More

    ಹೊಸದಾಗಿ ಇಂಡಿಪೆಂಡೆಂಟ್ ಪಬ್ ಆರಂಭಿಸಲು ಲೈಸೆನ್ಸ್!: ಆದಾಯ ಹೆಚ್ಚಿಸಲು ಸರ್ಕಾರ ಕ್ರಮ; ಪ್ರಕ್ರಿಯೆ ಶುರುಮಾಡಿದ ಅಬಕಾರಿ ಇಲಾಖೆ

    | ಹರೀಶ್ ಬೇಲೂರು ಬೆಂಗಳೂರು 
    ರಾಜ್ಯದಲ್ಲಿ ಹೊಸದಾಗಿ ಇನ್ನಷ್ಟು ರಿಟೇಲ್ ವೆಂಡ್ ಆಫ್ ಬಿಯರ್ (ಆರ್​ವಿಬಿ) ಅಥವಾ ಪಬ್ ಆರಂಭಿಸಲು ಪರವಾನಗಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳು ಅಬಕಾರಿ ಇಲಾಖೆಯಲ್ಲಿ ಈಗಾಗಲೆ ಶುರುವಾಗಿದೆ. ಇಂಡಿಪೆಂಡೆಂಟ್ ಪಬ್ ತೆರೆಯಲು 15 ವರ್ಷಗಳ ಹಿಂದೆ ಲೈಸೆನ್ಸ್ ಕೊಡುವುದನ್ನು ನಿಲ್ಲಿಸಲಾಗಿತ್ತು. ಮದ್ಯದಂಗಡಿ ಹೊಂದಿರುವ ಮಾಲೀಕರಿಗೆ ಮಾತ್ರ ಅಟ್ಯಾಚ್ಡ್ ಪಬ್ ತೆರೆಯುವುದಕ್ಕೆ ಲೈಸೆನ್ಸ್ ನೀಡಲಾಗುತ್ತಿತ್ತು. ಈಗ ಇಂಡಿಪೆಂಡೆಂಟ್ ಪಬ್​ಗೆ ಪರವಾನಗಿ ನೀಡುವುದಕ್ಕೆ ಅಬಕಾರಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ರಾಜ್ಯಾದ್ಯಂತ ಡ್ರಾಫ್ಟ್ ಮತ್ತು ಕೆಗ್ ಬಿಯರ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದಾಯ ಹೆಚ್ಚಿಸಲು ಇಲಾಖೆ ಆಲೋಚಿಸಿದ್ದು, ಬಾಟಲ್ ಬಿಯರ್​ಗೆ ಹೋಲಿಸಿದರೆ ಇದು ತಾಜಾವಾಗಿರಲಿದೆ. ಹೀಗಾಗಿ, ದೊಡ್ಡ ಸಂಖ್ಯೆಯಲ್ಲಿ ಪಬ್​ಗಳನ್ನು ತೆರೆಯಲು ಪರವಾನಗಿ ನೀಡಲು ಇಲಾಖೆ ಉತ್ಸುಕತೆ ಹೊಂದಿದೆ.

    ರಾಜ್ಯದಲ್ಲಿವೆ 1,532 ಪಬ್: ರಾಜ್ಯಾದ್ಯಂತ ಒಟ್ಟು 1,532 ಪಬ್​ಗಳಿವೆ. ಇದರಲ್ಲಿ ಶೇ.90 (942) ಬೆಂಗಳೂರಿನಲ್ಲಿವೆ. ಮೈಸೂರಿನಲ್ಲಿ 67 ಹಾಗೂ ದಕ್ಷಿಣ ಕನ್ನಡದಲ್ಲಿ 57 ಪಬ್​ಗಳಿವೆ. ಬೆಳಗಾವಿ ವಿಭಾಗದ ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ. ಕಲಬುರಗಿ ವಿಭಾಗದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಹಾಗೂ ಹೊಸಪೇಟೆ ವಿಭಾಗದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ ಹಾಗೂ ಕೊಪ್ಪಳ. ಮಂಗಳೂರು ವಿಭಾಗದ ಕೊಡಗು, ಶಿವಮೊಗ್ಗ , ಉತ್ತರ ಕನ್ನಡ ಹಾಗೂ ಮೈಸೂರು ವಿಭಾಗದ ಚಾಮರಾಜನಗರ, ಚಿಕ್ಕಮಗಳೂರು ಹಾಗೂ ಮಂಡ್ಯದಲ್ಲಿ ಪಬ್​ಗಳಿಲ್ಲ.

    ಅಕ್ರಮವಾಗಿ ಹಾಟ್ ಡ್ರಿಂಕ್ಸ್ ಸೇಲ್: ಪಬ್​ಗಳಲ್ಲಿ ಬಿಯರ್ ಮಾರಾಟಕ್ಕೆ ಮಾತ್ರ ಅವಕಾಶ ಇದೆ. ಆದರೆ ಕ್ಲಬ್ (ಸಿಎಲ್4), ಹೋಟೆಲ್ ಮತ್ತು ಗೃಹ (ಸಿಎಲ್7), ಸ್ಟಾರ್ ಹೋಟೆಲ್ (ಸಿಎಲ್6ಎ) ಹಾಗೂ ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9) ಹೊಂದಿರುವ ಸನ್ನದುದಾರರು ಆರಂಭಿಸುವ ಅಟ್ಯಾಚ್ಡ್ ಪಬ್​ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬಿಯರ್​ಗಳಿಗೆ ಬೇಡಿಕೆ ಕಡಿಮೆಯಿರುವ ಹಿನ್ನೆಲೆಯಲ್ಲಿ ಅಡ್ಡದಾರಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಸಂಬಂಧ ಪ್ರತಿ ವರ್ಷ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಳ್ಳಾಟವಾಡುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಹಿಂದೊಮ್ಮೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪಬ್​ಗಳ ಮೇಲೆ ದಾಳಿ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಇದೀಗ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕೇಸ್, ದಂಡ ವಿಧಿಸುತ್ತಿಲ್ಲ ಎಂದು ಇಲಾಖೆ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

    ಮಾದಕ ವಸ್ತುಗಳ ಘಮಲು?: ಮಾದಕ ವಸ್ತುಗಳ ಘಮಲು ಪಬ್​ಗಳಲ್ಲಿ ಹೆಚ್ಚಾಗುತ್ತಿದೆ. ಇವುಗಳು ಸುಲಭವಾಗಿ ಸಿಗುತ್ತಿರುವುದರಿಂದ ಯುವಜನತೆ ಡ್ರಗ್ಸ್ ಅಮಲಿಗೆ ಬಲಿಯಾಗುತ್ತಿದ್ದಾರೆ. ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು, ಪಬ್​ಗಳಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದಾರೆ. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರನಗರ, ರಿಚ್​ವುಂಡ್ ಸರ್ಕಲ್ ಮತ್ತು ಕೋರಮಂಗಲ ಸೇರಿ ಇತರ ಪ್ರದೇಶಗಳಲ್ಲಿರುವ ಪಬ್​ಗಳು ತಡರಾತ್ರಿವರೆಗೂ ತೆರೆದಿರು ವುದಕ್ಕೆ ಸ್ಥಳೀಯರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಅಬಕಾರಿ ನಿಯಮಗಳಿಗೆ ತಿದ್ದುಪಡಿ

    ರಾಜ್ಯದಲ್ಲಿ ಕಳ್ಳಭಟ್ಟಿ ಮತ್ತು ಮದ್ಯ ಮಾರಾಟದಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ನಾಯಿಕೊಡೆಗಳಂತೆ ಹೊಸ ಸಿಎಲ್7 (ಹೋಟೆಲ್ ಮತ್ತು ವಸತಿಗೃಹ) ಮದ್ಯದಂಗಡಿಗಳು ತಲೆಎತ್ತುತ್ತಿವೆ. ಈ ಮಧ್ಯೆ ಹೊಸದಾಗಿ ವೈನ್​ಶಾಪ್ (ಸಿಎಲ್2), ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9) ಹಾಗೂ ಇಂಡಿಪೆಂಡೆಂಟ್ ರಿಟೇಲ್ ವೆಂಡ್ ಆಫ್ ಬಿಯರ್ (ಆರ್​ವಿಬಿ) ಪಬ್ ತೆರೆಯುವುದಕ್ಕೆ ಪರವಾನಗಿ ನೀಡಲು ಸರ್ಕಾರ ತಯಾರಿ ನಡೆಸುತ್ತಿದೆ. ಹೊಸ ಪರವಾನಗಿ ನೀಡುವ ಉದ್ದೇಶದಿಂದ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ವೈನ್​ಶಾಪ್, ಬಾರ್ ಆಂಡ್ ರೆಸ್ಟೋರೆಂಟ್, ಹೊರತುಪಡಿಸಿ ಸಿಎಲ್7, ಕ್ಲಬ್ (ಸಿಎಲ್4), ಸ್ಟಾರ್ ಹೋಟೆಲ್ (ಸಿಎಲ್6ಎ), ಮಿಲಿಟರಿ ಕ್ಯಾಂಟಿನ್ (ಸಿಎಲ್8) ಹಾಗೂ ಎಂಎಸ್​ಐಎಲ್ (11ಸಿ) ಸೇರಿ ಇತರ ಮಾದರಿ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಲಾಗುತ್ತಿದೆ. ಎಂಎಸ್​ಐಎಲ್ ಮದ್ಯದಂಗಡಿ ತೆರೆಯುವುದಕ್ಕೆ ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿ.ಗೆ (ಎಂಎಸ್​ಐಎಲ್) ಸರ್ಕಾರವೇ ಅನುಮತಿ ಕೊಟ್ಟಿದೆ. ಹೊಸ ಸಿಎಲ್2 ಹಾಗೂ ಸಿಎಲ್9 ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವುದನ್ನು 1992-93ರಲ್ಲಿ ನಿಲ್ಲಿಸಲಾಗಿತ್ತು. ಈಗ ಇವುಗಳಿಗೆ ಪರವಾನಗಿ ನೀಡುವಂತೆ ಸರ್ಕಾರದ ಮಟ್ಟದಲ್ಲಿ ಲಾಬಿ ನಡೆದಿದೆ ಎನ್ನಲಾಗಿದೆ.

    ಈ ಲೋಕವನ್ನೇ ಬಿಟ್ಟು ಹೋದ ಪತ್ನಿ; ಪತಿ ಹಾಗೂ ಕುಟುಂಬಸ್ಥರು ಮನೆಬಿಟ್ಟು ಪರಾರಿ!

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts