ಬೆಂಗಳೂರು: ಹಣಕ್ಕಾಗಿ ಗೃಹಿಣಿಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿ ಜೀವಾವಧಿ ಶಿಕ್ಷೆ ವಿಧಿಸಿ 71ನೇ ಅಧಿಕ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ಬಾಲಚಂದ್ರ ಎನ್. ಭಟ್ ತೀರ್ಪು ಪ್ರಕಟಿಸಿದ್ದಾರೆ.
ಜ್ಞಾನಜ್ಯೋತಿನಗರದ ಮಾಯಣ್ಣ ಕಾಂಪೌಂಡ್‌ನ ವಠಾರದಲ್ಲಿ ನೆಲೆಸಿದ್ದ ರಾಜಶೇಖರ್ ಶಿಕ್ಷೆಗೆ ಒಳಗಾದ ಅಪರಾಧಿ. ಪ್ರಕರಣದ ಮತ್ತೋರ್ವ ಇಂದಿರಮ್ಮ ಈಗಾಗಲೇ ಮೃತಪಟ್ಟಿದ್ದು, ಕೋರ್ಟ್ ರಾಜಶೇಖರ್ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2021ರಲ್ಲಿ ರಂಜಿತಾ (26) ಎಂಬಾಕೆಯನ್ನು ಈ ಇಬ್ಬರು ಕೊಲೆ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಾಲಚಂದ್ರ ಎನ್. ಭಟ್, ಅಪರಾಧಿಗೆ ಜೀವಾವಧಿ ಶಿಕ್ಷೆ, 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಎಚ್.ಆರ್.ಸತ್ಯವತಿ ವಾದ ಮಂಡಿಸಿದ್ದರು.
ಜ್ಞಾನಜ್ಯೋತಿನಗರದ ಮಾಯಣ್ಣ ಕಾಂಪೌಂಡ್‌ನ ವಠಾರದಲ್ಲಿ ರಂಜಿತಾ ಎಂಬಾಕೆ ತನ್ನ ಕುಟುಂಬದ ಜತೆಗೆ ನೆಲೆಸಿದ್ದರು. ಇದೇ ಕಟ್ಟಡದಲ್ಲಿ ನೆಲೆಸಿದ್ದ ಇಂದಿರಮ್ಮ ಮನೆಗೆ ರಾಜಶೇಖರ್ ಬಂದು ಹೋಗುತ್ತಿದ್ದ. ಕೋವಿಡ್-19 ಲಾಕ್‌ಡೌನ್‌ನಿಂದ ಅಪರಾಧಿಗಳು ಹಣದ ತೊಂದರೆಗೆ ಒಳಗಾಗಿದ್ದರು. ಆದರಿಂದ ರಂಜಿತಾ ಬಳಿ ಮೊದಲು ಹಣ ಕೇಳೋಣ ಕೊಡದಿದ್ದರೇ ಕೊಲೆ ಮಾಡಿ ಚಿನ್ನಾಭರಣ, ನಗದು ದೋಚಬೇಕೆಂದು ಸಂಚುರೂಪಿಸಿದ್ದರು. ಅದರಂತೆ 2021ರ ಜುಲೈ 10ರ ಬೆಳಗ್ಗೆ 9.30ರಲ್ಲಿ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ರಂಜಿತಾ ಮನೆಗೆ ಹೋಗಿದ್ದ ಅಪರಾಧಿಗಳು ಹಣ ಕೇಳಿದ್ದಾರೆ.
ಇಲ್ಲವೆಂದು ಹೇಳಿದಾಗ ಟಿವಿ ಸೌಂಡ್‌ನ್ನು ಹೆಚ್ಚು ಮಾಡಿ ಆಕೆಯ ಕತ್ತು ಹಿಸುಕಿ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಬಳಿಕ ಆಕೆ ಮೈಮೇಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಜ್ಞಾನಭಾರತಿ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿತ್ತು. ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.