ಗ್ರಂಥಾಲಯಕ್ಕೆ ಅನುದಾನ ಕೊರತೆ

<<ಕಟ್ಟಡ ಕಾಮಗಾರಿ ಪೂರ್ಣ * ಒಳಾಂಗಣ ವಿನ್ಯಾಸಕ್ಕೆ 2 ಕೋಟಿ ರೂ.ಪ್ರಸ್ತಾವನೆ>>

ಗೋಪಾಲಕೃಷ್ಣ ಪಾದೂರು
ಅಜ್ಜರಕಾಡು ಪುರಭವನ ಸಮೀಪ ನಿರ್ಮಿಸಲಾಗುತ್ತಿರುವ ಸುಸಜ್ಜಿತ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದಿದ್ದು, ಒಳಾಂಗಣ ವಿನ್ಯಾಸ ಕಾರ್ಯಕ್ಕೆ ಅನುದಾನ ಕೊರತೆ ಎದುರಾಗಿದೆ.
20 ಸೆಂಟ್ಸ್ ಜಾಗದಲ್ಲಿ 13,500 ಚದರಡಿ ವಿಸ್ತೀರ್ಣದಲ್ಲಿ ನೆಲ ಅಂತಸ್ತು ಸಹಿತ ನಾಲ್ಕು ಮಹಡಿಗಳ ಉಡುಪಿ ಜಿಲ್ಲಾ ಕೇಂದ್ರ ಹಾಗೂ ಉಡುಪಿ ನಗರ ಗ್ರಂಥಾಲಯ ಕಟ್ಟಡವನ್ನು 5.36 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ನಿರ್ಮಾಣ ಮಾಡುತ್ತಿದೆ. ಈಗಾಗಲೇ 3.36 ಕೋಟಿ ರೂ. ಅನುದಾನ ಲಭಿಸಿದ್ದು, ಒಳಾಂಗಣ ವಿನ್ಯಾಸಕ್ಕೆ 2 ಕೋಟಿ ರೂ. ಅಗತ್ಯವಿದೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ನೀತಿಸಂಹಿತೆ ಜಾರಿಯಾಗಿರುವುದರಿಂದ ಅನುದಾನ ಬಿಡುಗಡೆ ಮತ್ತಷ್ಟು ವಿಳಂಬ ಸಾಧ್ಯತೆ ಇದೆ.
ಎಷ್ಟು ಅನುದಾನ
87.50 ಲಕ್ಷ ರೂ. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಗ್ರಂಥಾಲಯ ಕಟ್ಟಡದ ತಳಮಹಡಿ ನಿರ್ಮಾಣಕ್ಕೆ ತಗಲುವ ವೆಚ್ಚ ಹಾಗೂ ಸಂಸದ ಆಸ್ಕರ್ ಫರ್ನಾಂಡಿಸ್ ಸಂಸದರ ನಿಧಿಯಿಂದ ನೆಲ ಮಹಡಿಯ ವೆಚ್ಚ 99.50 ಲಕ್ಷ ರೂ. ಒದಗಿಸಲಾಗಿತ್ತು.
ಒಂದು ಮತ್ತು ಎರಡನೇ ಮಹಡಿ ಕಾಮಗಾರಿಗೆ ಒಟ್ಟು 1.62 ಕೋಟಿ ರೂ. ವೆಚ್ಚವಾಗಿದ್ದು, ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ 1.50 ಕೋಟಿ ರೂ. ಮತ್ತು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಿಂದ 5 ಲಕ್ಷ ರೂ. ಹಣ ಬಿಡುಗಡೆಯಾಗಿದೆ.

ಯಾವ ಮಹಡಿಯಲ್ಲಿ ಏನೇನು?: ತಳಭಾಗ 3375 ಚದರ ಅಡಿ ವಿಸ್ತೀರ್ಣವಿದ್ದು, ಪಾರ್ಕಿಂಗ್, ಪುಸ್ತಕ ದಾಸ್ತಾನು ಇಡುವ ಸ್ಟೋರ್ ರೂಂ ವ್ಯವಸ್ಥೆ ಇದೆ. ನೆಲ ಮಹಡಿ 3678 ಚದರ ಅಡಿ ವಿಸ್ತೀರ್ಣದಲ್ಲಿದ್ದು, ಬ್ರಹ್ಮಗಿರಿಯ ಬಾಲಭವನದಿಂದ ಸ್ಥಳಾಂತರಗೊಳ್ಳುವ ಮಕ್ಕಳ ಸಮುದಾಯ ಕೇಂದ್ರ, ಓದುವ ವಿಭಾಗ, ಹಿರಿಯ ನಾಗರಿಕರಿಗೆ ಪ್ರತ್ಯೇಕ ವಿಭಾಗ, ಪುಸ್ತಕ ವಿಭಾಗ, ಟೆಕ್ನಿಕಲ್ ಸ್ಟಾಪ್ ರೂಂ ಇರಲಿದೆ. ಮೊದಲ ಮಹಡಿ 3081 ಚದರ ಅಡಿ ವಿಸ್ತೀರ್ಣವಿದ್ದು, ಡಿಜಿಟಲ್ ಲೈಬ್ರರಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್ ಸಂಬಂಧಿತ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ ನಡೆಸಲು 50 ಆಸನಗಳ ಸಭಾಂಗಣ, ಸ್ಪರ್ಧಾತ್ಮಕ ಪರೀಕ್ಷೆಯ ಬ್ರೌಸಿಂಗ್ ಸೆಂಟರ್, ನಗರ ಕೇಂದ್ರ ಗ್ರಂಥಾಲಯಾಧಿಕಾರಿ ಕಚೇರಿಗಳಿರುತ್ತವೆ. ಎರಡನೆ ಮಹಡಿ 3081 ಚದರ ಅಡಿ ವಿಸ್ತೀರ್ಣವಾಗಿದ್ದು, ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡದ ಕಚೇರಿ, 100 ಆಸನಗಳಿಂದ ಕೂಡಿದ ಹವಾನಿಯಂತ್ರಿತ ಸಭಾಂಗಣ, ಜಿಲ್ಲಾ ಕೇಂದ್ರ ಗ್ರಂಥಾಲಯಾಧಿಕಾರಿ ಕಚೇರಿ ಇರಲಿದೆ. ಈ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

ಮೂರು ವರ್ಷವಾದರೂ ಅಪೂರ್ಣ: ಕಟ್ಟಡ ಕಾಮಗಾರಿಗೆ 2016ರ ಮೇ 7ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ಅನುದಾನ ಕೊರತೆಯಿಂದ ಕಟ್ಟಡ ಕಾಮಗಾರಿ ಒಂದೂವರೆ ವರ್ಷ ನಿಧಾನಗತಿಯಲ್ಲಿ ಸಾಗಿದ್ದು, ಒಳಾಂಗಣ ವಿನ್ಯಾಸಕ್ಕೆ ಅನುದಾನ ಕೊರತೆಯಿಂದ ಉದ್ಘಾಟನೆ ಮತ್ತಷ್ಟು ವಿಳಂಬವಾಗಲಿದೆ.