ಬದುಕು ಪರೀಕ್ಷೆಗಿಂತ ದೊಡ್ಡದು

ಮಕ್ಕಳನ್ನು ಪ್ರೀತಿ ಮತ್ತು ಎಚ್ಚರಿಕೆಯಿಂದ ಪಾಲಿಸಿ. ಪರೀಕ್ಷೆ ಜ್ವರದಿಂದ ಸಂರಕ್ಷಿಸಿ. ಪರೀಕ್ಷೆ ಎನ್ನುವುದು ಒಂದು ಘಟ್ಟ ಎನ್ನುವ ಭಾವನೆ. ಇದರಲ್ಲಿ ಯಶಸ್ವಿಯಾದರೆ ಮುಂದಿನ ಮಾರ್ಗ ಸರಾಗವಾಗಿ ಬಿಡುತ್ತದೆ. ವ್ಯಕ್ತಿಯ

ಸಾಮರ್ಥ್ಯದ ಅಳತೆಗೋಲು ಅಂದರೆ ಕೇವಲ ಪರೀಕ್ಷೆ ಎನ್ನುವ ಭ್ರಮೆ. ಹಾಗಾಗಿ ಪರೀಕ್ಷೆ ಎನ್ನುವುದು ಮಾನಸಿಕವಾಗಿ ಹೆಚ್ಚು ಒತ್ತಡ ನಿರ್ಮಾಣ ಮಾಡುತ್ತಿರುವ ಒಂದು ಸನ್ನಿವೇಶವಾಗಿದೆ. ನಮ್ಮ ರಾಜ್ಯದಲ್ಲಿ ದಿನಕ್ಕೆ ಒಂದು ಮಗು ಶೈಕ್ಷಣಿಕ ಒತ್ತಡ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತದೆ, ಅಂದರೆ ಶೈಕ್ಷಣಿಕ ಒತ್ತಡದ ಆಳ ಮತ್ತು ವಿಸ್ತಾರ ಅರಿವಿಗೆ ಬರಬಹುದು. ಸಾವಿರಾರು ಮಕ್ಕಳು ಖಿನ್ನತೆ, ಸಮಾಜಘಾತುಕತೆ ಮತ್ತು ದುರ್ವ್ಯಸನದಂತಹ ಸಂಕಷ್ಟಕ್ಕೆ ಒಳಗಾಗುವುದು ಕೂಡ ಶೈಕ್ಷಣಿಕ ಒತ್ತಡದ ಕಾರಣದಿಂದಲೇ ಎಂದು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ.

ಪರೀಕ್ಷೆಗಳು ಬರುತ್ತವೆ, ಹೋಗುತ್ತವೆ. ಜೀವನ ಸಿಗುವುದು ಒಮ್ಮೆ ಮಾತ್ರ. ಯಶಸ್ವಿಯಾಗಿ, ಅರ್ಥಪೂರ್ಣವಾಗಿ ಜೀವನ ನಿರ್ವಹಿಸಲು ವಿದ್ಯಾಭ್ಯಾಸ ಮತ್ತು ಪರೀಕ್ಷೆಗಳ ಅಗತ್ಯವಿದೆಯೇ ಹೊರತು ಕೇವಲ ಶಿಕ್ಷಣಕ್ಕಾಗಿ ಬದುಕಲ್ಲ, ಶಿಕ್ಷಣವೇ ಬದುಕು ಅಲ್ಲ.

ಬದುಕುವ ಹಕ್ಕು ಮತ್ತು ಸಾಮರ್ಥ್ಯ ಪ್ರಕೃತಿದತ್ತ ಕೊಡುಗೆಯಾಗಿದೆ. ಇದು ಎಲ್ಲ ಜೀವಜಂತುಗಳಲ್ಲಿ ಸಹಜವಾಗಿಯೇ ಇರುವಂತಹ ತಾಕತ್ತು. ಇದನ್ನು ‘ಇನ್​ಸ್ಟಿಂಕ್ಟ್ ಆಫ್ ಸರ್ವೆವಲ್’ ಎಂದು ಹೇಳುತ್ತಾರೆ. ಅಂದರೆ, ಪ್ರತಿಯೊಂದು ಪ್ರಾಣಿ ಪಕ್ಷಿ ಸಹಜವಾಗಿಯೇ ಬದುಕಲು ಕಲಿತಿರುತ್ತವೆ. ಅದಕ್ಕೆ ಯಾವ ವಿಶ್ವವಿದ್ಯಾಲಯದ ಪದವಿ, ಉದ್ಯೋಗದ ಅಗತ್ಯವಿರುವುದಿಲ್ಲ. ಅದೇ ಪ್ರಾಣಿಯನ್ನು ಮಾನವನ ಹಿಡಿತಕ್ಕೆ ಒಳಪಡಿಸಿ ನಿರ್ದೇಶನ ಕೊಡುತ್ತಲೇ ಇದ್ದರೆ ತನ್ನ ಸ್ವಾಭಾವಿಕ ಸಾಮರ್ಥ್ಯ ಮರೆತು ಪರಾವಲಂಬಿ ಆಗುತ್ತದೆ. ಅದೇ ರೀತಿ, ಮನುಷ್ಯನಲ್ಲಿ ಸಹಜವಾಗಿ ಬದುಕುವ ಸಾಮರ್ಥ್ಯ ಅಪಾರವಾಗಿ ತುಂಬಿದೆ. ಆಧುನಿಕ ಸಮಾಜದಲ್ಲಿ ಶಿಕ್ಷಣದ ಹೆಸರಿನಲ್ಲಿ ಇಂತಹ ಸಾಮರ್ಥ್ಯವನ್ನು ನಾವು ಧಕ್ಕೆ ಮಾಡುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳುವ ವಾತಾವರಣ ನಿರ್ವಣವಾಗುತ್ತಿದೆ. ಪರೀಕ್ಷೆ, ಫಲಿತಾಂಶ, ಇದರ ಜೊತೆ ಶಿಕ್ಷಕರು, ಪಾಲಕರು, ಇತರರ ಮಾತುಗಳಲ್ಲಿ ವ್ಯಕ್ತವಾಗುವ ಅವಮಾನ, ತಿರಸ್ಕಾರ, ನಿಂದನೆಗಳನ್ನು ಎದುರಿಸಲಾಗದೆ ಅನೇಕ ಮಕ್ಕಳ ಆತ್ಮಹತ್ಯೆಯಂತಹ ಕಟುನಿರ್ಧಾರ ತೆಗೆದುಕೊಳ್ಳುತ್ತಿರುವುದನ್ನು ನೋಡಿದಾಗ ಇಂತಹ ಪ್ರಶ್ನೆಗಳನ್ನು ಹುಟ್ಟಿಕೊಳ್ಳುತ್ತಿವೆ.

ಇಂತಹ ಸಾಮಾಜಿಕ ಕೆಡುಕುಗಳನ್ನು ನಿವಾರಿಸಬೇಕೆಂದರೆ ಶಿಕ್ಷಕರು, ಪಾಲಕರು ಎಚ್ಚೆತ್ತುಕೊಂಡು ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ.

ಪರೀಕ್ಷಾ ಸಮಯದಲ್ಲಿ ಪಾಲಿಸಬೇಕಾದ ಕೆಲವು ಎಚ್ಚರಿಕೆಗಳು, ನಿರ್ವಹಣಾ ಕ್ರಮಗಳು, ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಸೂತ್ರ 1: ಅತಿಯಾದ ಒತ್ತಡದಲ್ಲಿ ಸಾಮರ್ಥ್ಯ ಕುಗ್ಗುತ್ತದೆ. ಹಿಂದಿನ ಪರೀಕ್ಷೆಗಳಲ್ಲಿ ಎಷ್ಟೇ ಚೆನ್ನಾಗಿ ಮಾಡಿದ್ದರೂ ಮುಂದಿನ ಪರೀಕ್ಷೆ ಎದುರಿಸುವಾಗ ಮನಸ್ಸಿನಲ್ಲಿ ಅತಿಯಾದ ಭಯ, ಆತಂಕ, ನಿರೀಕ್ಷೆಗಳು ತುಂಬಿದ್ದಲ್ಲಿ ಸರಳ ವಿಚಾರಗಳು ಕೂಡ ಗೊಂದಲವಾಗಿ ಪರಿವರ್ತನೆಗೊಳ್ಳಬಹುದು.

ಹಾಗಾಗಿ, ಪರೀಕ್ಷೆಗೆ ಮೊದಲು ಮನಸ್ಸಿನಲ್ಲಿ ಶಕ್ತಿ ಮತ್ತು ಉತ್ಸಾಹವನ್ನು ಹುರಿದುಂಬಿಸುವ ಅಗತ್ಯ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.

ಸೂತ್ರ 2: ಮಕ್ಕಳಿಗೆ ಸಮಯ ಕೊಡಿ. ನಿಮ್ಮ ಮಕ್ಕಳ ಅನುಕೂಲಕ್ಕೆ ತಕ್ಕಂತೆ, ಮನಸ್ಸನ್ನು ಅರಿತು ಅವರ ಜತೆಯಲ್ಲಿ ಇದ್ದೀರಿ ಎನ್ನುವ ಭರವಸೆಯನ್ನು ತುಂಬಿಸಿ. ಅತಿಯಾದ ಭಯ, ಆತಂಕ ಸ್ವಭಾವದ ಮಕ್ಕಳಾಗಿದ್ದಲ್ಲಿ ‘ತುಂಬ ಬಿಜಿ ಇದ್ದೇನೆ, ಸಮಯವಿಲ್ಲ’ ಎನ್ನುವ ಅಭಿಪ್ರಾಯವನ್ನು ಕೊಡಬೇಡಿ. ಮಕ್ಕಳು ಓದುತ್ತಿರುವ ಕೊಠಡಿಯಲ್ಲಿ ನೀವು ಕೂಡ ಯಾವುದಾದರೂ ಪುಸ್ತಕ ಓದುತ್ತ, ಏಕಾಗ್ರತೆ ಅಗತ್ಯವಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಲ್ಲಿ ಮಕ್ಕಳಿಗೆ ಓದಲು ಉತ್ಸಾಹ ಹೆಚ್ಚುತ್ತದೆ. ಅಕಸ್ಮಾತಾಗಿ ಮನಸ್ಸಿನಲ್ಲಿ ಆತಂಕ ಉದ್ಭವವಾದಾಗ ಹಂಚಿಕೊಳ್ಳಲು ಜತೆಯಲ್ಲಿ ನೀವಿರುವ ಭರವಸೆ ದೊರೆಯುತ್ತದೆ.

ಸೂತ್ರ 3: ನಿದ್ರೆ, ಆಹಾರ ಸರಿಯಾಗಿ ನಿರ್ವಹಿಸಿ. ಶರೀರ ಮತ್ತು ಮನಸ್ಸು ಯಶಸ್ವಿಯಾಗಿ ಕೆಲಸ ಮಾಡಬೇಕೆಂದರೆ ಸೂಕ್ತವಾದ ಆಹಾರ, ವಿಶ್ರಾಂತಿ ಅಗತ್ಯ. ಸಕಾಲದಲ್ಲಿ ಪ್ರೀತಿ, ಸಹನೆ, ಸಮಾಧಾನ, ತಾಳ್ಮೆಯಿಂದ ಆಹಾರ ಪೂರೈಕೆ ಮಾಡಿ. ಯಾವ ಕಾರಣಕ್ಕೂ ಸಿಡಿಮಿಡಿಗೊಂಡು ಮಾತನಾಡಬೇಡಿ.

ಸೂತ್ರ 4: ಏಕಾಗ್ರತೆಗೆ ಧಕ್ಕೆಯಾಗುವಂತಹ ಎಲ್ಲವನ್ನೂ ದೂರ ಇಡಿ. ಟಿವಿ, ಮೊಬೈಲ್, ಕಂಪ್ಯೂಟರ್ ಇವುಗಳಿಗೆ ಸಮಯ, ಸ್ಥಳ ನಿಗದಿಪಡಿಸಿ. ಎಲ್ಲ ಸಮಯದಲ್ಲಿಯೂ ಲಭ್ಯವಾಗದಂತೆ ನೋಡಿಕೊಳ್ಳಿ. ಪಾಲಕರು ಕೂಡ ಇವುಗಳನ್ನು ದೂರ ಇಟ್ಟಲ್ಲಿ, ಮಕ್ಕಳಿಗೂ ಅನುಕೂಲವಾಗುತ್ತದೆ.

ಸೂತ್ರ 5: ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಕಾರ ಕೊಡಿ. ಎಲ್ಲ ಮಕ್ಕಳಲ್ಲಿಯೂ ಒಂದೇ ತರಹದ ಕಲಿಯುವಿಕೆ ಸಾಧ್ಯವಿರುವುದಿಲ್ಲ. ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಅವರು ಕೆಲಸ ಮಾಡಲು ಸಾಧ್ಯ. ಹಾಗಾಗಿ ಕಲಿಯುವಿಕೆಯ ಸಾಮರ್ಥ್ಯ ಕಮ್ಮಿ ಇದ್ದಲ್ಲಿ ಅತಿಯಾಗಿ ಒತ್ತಾಯದಿಂದ ಓದಿಸಲು ಸಾಧ್ಯವಿಲ್ಲ ಎನ್ನುವ ಅರಿವು ಇರಲಿ. ನೀವು ಅಂದುಕೊಂಡ ಅವರ ಸಾಮರ್ಥ್ಯಕ್ಕೂ ವಾಸ್ತವಿಕತೆಗೂ ವ್ಯತ್ಯಾಸವಿರಬಹುದು, ಎಚ್ಚರಿಕೆ ಇರಲಿ.

ಸೂತ್ರ 6: ತಜ್ಞರ ಸಹಾಯದ ಅಗತ್ಯವಿದೆಯೇ ಎಂದು ಗಮನಿಸಿ. ಪಾಲಕರ ಅವಿರತ ಪ್ರಯತ್ನ ಇದ್ದರೂ ಕೂಡ ಮಕ್ಕಳಲ್ಲಿ ಏಕಾಂಗಿತನ, ಖಿನ್ನತೆ, ತಪ್ಪಿಸಿಕೊಂಡು ಹೋಗುವ ಪ್ರವೃತ್ತಿ ಅಥವಾ ಬೇರೆ ಯಾವುದಾದರೂ ಭಾವನೆಗಳು ಇರುತ್ತವೆ. ಅವುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನಿಸಿದಾಗ ಅಥವಾ ನೀವು ಹೇಳುತ್ತಿರುವುದು ಅವರಿಗೆ ತಲುಪುತ್ತಿಲ್ಲ, ಮಧ್ಯದಲ್ಲಿ ದೊಡ್ಡ ಕಂದರವೇ ಏರ್ಪಡುತ್ತಿದೆ ಎನ್ನಿಸಿದಾಗ ನಿಸ್ಸಂಕೋಚದಿಂದ ಸಹಾಯ ಪಡೆದುಕೊಳ್ಳಿ. ಯಾವ ಕಾರಣಕ್ಕೂ ನಿರ್ಲಕ್ಷಿಸಬೇಡಿ. ತಜ್ಞರ ಸಹಾಯ ನಿಮ್ಮ ಮನಸ್ಸಿಗೆ ಮಾರ್ಗದರ್ಶನ ಮತ್ತು ತಾಕತ್ತನ್ನು ಕೊಡಬಲ್ಲದು. ಸಮಸ್ಯೆಯಿದ್ದಾಗ ಅದನ್ನು ಎದುರಿಸಿ ನಿರ್ವಹಿಸುವುದು ಹೆಚ್ಚು ಸೂಕ್ತ.

ಸೂತ್ರ 7: ಆತ್ಮವಿಶ್ವಾಸವನ್ನು ಜೀವಂತವಾಗಿಡಿ. ‘ನಿನ್ನ ಜೀವನವನ್ನು ನೀನು ಉತ್ತಮವಾಗಿ ನಿರ್ವಹಿಸಬಲ್ಲೆ ಎನ್ನುವ ವಿಶ್ವಾಸ ನನ್ನಲ್ಲಿದೆ’ ಎಂದು ಅವರಲ್ಲಿ ಪದೇ ಪದೆ ಆತ್ಮವಿಶ್ವಾಸ ತುಂಬಿಸಿ. ನಿಮ್ಮಲ್ಲೂ ಅದೇ ಭರವಸೆಯನ್ನು ಇಟ್ಟುಕೊಂಡಿರಿ. ನಿಜವಾದ ಬದುಕು ಶುರುವಾಗುವುದೇ 20ರ ನಂತರ. ಆಗ ಅವರ ಮನಸ್ಸಿನಲ್ಲಿ ಬರುವ ಪ್ರಬುದ್ಧತೆ, ಸ್ಪಷ್ಟತೆ ಅವರಿಗೆ ಬದುಕಿನ ದಾರಿ ತೋರಬಲ್ಲದು. ಆ ಸಮಯದಲ್ಲಿ ಲಭ್ಯವಾಗಿರುವಂತೆ ಆತ್ಮವಿಶ್ವಾಸವನ್ನು ಜೀವಂತವಾಗಿಡುವುದು ನಮ್ಮೆಲ್ಲರ ಕರ್ತವ್ಯ. ಪ್ರಕೃತಿಯ ನಿಯಮಕ್ಕೆ ಅನುಗುಣವಾಗಿ ಪ್ರತಿಯೊಬ್ಬರ ಬದುಕೂ ತನ್ನದೇ ಆದ ದಾರಿ ಕಂಡುಕೊಳ್ಳುತ್ತದೆ.

ಸೂತ್ರ 8: ವಿಶ್ವಚೇತನದಲ್ಲಿ ನಂಬಿಕೆ ಮತ್ತು ಭರವಸೆ ಇಡಿ. ಮಕ್ಕಳಿಗೆ ಅವರದೇ ವಿಧಾನದಲ್ಲಿ ಪ್ರಾರ್ಥನೆ, ಜಪ, ಪೂಜೆ, ಧ್ಯಾನ, ಪ್ರಕೃತಿಯ ಆರಾಧನೆಯಂತಹ ಆಂತರಿಕ ಸಾಧನೆಯನ್ನು ಕೊಡಿ. ಎಲ್ಲವೂ ಮನುಷ್ಯನ ಇತಿಮಿತಿಯೊಳಗೆ ಇಲ್ಲ. ಅದರ ಆಚೆ ಪ್ರಕೃತಿಯ ನಿಯಮದ ಪ್ರಭಾವವೂ ನಮ್ಮ ಜೀವನವನ್ನು ನಿರ್ಧರಿಸುತ್ತದೆ. ಅಹಂಕಾರ ಬದಿಗಿಟ್ಟು ಪ್ರಕೃತಿಯಿಂದ ಸಹಾಯ ಕೇಳುವ ವಿಧೇಯತೆ ಕಲಿಸಿ.

ಸೂತ್ರ 9: ಉನ್ನತಿ ನಿಮ್ಮೊಂದಿಗಿದೆ. ಸಮಾಜದ ಜವಾಬ್ದಾರಿ ನಮ್ಮೆಲ್ಲರದೂ ಆಗಿದೆ. ಹೇಗೆ ಶರೀರಕ್ಕೆ ತೊಂದರೆಯಾದಾಗ ಔಷಧ, ಚಿಕಿತ್ಸೆ ನೀಡುತ್ತೇವೆಯೋ ಹಾಗೆ ಮನಸ್ಸಿನಲ್ಲಿ, ಬಾಂಧವ್ಯದಲ್ಲಿ, ದೃಷ್ಟಿಕೋನಗಳಲ್ಲಿ, ವಿಚಾರಗಳಲ್ಲಿ ನಿರ್ವಹಿಸಲಾಗದ ಸಂಘರ್ಷಗಳು ಏರ್ಪಟ್ಟಲ್ಲಿ ತಜ್ಞರ ಸಹಾಯ ಪಡೆದು ನಿರ್ವಹಿಸಿಕೊಳ್ಳುವುದು ಜಾಣತನ. ನಾವೆಲ್ಲರೂ ಸಮಾಜ ಎನ್ನುವ ಕುಟುಂಬದ ಸಹಸದಸ್ಯರಾಗಿದ್ದೇವೆ. ಮನೆಮನೆಯಲ್ಲಿಯೂ ಸಮಾನ ವಯಸ್ಸಿನ ಮಕ್ಕಳು ಗುಂಪುಗುಂಪಾಗಿ ಕಲಿಯುತ್ತಿದ್ದಾಗ ಇಂತಹ ಅಗತ್ಯ ಇರಲಿಲ್ಲ. ಆಧುನಿಕ ಸಮಾಜದ ಕೊಡುಗೆಯಾಗಿ ಮಕ್ಕಳು ಒಬ್ಬೊಬ್ಬರೇ ಏಕಾಂಗಿಯಾಗಿ ತಮ್ಮ ದಾರಿಯನ್ನು ಕಂಡುಕೊಳ್ಳುವ ಸ್ಥಿತಿ ನಿರ್ವಣವಾಗಿದೆ. ನಮ್ಮ ಬಾಲ್ಯಕ್ಕೆ ಹೋಲಿಸಿಕೊಳ್ಳದೆ, ಈಗಿನ ಮಕ್ಕಳ ಸಮಸ್ಯೆ ಅರಿತು ಸಹಕರಿಸೋಣ, ಸ್ಪಂದಿಸೋಣ.