ಕತ್ತಲೆಯಲ್ಲಿ ಜೀವನ ನಿರ್ವಹಣೆ

  • ಬೇಲೂರು: ಬಿಕ್ಕೋಡು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ವಿದ್ಯುತ್ ಸರಬರಾಜು ಸ್ಥಗಿತಗೊಂಡು, ಜನರು ಕತ್ತಲೆಯಲ್ಲಿ ಜೀವನ ಕಳೆಯುವಂತಾಗಿದೆ.
  • ಮಲೆನಾಡು ಭಾಗದ ಗ್ರಾಮಗಳಲ್ಲಿ ಗಾಳಿ, ಮಳೆಯಿಂದ ವಿದ್ಯುತ್ ಕೈಕೊಟ್ಟ ಕಾರಣ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಜನರ ಗೋಳು ಹೇಳತೀರದಾಗಿದೆ. ರಸ್ತೆ ಬದಿಯ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಈ ಭಾಗದಲ್ಲಿ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ.
  • ಬಿಕ್ಕೋಡು ಗ್ರಾಮದ ಪೆಟ್ರೋಲ್ ಬಂಕ್ ಸಮೀಪ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಕಂಬಗಳು ಮುರಿದು ಹೋಗಿದ್ದರೆ, ಪಕ್ಕದ ಹುಸ್ಕೂರು ಗ್ರಾಮದಲ್ಲಿ 6ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
  • ಅದರಲ್ಲೂ ಹುಸ್ಕೂರು, ಚಿಕ್ಕಬಿಕ್ಕೋಡು, ಚೌಕನಹಳ್ಳಿ, ನಿಡುಮನಹಳ್ಳಿ, ಹೊನ್ನೆಮನೆ, ಬಾಳಿಗನಹಳ್ಳಿ, ಚಳ್ಳೇನಹಳ್ಳಿ ಗ್ರಾಮಗಳಿಗೆ ಎರಡು ದಿನದಿಂದ ವಿದ್ಯುತ್ ಸರಬರಾಜು ಸಂಪೂರ್ಣ ಬಂದ್ ಆಗಿರುವುದರಿಂದ ಜನರು ಕುಡಿಯುವ ನೀರು ಪಡೆಯಲು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿದೆ.

ಅಕಾಲಿಕ ಗಾಳಿ, ಮಳೆಯಿಂದ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ಬಿಕ್ಕೋಡು, ಕೆಸಗೋಡು, ಕುಶಾವರ, ಲಕ್ಕುಂದ, ಕೋಗಿಲೆಮನೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಅಲ್ಲಲ್ಲಿ ಮರ ಬಿದ್ದ ಕಾರಣ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸೆಸ್ಕ್ ಸಿಬ್ಬಂದಿ ಈಗಾಗಲೇ ವಿದ್ಯುತ್ ಸರಬರಾಜಿಗಾಗಿ ಕೆಲಸ ನಿರ್ವಹಿಸುತ್ತಿದ್ದು, ಶೀಘ್ರ ಸಮಸ್ಯೆ ಸರಿಪಡಿಸಲಾಗುವುದು.
ರಾಘವೇಂದ್ರ, ಜೆಇ, ಸೆಸ್ಕ್