ಕಾಸರಗೋಡು: ಕರೊನಾ ಮಹಾಮಾರಿಯನ್ನು ಪಾರಂಪರಿಕ ಔಷಧೀಯ ವಿಧಾನದಿಂದ ಗುಣಪಡಿಸಲು ಸಾಧ್ಯವಿದೆ. ಕರೊನಾ ರೋಗ ನಿರೋಧಕ ಶಕ್ತಿ ವೃದ್ಧಿಸಲು ಬಜೆ ಅಥವಾ ವಚೆ ಗಿಡಕ್ಕೆ ಸಾಧ್ಯವಿದ್ದು, ಈ ಬಗ್ಗೆ ಗಮನಹರಿಸುವಂತೆ ಕುಂಬಳೆ ಸೀಮೆಯ ದೇಲಂಪಾಡಿ ಬಾಲಕೃಷ್ಣ ತಂತ್ರಿ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ.

ಬಜೆಯ ಔಷಧೀಯ ಗುಣಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಪತ್ರ ಪ್ರಧಾನಮಂತ್ರಿ ಕಚೇರಿಯಲ್ಲಿ ಸ್ವೀಕೃತಗೊಂಡಿರುವ ಬಗ್ಗೆ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರಿಗೆ ಮಾಹಿತಿಯೂ ತಲುಪಿದೆ. ಅಕೋರಸ್ ಕಲಾಮಸ್ ಇದರ ವೈಜ್ಞಾನಿಕ ಹೆಸರಾಗಿದ್ದು, ಇದರ ಕಾಂಡವನ್ನು ಗೋಮೂತ್ರದಲ್ಲಿ ಅದ್ದಿ ತೇಯ್ದು, ಇದರ ಅರ್ಧ ಚಮಚ ರಸವನ್ನು ಜೇನು ತುಪ್ಪದೊಂದಿಗೆ ದಿನಕ್ಕೆರಡು ಬಾರಿ ಸೇವಿಸಿದಲ್ಲಿ, ದೇಹದಲ್ಲಿ ಕರೊನಾ ವೈರಸ್ ವಿರೋಧಿಸುವ ರೋಗನಿರೋಧಕ ಶಕ್ತಿವೃದ್ಧಿಸಲು ಕಾರಣವಾಗುತ್ತದೆ. ಕರೊನಾ ಮಹಾಮಾರಿಯನ್ನು ಎದುರಿಸಬಹುದು ಎಂದೂ ಪತ್ರದಲ್ಲಿ ವಿವರಿಸಿದ್ದಾರೆ.
ಪುರಾತನ ತಾಳೆ ಓಲೆ, ತಾಮ್ರ ಶಾಸನ, ಶಿಲಾ ಶಾಸನವನ್ನು ತಮ್ಮ ಸಂಗ್ರಹದಲ್ಲಿ ಹೊಂದಿರುವ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು, ಇವುಗಳಲ್ಲಿ ದಾಖಲಾಗಿರುವ ಔಷಧೀಯ ಗುಣಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ.