ನೆಲದಲ್ಲಿ ಮುಚ್ಚಿರುವ ಪತ್ರಗಳ ಶೋಧನೆ, ದಾಖಲೆ ಪತ್ತೆಯಲ್ಲಿ ನಿಸ್ಸಿಮರು ಈ ಸಾಫ್ರಾನ್ ಟೈಗರ್ಸ್

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ಬಾರಿ ರಕ್ಕಸ ಮಳೆಯ ಆರ್ಭಟಕ್ಕೆ ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿರುವುದರ ಜತೆಯಲ್ಲಿ ಮಣ್ಣಿನಡಿ ಸೇರಿರುವ ಮನೆಗಳಿಂದ ಶಾಲಾ ಮಕ್ಕಳ ದಾಖಲೆ ಪತ್ತೆಯಲ್ಲಿ ಸಾಫ್ರಾನ್ ಟೈಗರ್ಸ್ ಎಂಬ ಹೆಸರಿನಲ್ಲಿ ಯುವಕರ ತಂಡ ಕಾರ್ಯೋನ್ಮುಖವಾಗಿದೆ.

ಶಾಲಾ ಕಾಲೇಜು ವಿದ್ಯಾರ್ಥಿಗಳ ಅಂಕಪಟ್ಟಿಗಳು, ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರಗಳಂತಹ ದಾಖಲೆಗಳನ್ನು ಕಲೆ ಹಾಕಲು ಮುಂದಾಗಿದೆ. ಈಗಾಗಲೇ ಮಣ್ಣಿನ ರಾಶಿಯಲ್ಲಿ ಸಿಕ್ಕಿಕೊಂಡಿದ್ದ ಹಲವು ದಾಖಲೆಗಳನ್ನು ಕಲೆಹಾಕಿ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದವರಿಗೆ ವಿತರಿಸುವ ಕೆಲಸವನ್ನೂ ಮಾಡಿ ಗಮನ ಸೆಳೆದಿದೆ.

ಮೂಡಿಗೆರೆ ತಾಲೂಕು ಕೆಳಗೂರು ಗ್ರಾಮದಲ್ಲಿ ಓರ್ವ ಶಿಕ್ಷಕ, ಅಂಗನವಾಡಿ ಕಾರ್ಯಕರ್ತೆ, ಪೊಲೀಸ್ ಸಿಬ್ಬಂದಿ ಹಾಗೂ ಮೆಸ್ಕಾಂ ಲೈನ್​ವ್ಯಾನ್ ವಸತಿಗೃಹಕ್ಕೆ ಮಳೆ ನೀರು ನುಗ್ಗಿ ಕುಸಿದಿವೆ. ಶಿಕ್ಷಕನ ಬಳಿ ವಿದ್ಯಾರ್ಥಿಗಳಿಗೆ ಸೇರಿದ ದಾಖಲಾತಿಗಳು ಇದ್ದರೆ, ಅಂಗನವಾಡಿ ಕಾರ್ಯಕರ್ತೆಯ ಬಳಿ ಸಾಕಷ್ಟು ವೋಟರ್ ಐಡಿ ಕಾರ್ಡ್​ಗಳು, ಗರ್ಭಿಣಿಯರಿಗೆ ಸೇರಿದ ಮಾಹಿತಿಗಳು ಸೇರಿ ಅಮೂಲ್ಯ ದಾಖಲಾತಿಗಳು ಇದ್ದವು.

ಜತೆಗೆ ಬಾಣಂತಿಯರಿಂದ ಸಂಗ್ರಹಿಸಿದ ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ ಹೀಗೆ ಹಲವು ದಾಖಲೆಗಳು ಪತ್ತೆಯಾಗಿದ್ದು, ಅವಶೇಷಗಳಡಿ ಇದ್ದ ಈ ಎಲ್ಲ ವಸ್ತುಗಳನ್ನು ಸಾಫ್ರಾನ್ ಟೈಗರ್ಸ್ ತಂಡ ಸುರಕ್ಷಿತವಾಗಿ ಮಣ್ಣಿನಿಂದ ಮೇಲೆತ್ತಿ ಆಯಾ ವ್ಯಕ್ತಿಗಳಿಗೆ ನೀಡಿದೆ.

ಇಂತಹ ನಿದರ್ಶನಗಳ ಮಾಹಿತಿ ಬಂದ ತಕ್ಷಣ ಸಾಫ್ರಾನ್ ಟೈಗರ್ಸ್ ತಂಡ ನೆರವಿಗೆ ಧಾವಿಸಲಿದೆ. ಸಹಾಯಕ್ಕೆ ಬೇಕಿದ್ದರೆ ತಂಡದ ಮೊ.ಸಂಖ್ಯೆ 8277766386 ಕರೆ ಮಾಡಬಹುದು. ಸಾಫ್ರಾನ್ ಟೈಗರ್ಸ್ ತಂಡದಲ್ಲಿ 15 ಯುವಕರು ಇದ್ದಾರೆ. ಆಲ್ದೂರು ಶಶಿ, ಸೂರ್ಯ, ಶ್ರೀಮಂತ್, ಜಗನ್ ಮತ್ತಿತರರು ಕಾರ್ಯೋನ್ಮುಖರಾಗಿದ್ದಾರೆ.

ನಕಲು ದಾಖಲೆ ನೀಡಲಿದೆ ಶಿಕ್ಷಣ ಇಲಾಖೆ: ಭೀಕರ ಮಳೆಯಿಂದ ಮನೆಗಳ ಜತೆಗೆ ಶಾಲಾ ದಾಖಲಾತಿಗಳು, ಪುಸ್ತಕಗಳು ಮತ್ತಿತರ ವಸ್ತುಗಳನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅವೆರಲ್ಲರಿಗೂ ಶಿಕ್ಷಣ ಇಲಾಖೆ ದಾಖಲೆಗಳ ನಕಲು ಒದಗಿಸಲಿದೆ.

ಪ್ರಮುಖವಾಗಿ ಮಕ್ಕಳು ಪಠ್ಯಪುಸ್ತಕಗಳು, ನೋಟ್​ಬುಕ್​ಗಳು, ಅಂಕಪಟ್ಟಿಗಳು, ನಲಿ ಕಲಿ ಪ್ರಗತಿ ಪುಸ್ತಕಗಳು, ಎಸ್​ಎಸ್​ಎಲ್​ಸಿ ವರ್ಗಾವಣೆ ಪತ್ರದ ನಕಲುಗಳು ಮಣ್ಣು ಪಾಲಾಗಿವೆ. ಮಳೆಯಿಂದ ತೊಂದರೆಗೆ ಸಿಕ್ಕಿರುವ ಮಕ್ಕಳ ದಾಖಲೆಗಳಿಗೆ ಸಂಬಂಧಿಸಿದ ವಿವರವನ್ನು ಶಾಲಾ ಮುಖ್ಯಶಿಕ್ಷಕರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಶಿಕ್ಷಣ ಇಲಾಖೆಗೆ ಸಲ್ಲಿಸಿದರೆ ಸಾಕು. ನಕಲುಗಳನ್ನು ಕೊಡಿಸಲು ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಮಕ್ಕಳು ಪರದಾಡುವ ಅಗತ್ಯವಿಲ್ಲ.

Leave a Reply

Your email address will not be published. Required fields are marked *