟಿದೆ ಎಂದು ಉಲ್ಲೇಖಿಸಿದ್ದರು. ಕಾರ್ಯಪ್ರವೃತ್ತರಾದ ತಾವರೆಕೆರೆ ಪೊಲೀಸರು ಶ್ರದ್ಧಾ ಹಿನ್ನೆಲೆ ಕಲೆ ಹಾಕಿದಾಗ ಆಕೆಯ ಪ್ರೇಮ್ ಕಹಾನಿ ಗೊತ್ತಾಯಿತು. ನಂತರ ಈ ಬಗ್ಗೆ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಸಂಗತಿ ಬಯಲಾಗಿತ್ತು. ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಬಗ್ಗೆ ಆರೋಪಿ ಶ್ರದ್ಧಾ ವಿರುದ್ಧ ಪೊಲೀಸರು 2018ರಲ್ಲಿ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts