ಶಿವಮೊಗ್ಗ: ಯಾವುದೇ ವ್ಯಕ್ತಿಯ ಅರ್ಥಪೂರ್ಣ ಜೀವನಕ್ಕೆ ಆದರ್ಶ ಹಾಗೂ ಸಮರ್ಪಕ ಗುರಿ ಅವಶ್ಯ. ಸಂಘ ಹಾಗೂ ಎಬಿವಿಪಿ ನನಗೆ ದಿಕ್ಕು ತೋರಿದವು. ಶಿಕ್ಷಣದ ಬಗ್ಗೆ ಕೆಲಸ ಮಾಡುವ ಮಾರ್ಗವನ್ನು ತೋರಿಸಿದವು ಎಂದು ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಾ. ಎಂ.ಕೆ.ಶ್ರೀಧರ್ ಹೇಳಿದರು.
ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ಆರ್‌ಎಸ್‌ಎಸ್ ಅನ್ನು ಕಟುವಾಗಿ ವಿರೋಧಿಸುತ್ತಲೇ ಆರ್‌ಎಸ್‌ಎಸ್‌ನೊಳಗೆ ಬೆರೆತೆ. ಚಳವಳಿಗಳನ್ನು ದ್ವೇಷಿಸುತ್ತಲೇ ಎಬಿವಿಪಿಯನ್ನು ಒಪ್ಪಿಕೊಂಡೆ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.
ನನ್ನ ದೈಹಿಕ ಸಮಸ್ಯೆಗಳು ಎಂದೂ ನನ್ನನ್ನು ಕಾಡದಷ್ಟು ನನ್ನ ಸುತ್ತಲಿನ ಜನ ನಿಗಾವಹಿಸಿದ್ದಾರೆ. ಅವರ ಪ್ರೀತಿ, ಆತ್ಮೀಯತೆ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ ಎಂದು ಗದ್ಗದಿತರಾದರು. ಜೀವನದಲ್ಲಿ ಏನೂ ಇಲ್ಲ ಎಂದು ಚಿಂತಿಸುವುದಕ್ಕಿಂತಲೂ ನಮ್ಮ ಬಳಿ ಏನೇನು ಇದೆ ಎಂಬುದನ್ನು ಅರಿತು ತೃಪ್ತಿಪಡಬೇಕು ಎಂದು ತಿಳಿಸಿದರು.
ನನ್ನೊಂದಿಗೆ ಪದ್ಮಶ್ರೀ ಗೌರವ ಸ್ವೀಕರಿಸಿದವರ ಸಾಧನೆಗಳನ್ನು ಗಮನಿಸಿದಾಗ ನಾನು ಮಾಡಿರುವ ಕೆಲಸ ಏನೇನೂ ಅಲ್ಲ ಎಂಬ ಭಾವ ನನ್ನನ್ನು ಆವರಿಸಿತ್ತು. ಅಲ್ಲಿ ಅಸಾಮಾನ್ಯ ಸಾಧಕರಿದ್ದರು. ಅವರೆದುರು ನಾನು ಮಾಡಿರುವ ಕೆಲಸಗಳು ಅತ್ಯಲ್ಪ ಎಂಬುದೇ ಈಗಲೂ ನನ್ನ ಭಾವನೆಯಾಗಿದೆ ಎಂದರು.
ಯಾವುದಾದರೂ ವ್ಯಕ್ತಿ ಪ್ರಶಸ್ತಿ ಪಡೆದಿದ್ದಾನೆಂದರೆ ಆತನನ್ನು ರೂಪಿಸಿದ ಪಾಲಕರು, ಶಿಕ್ಷಕರು, ಸಮಾಜ ಎಲ್ಲದರ ಪಾತ್ರವೂ ಮಹತ್ತರವಾಗಿರುತ್ತದೆ. ಹೀಗಾಗಿ ವ್ಯಕ್ತಿಗೆ ಸಲ್ಲುವ ಪ್ರಶಸ್ತಿಯ ಪಾಲು, ಹೆಗ್ಗಳಿಕೆ ಆತನನ್ನು ರೂಪಿಸಿದವರಿಗೂ ಸಲ್ಲಬೇಕು ಎಂದು ಹೇಳಿದ ಅವರು, ನನಗೆ ಪದ್ಮಶ್ರೀಯೊಂದಿಗೆ ನೀಡಿದ ಪ್ರಶಂಸನಾ ಪತ್ರದಲ್ಲಿ ನಾನು ಎಬಿವಿಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತ ಎಂಬುದನ್ನು ನಮೂದು ಮಾಡಿದ್ದಾರೆ. ಇದು ಅತ್ಯಂತ ಖುಷಿಯ ವಿಚಾರ ಎಂದು ಹೇಳಿದರು.
ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಭಿನಂದನಾ ಭಾಷಣ ಮಾಡಿದರು. ಕೈಗಾರಿಕೋದ್ಯಮಿ ಭೂಪಾಳಂ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ಜೆ.ಎಸ್.ಸದಾನಂದ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪೀಪಲ್ಸ್ ಫೋರಂ ಸಂಚಾಲಕ ಧರ್ಮಪ್ರಸಾದ್, ಪ್ರಮುಖರಾದ ಎ.ಜೆ.ರಾಮಚಂದ್ರ, ಡಾ. ರವಿಕಿರಣ್ ಮುಂತಾದವರಿದ್ದರು.