More

  ಸಮಸ್ಯೆ ಯಾರಿಗೆ ಇರುವುದಿಲ್ಲ ಹೇಳಿ?ಆದರೂ ಜೀವನ ನಿತ್ಯ ನೂತನ

  ಡಾ. ಗಣಪತಿ ಆರ್ ಭಟ್

  ಅದೊಂದು ತುಂಬಿದ ಮನೆ. ಗಂಡ-ಹೆಂಡತಿ, ಮಕ್ಕಳು, ಸೊಸೆಯಂದಿರು ಎಲ್ಲರೂ ಒಟ್ಟಿಗೆ ಬಾಳ್ವೆ ಮಾಡುತ್ತಿದ್ದ ಅಪರೂಪವೆನಿಸುವ ಕುಟುಂಬ. ಅರವತ್ತರ ಆಸುಪಾಸಿನಲ್ಲಿದ್ದ ರಾಯರು ಆ ಮನೆಯ ಯಜಮಾನರು. ಅದೊಂದು ದಿನ ಇದ್ದಕ್ಕಿದ್ದಂತೆ ರಾಯರಿಗೆ ಆರೋಗ್ಯದಲ್ಲಿ ವ್ಯತ್ಯಯವಾಗಿ ಬದುಕಿನ ಜಂಘಾಬಲವೇ ಉಡುಗಿ ಹೋದಂತಾಯಿತು. ಸರಿಯಾದ ಚಿಕಿತ್ಸೆ ಪಡೆದು ಗುಣಮುಖರಾದರೂ, ಪ್ರತಿನಿತ್ಯ ತಾನು ಸಾವಿನ ಮನೆಗೆ ನೂಕಲ್ಪಡುತ್ತಿದ್ದೇನೆನೋ ಎಂಬಂತೆ ಅವರಿಗೆ ಅನಿಸುತ್ತಿತ್ತು. ಸದಾ ಜಾಗರೂಕರಾಗಿರಿ ಎಂಬ ವೈದ್ಯರ ಹಿತನುಡಿ ಅವರಿಗೆ ಚುಚ್ಚುಮದ್ದಿನಂತಾಗಿತ್ತು. ಮನೆಯವರೊಂದಿಗೆ ಬೆರೆಯಲು ಅವರಿಗೆ ಅಷ್ಟಾಗಿ ಮನಸಾಗುತ್ತಿರಲಿಲ್ಲ. ದಿನದಿಂದ ದಿನಕ್ಕೆ ಖಿನ್ನರಾಗತೊಡಗಿದರು. ಬದುಕಿನಲ್ಲಿ ಸ್ಪೂರ್ತಿಯು ಹೀಗೆಯೇ ಬರಬೇಕೆಂಬ ನಿಯಮವಿಲ್ಲ. ಅದೊಂದು ದಿನ ಬೆಳಿಗ್ಗೆ ರಾಯರ ಗಮನವು ತಮ್ಮ ಮನೆಗೆ ನಿತ್ಯವೂ ಪತ್ರಿಕೆಯನ್ನು ಹಾಕುತ್ತಿದ್ದ ಹುಡುಗನ ಕಡೆಗೆ ಹೋಯಿತು. ಬಹುಶಃ ಈ ಹುಡುಗನ ಮನೆಯ ಆರ್ಥಿಕ ಪರಿಸ್ಥಿತಿಯೇ ಅವನಿಗೆ ಸಣ್ಣ ವಯಸ್ಸಿನಲ್ಲಿಯೇ ಉದರ ಪೋಷಣೆಯ ಜವಾಬ್ದಾರಿ ಹೋರುವಂತೆ ಮಾಡಿದೆ. ತಾನೂ ಎಷ್ಟೋ ಸಲ ಗಮನಿಸಿದ್ದೇನೆ. ಅಕ್ಕ-ಪಕ್ಕದ ಕೆಲ ಮನೆಯವರು ಒಂದಲ್ಲ ಒಂದು ರೀತಿಯಿಂದ ಸದಾ ಅವನ ಮೇಲೆ ಗೊಣಗಿಕೊಳ್ಳುತ್ತಾರೆ. ಆದರೆ ಈ ಹುಡುಗ ಅದ್ಯಾವುದನ್ನೂ ಲೆಕ್ಕಿಸದೆ ಸದಾ ಲವಲವಿಕೆಯಿಂದ ಇರುತ್ತಾನೆ. ಜೀವನ ಆಸ್ವಾದಿಸುವುದೆಂದರೆ ಹೀಗೇ ಅಲ್ಲವೇ? ಯೋಚನಾ ಲಹರಿ ಹರಿಯುತ್ತಲೇ ರಾಯರಿಗೆ ತಮ್ಮ ಬದುಕಿನ ಬಗ್ಗೆ ಹೊಸ ಭರವಸೆ ಮೂಡಿತು.

  ಸಮಸ್ಯೆ ಯಾರಿಗೆ ಇರುವುದಿಲ್ಲ ಹೇಳಿ? ಇತರರ ಕಷ್ಟ ಕಾರ್ಪಣ್ಯಗಳ ಕಡೆಗೆ ನಮ್ಮ ಕಿವಿಯೊಡ್ಡಿದರೆ ನಮಗಿರುವ ತೊಂದರೆಗಳೆಲ್ಲವೂ ಸಣ್ಣವೆನಿಸಿದರೂ ಅಚ್ಚರಿಯಿಲ್ಲ. ಪ್ರತಿ ಸಮಸ್ಯೆಗಳಿಗೂ ಒಂದು ಅಂತ್ಯ ಇದ್ದೇ ಇರುವುದೆಂಬ ಭರವಸೆಯೊಂದಿಗೆ ಜೀವನವನ್ನು ಮುನ್ನಡೆಸಬೇಕು. ದೇವಕಿಯನ್ನು ಮದುವೆಯಾದ ವಸುದೇವನ ದಾಂಪತ್ಯ ಅಂದೇ ಅಂತ್ಯವಾಗುವುದರಲ್ಲಿತ್ತು. ಕಂಸನಿಗೆ ಅಶರೀರವಾಣಿಯಾಗಿ, ಆ ಕ್ಷಣವೇ ಆತ ತನ್ನ ತಂಗಿ ದೇವಕಿಯನ್ನು ಕೊಲ್ಲಲು ಮುಂದಾದ. ಆದರೆ ಕಂಸನಿಗೆ ಕಂಟಕವಿರುವುದು ದೇವಕಿಯ ಮಕ್ಕಳಿಂದಲೇ ಹೊರತು ದೇವಕಿಯಿಂದಲ್ಲ ಎಂಬುದನ್ನು ಅವನಿಗೆ ಅರಿವು ಮಾಡಿಸಿ, ಹುಟ್ಟಿದ ಎಲ್ಲ ಮಕ್ಕಳನ್ನು ಅವನಿಗೆ ತಂದೊಪ್ಪಿಸುತ್ತೇನೆ ಎಂಬ ಭರವಸೆಯನ್ನು ನೀಡಿ ವಸುದೇವನು ಹೇಗೋ ಬದುಕುವ ಒಂದು ಅವಕಾಶವನ್ನು ಪಡೆದುಕೊಂಡ. ಬದುಕಲು ಒಂದು ಮಾರ್ಗವನ್ನು ನಾವು ಕಂಡುಕೊಂಡರೆ ಮುಂದೆ ಬದುಕೇ ನಮಗೆ ಮುನ್ನಡೆಯಲು ಸಾವಿರಾರು ಅವಕಾಶಗಳನ್ನು ನೀಡುತ್ತದೆ. ಪ್ರತಿ ಸಲ ದೇವಕಿಯು ಮಗುವಿಗೆ ಜನ್ಮ ನೀಡಿದಾಗಲೂ ಒಂದಿಲ್ಲೊಂದು ದಿನ ತಮ್ಮ ಸಮಸ್ಯೆಗೆ ಭಗವಂತ ರ್ತಾಕ ಅಂತ್ಯ ಹಾಡುತ್ತಾನೆ ಎಂಬ ಭರವಸೆಯೊಂದಿಗೆ ವಸುದೇವನು ಮಗುವನ್ನು ಕಂಸನಿಗೆ ಒಪ್ಪಿಸುತ್ತಿದ್ದ. ಅವನು ಇಟ್ಟ ಭರವಸೆ ಹುಸಿಯಾಗಲಿಲ್ಲ. ದೇವಕಿಯ ಎಂಟನೇ ಗರ್ಭದಲ್ಲಿ ಭಗವಂತನೇ ಕೃಷ್ಣನ ರೂಪದಲ್ಲಿ ಅವತರಿಸಿದ. ಕಾಲಾಂತರದಲ್ಲಿ ಕೃಷ್ಣನು ಕಂಸನನ್ನು ಕೊಂದು ಎಲ್ಲವೂ ಸುಖಾಂತ್ಯವಾಯಿತು.

  ಬದುಕನ್ನು ಬಂಗಾರವಾಗಿ ಪರಿವರ್ತಿಸಿಕೊಳ್ಳುವ ಅನೇಕ ಅವಕಾಶಗಳು ನಮಗೆ ಬರುತ್ತಲೇ ಇರುತ್ತವೆ. ಸಕಾರಾತ್ಮಕ ಚಿಂತನೆಯಿದ್ದಾಗಲೇ ಅವು ನಮಗೆ ಕಾಣಿಸುವವು. ಪ್ರತಿ ಬೆಳಗೂ ಕೂಡ ನಮಗೆ ಜೀವನದ ಹೊಸತೊಂದು ಮಾರ್ಗವನ್ನು ತೋರುತ್ತಿರುತ್ತದೆ. ದೃತಿಗೆಡದೆ ನಾಳಿನ ಮೇಲೆ ಭರವಸೆಯನ್ನು ಇರಿಸಿ ಮುನ್ನಡೆದರೆ ನಮ್ಮ ಬದುಕು ನಿತ್ಯವೂ ಹೊಸದಾಗಿ ಕಾಣುವುದು ಸುಳ್ಳಲ್ಲ.

  (ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts