ಆಧ್ಯಾತ್ಮಿಕ ಚಿಂತನೆಗಳಿಂದ ಬದುಕಿಗೆ ಅರ್ಥ

ಸಕಲೇಶಪುರ: ಆಧ್ಯಾತ್ಮಿಕ ಚಿಂತನೆಗಳನ್ನು ಆಳವಡಿಸಿಕೊಂಡಾಗ ಮಾತ್ರ ಬದುಕಿಗೆ ಅರ್ಥ ಬರಲಿದೆ ಎಂದು ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 886ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅಧ್ಯಾತ್ಮ ರಹಿತವಾದ ಬದುಕು ಪ್ರಾಣಿಗಳಿಗಿಂತ ಭಿನ್ನವಲ್ಲ ಎಂದರು.

ಪ್ರಸ್ತುತ ಆರ್ಥಿಕವಾಗಿ ಶ್ರೀಮಂತರಾಗುತ್ತಿರುವ ಜನರು ಆಂತರಿಕವಾಗಿ ಬರಿದಾಗುತ್ತಿದ್ದಾರೆ. ಯುವ ಪೀಳಿಗೆಯನ್ನು ಧರ್ಮದತ್ತ ಸೆಳೆಯುವ ಕೆಲಸವಾಗಬೇಕಿದೆ. ಧರ್ಮದ ಸಾರವಿಲ್ಲದೆ ಬದುಕಿಲ್ಲ ಎಂಬುದನ್ನು ಅವರಿಗೆ ತಿಳಿಸಬೇಕಿದೆ ಎಂದು ನುಡಿದರು.

ವಚನಗಳ ಸಾರವನ್ನು ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದ ಮನೆಗಳಲ್ಲೇ ತಿಳಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಮಠ-ಮಾನ್ಯಗಳು ಧರ್ಮವನ್ನು ಒಟ್ಟುಗೂಡಿಸುತ್ತಿದ್ದರೆ, ರಾಜಕಾರಣಿಗಳು ವಿಘಟನೆ ಮಾಡುತ್ತಿದ್ದಾರೆ. ಇದು ಬಸವಣ್ಣ ಕಂಡ ಸಮ ಸಮಾಜದ ಕನಸಿಗೆ ಮಾರಕ ಎಂದರು.

ಧರ್ಮಗುರು ಇಬ್ರಾಹಿಂ ಮುಸ್ಲಿಯರ್ ಮಾತನಾಡಿ, ಅಪರೂಪದ ಅಂಶಗಳನ್ನು ತನ್ನ ಒಡಲಲ್ಲಿ ಅಳವಡಿಸಿಕೊಂಡಿರುವ ವೀರಶೈವಧರ್ಮ ವಿಶ್ವಧರ್ಮ. ದಯೆಯೇ ಧರ್ಮದ ಮೂಲವೆಂಬ ಬಸವಣ್ಣನವರ ತತ್ವವನ್ನು ಎಲ್ಲ ಧರ್ಮಗಳೂ ಅಳವಡಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟರು.

ಹಾಸನ ಎವಿಕೆ ಕಾಲೇಜಿನ ಪ್ರಾಂಶುಪಾಲ ಯತೀಶ್ವರ್ ಮಾತನಾಡಿ, ಧರ್ಮದಲ್ಲಿ ತುಂಬಿಕೊಂಡಿದ್ದ ಅಸಮಾನತೆ, ಮೂಢನಂಬಿಕೆ, ಜಾತಿ ಪದ್ಧತಿಯನ್ನು ಕಿತ್ತೊಗೆದು ಸಮಸಮಾಜ ನಿರ್ಮಾಣದ ಕನಸು ಕಂಡವರಲ್ಲಿ ಬಸವಣ್ಣ ಮೊದಲಿಗರು. ವಿಶ್ವಕ್ಕೆ ಸರ್ವ ಶ್ರೇಷ್ಠವಾದ ವಚನ ಸಾಹಿತ್ಯ ನೀಡಿದ್ದಾರೆ ಎಂದು ಬಣ್ಣಿಸಿದರು.

ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಕಲ್ಲಹಳ್ಳಿ ಬಸವರಾಜು, ಕಾರ್ಯದರ್ಶಿ ಮೂಗಲಿ ಧರ್ಮಣ್ಣ, ಅಕ್ಕಮಹಾದೇವಿ ಸಂಘದ ಅಧ್ಯಕ್ಷೆ ರೇಖಾ ಸುರೇಶ್, ಗುರುವೇಗೌಡ ಕಲ್ಯಾಣ ಮಂಟಪ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಡಿ.ಬಸವಣ್ಣ, ಯತೀಶ್ ಇತರರಿದ್ದರು.