ಸೌಕರ್ಯವಿಲ್ಲದೆ ಗ್ರಂಥಾಲಯಗಳಿಗೆ ಬೀಗ

ಎಲ್ಲ ವಯೋಮಾನದವರಿಗೆ ಜ್ಞಾನ ದೇಗುಲ ಎಂದೆನಿಸಿರುವ ಸಾರ್ವಜನಿಕ ಗ್ರಂಥಾಲಯಗಳು ಮೂಲಸೌಕರ್ಯವಿಲ್ಲದೆ ಮುಚ್ಚುವಂತಾಗಿವೆ. ಈ ಬಗ್ಗೆ ವಿಜಯಪುರದ ಕೆ.ಎಸ್. ಸಾರವಾಡ ಎಂಬುವರು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ನಮ್ಮ ವರದಿಗಾರ ಬೇಲೂರು ಹರೀಶ ಸಿದ್ಧಪಡಿಸಿದ ವಿಶೇಷ ವರದಿ ಇಲ್ಲಿದೆ.

ಸರ್ಕಾರದ ಉದಾಸೀನ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೂಲಸೌಕರ್ಯವಿಲ್ಲದೆ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳಿಗೆ ಬೀಗ ಜಡಿಯುವ ಸ್ಥಿತಿ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಅಧಿಕಾರಿಗಳು ಮತ್ತು ಸರ್ಕಾರದ ಗಮನ ಸೆಳೆದರೂ ಇಲ್ಲಿಯವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ವಿಜಯಪುರ ಮೂಲದ ಕೆ.ಎಸ್. ಸಾರವಾಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೇಂದ್ರ, ವಲಯ, ಜಿಲ್ಲಾ, ನಗರ, ತಾಲೂಕು, ಸಂಚಾರಿ, ಅಲೆಮಾರಿ, ಗ್ರಾ.ಪಂ. ಸೇರಿ 6,024 ಗ್ರಂಥಾಲಯಗಳಿವೆ. ಕೆಲವು ಬಾಡಿಗೆ ಕಟ್ಟದಲ್ಲಿದ್ದು, ಸರಿಯಾದ ನಿರ್ವಹಣೆ ಇಲ್ಲದ್ದರಿಂದ ಜನ ಬರಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೆ ಕೆಲವೆಡೆ ಗ್ರಂಥಾಲಯದಲ್ಲಿ ಮೇಲ್ವಿಚಾರಕರಿಲ್ಲ. ಬೆಳಕು-ಪೀಠೋಪಕರಣ ಸೇರಿ ಮೂಲಸೌಕರ್ಯ ಕೊರತೆ ಇದೆ. ನೆಪಮಾತ್ರಕ್ಕೆ ಮೇಲ್ವಿಚಾರಕರು ವಾರದಲ್ಲಿ 2 ದಿನವಷ್ಟೇ ಬಾಗಿಲು ತೆರೆಯುತ್ತಾರೆ. ಅಲ್ಲದೆ, ಹಳೆಯ ಪುಸ್ತಕಗಳು ಧೂಳು ತುಂಬಿಕೊಂಡು ಅದನ್ನು ಸ್ವಚ್ಛತೆ ಮಾಡಲು ಸಿಬ್ಬಂದಿ ಇಲ್ಲ. ನಗರ ಮತ್ತು ಜಿಲ್ಲೆಯಲ್ಲಿರುವ ಗ್ರಂಥಾಲಯಗಳ ಪೂರ್ಣಾವಧಿ ಕಡಿತಗೊಳಿಸಿ ಬೆಳಗ್ಗೆ-ಸಂಜೆ 2 ಗಂಟೆ ಕಾಲ ತೆರೆದು ಮುಚ್ಚುತ್ತಾರೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ಸಮರ್ಪಕವಾಗಿ ಬಳಕೆಯಾಗಿಲ್ಲ. ಈಗಾಗಲೇ ಕೋಟಿಗಟ್ಟಲೆ ಸಂಗ್ರಹವಾಗಿರುವ ಕರ ಇನ್ನೂ ಬ್ಯಾಂಕಿಗೆ ಜಮೆಯಾಗಿಲ್ಲ.

ಕೊರತೆ ನೀಗಿಸಲು ಒತ್ತಾಯ: ರಾಜ್ಯದಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡ ಇದೆ. ಅಲ್ಲೇ ಪತ್ಯೇಕ ಹೊಸ ಗ್ರಂಥಾಲಯ ನಿರ್ವಿುಸಿದರೆ ಜಾಗ-ಕಟ್ಟಡ ಸಮಸ್ಯೆ ಬಗೆಹರಿಯಲಿದೆ. ಸದ್ಯ 6,024 ಮೇಲ್ವಿಚಾರಕರು, 31 ತಾತ್ಕಾಲಿಕ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. 2017ರ ಏಪ್ರಿಲ್​ನಲ್ಲಿ ನೌಕರರ ವೇತನ 2500 ರೂ.ನಿಂದ 5 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಬರುವ ವೇತನದಲ್ಲಿ ಜೀವನ ನಿರ್ವಹಣೆ ಕಷ್ಟ. ಆದ್ದರಿಂದ ರಾಜ್ಯ ಸರ್ಕಾರ ವೇತನವನ್ನು 10 ಸಾವಿರ ರೂ.ಗೆ ಹೆಚ್ಚಿಸಬೇಕು. ಕೆಲವು ಕಡೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು. ಪ್ರತಿ ತಿಂಗಳು ಸಂದಾಯವಾಗುವ ಕರವನ್ನು ಬ್ಯಾಂಕಿಗೆ ಜಮೆ ಮಾಡುವಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸರ್ಕಾರ ಬಿಡುಗಡೆ ಮಾಡಿದ ಅನುದಾನ ಮೂಲಸೌಕರ್ಯವಿಲ್ಲದ ಗ್ರಂಥಾಲಯಗಳಿಗೆ ಸದ್ಬಳಕೆ ಆಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾಹಿತಿ ಇದ್ದರೂ ಕ್ರಮ ಜರುಗಿಸಿಲ್ಲ: ಬೆಂಗಳೂರಿನಲ್ಲಿ ಮುಖ್ಯ ಗ್ರಂಥಾಲಯವಲ್ಲದೆ ಪೂರ್ವ,ಪಶ್ಚಿಮ ,ಉತ್ತರ ಮತ್ತು ದಕ್ಷಿಣ ವಲಯ ಇವೆ. ಶೇ.90ರಷ್ಟು ಗ್ರಂಥಾಲಯಗಳು ಮೂಲಸೌಕರ್ಯ ವಂಚಿತವಾಗಿವೆ. ಗ್ರಂಥಾಲಯ ಕರ ವಸೂಲಿ ಜವಾಬ್ದಾರಿಯನ್ನು ಗ್ರಾ.ಪಂ, ಪ.ಪಂ, ಪುರಸಭೆ, ನಗರಸಭೆ ಮತ್ತು ನಗರಗಳಲ್ಲಿ ಮಹಾನಗರ ಸಭೆ ಮತ್ತು ಬಿಬಿಎಂಪಿಗೆ ವಹಿಸಲಾಗಿದೆ. ಕೆಲವು ಕಡೆ ಅನೇಕ ವರ್ಷದಿಂದ ಕರ ಹಾಗೇ ಉಳಿದಿದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಏನೂ ಕ್ರಮಕೈಗೊಂಡಿಲ್ಲ. ಇನ್ನುಮುಂದೆಯಾದರೂ ಜ್ಞಾನ ದೇಗಲುಗಳ ಸಮಸ್ಯೆ ಬಗೆಹರಿಯಲಿ ಎಂಬುದು ಸಾರ್ವಜನಿಕರ ಆಶಯ.