More

    ಯುವಜನತೆ ಹತಾಶೆ ಬಿಟ್ಟು ಜೀವನೋತ್ಸಾಹಕ್ಕೆ ಮರಳಲಿ

    ಯುವಜನತೆ ಹತಾಶೆ ಬಿಟ್ಟು ಜೀವನೋತ್ಸಾಹಕ್ಕೆ ಮರಳಲಿರಸ್ತೆ ಅಪಘಾತಗಳಾಗಿ ಹತ್ತಿರದವರು ತೀರಿಕೊಂಡಾಗ ವಿಧಿಯನ್ನು ಹಳಿಯುತ್ತೇವೆ. ರಸ್ತೆ ಅವ್ಯವಸ್ಥೆಯ ಬಗ್ಗೆ ಗೊಣಗುತ್ತೇವೆ. ಕಾಯಿಲೆಯಿಂದ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ದೊರೆಯದೆ ತೀರಿಕೊಂಡರೆ ವೈದ್ಯರನ್ನು ದೂಷಿಸುತ್ತೇವೆ. ಔಷಧವನ್ನು ತೆಗಳುತ್ತೇವೆ ಆದರೆ…ಕಣ್ಣೆದುರು ಬೆಳೆದುನಿಂತ ಮುದ್ದು ಮಗನೋ, ಮಗಳೋ ಆತ್ಮಹತ್ಯೆ ಮಾಡಿಕೊಂಡರೆ ಹೆತ್ತ ಒಡಲುಗಳು ಏನೆಂದು, ಯಾರೆಂದು ಹೊಣೆಗಾರರನ್ನಾಗಿಸುತ್ತಾರೆ? ತಮ್ಮ ಮಗನಿಗೆ/ಮಗಳಿಗೆ ತಾವೇನು ಕಡಿಮೆ ಮಾಡಿದ್ದೆವು ಏಕೆ ಹೀಗಾಯಿತು ಎಂದು ಜೀವನಪರ್ಯಂತ ಪರಿತಪಿಸುತ್ತಲೇ ಉಳಿದ ಆಯುಷ್ಯವನ್ನು ಶಾಪಗ್ರಸ್ತರಂತೆ ಕಳೆಯುತ್ತಾರೆ. ವೈರಿಗಳಿಗೂ ಬರಬಾರದ ದುರ್ದೆಸೆ ಅದು.

    ಕಳೆದ ಮೂರು ದಶಕಗಳ ನನ್ನ ಕಾಲೇಜು ಪ್ರಾಧ್ಯಾಪಕ ವೃತ್ತಿಯಲ್ಲಿ ಸುಮಾರು ಹದಿನೆಂಟು-ಇಪ್ಪತ್ತು ವರ್ಷ ವಯಸ್ಸಿನ ಯುವಸಮೂಹದ ನಡುವೆಯೇ ಬದುಕು ಸವೆಸಿರುವ ನನಗೆ ಯುವಕರ ಕಂಗಳ ಚಲನೆ, ಕಾಲುಗಳ ವ್ಯರ್ಥ, ಸಾರ್ಥ ಓಡಾಟ, ಮನಸ್ಸಿನ ತೊಳಲಾಟ, ಭಾವನೆಗಳ ತಾಕಲಾಟ… ಇವ್ಯಾವುದನ್ನೂ ತೋರಿಸಿಕೊಳ್ಳಲಾಗದ ಅವರ ಗೊಂದಲಮಯ ನಡವಳಿಕೆ- ಇವುಗಳನ್ನು ಗಮನಿಸಿದ್ದೇನೆ. ಎಂದೂ ಅವರ ಅಸಹಾಯಕತೆಯನ್ನು ಗೇಲಿ ಮಾಡದೇ ಸಾಧ್ಯವಿದ್ದಲ್ಲಿ ಪರಿಹರಿಸಿಕೊಳ್ಳಲು ಅವರಿಗೆ ಸಹಾಯ ಮಾಡುತ್ತಲೇ ವೃತ್ತಿಯನ್ನು ಮುಗಿಸಿದ ತೃಪ್ತಿ ನನಗಿದೆ. ಹುಟ್ಟಿದ ಪ್ರತಿ ಮಗುವೂ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳುಳ್ಳ ವ್ಯಕ್ತಿತ್ವ ಹೊಂದಿರುವುದರಿಂದ ‘ನನ್ನ ಮಗನನ್ನು ನಾನು ಹೇಗೆ ಸಾಕಿದ್ದೇನೆ ಗೊತ್ತಾ’ ಎನ್ನುವುದು, ‘ಮಗಳು ನಾವು ಹಾಕಿದ ಗೆರೆ ದಾಟುವುದಿಲ್ಲ ಕಣ್ರಿ’ ಎಂದು ಹೇಳಿಕೊಳ್ಳುವುದಾಗಲಿ ಸತ್ಯಕ್ಕೆ ದೂರವಾಗಿರುವ ಸಾಧ್ಯತೆಯೂ ಇರುತ್ತದೆ.

    ಅಮ್ಮನ ಕೈ ತುತ್ತು ತಿನ್ನುತ್ತ, ಅಪ್ಪನ ಕೈ ಹಿಡಿದೋ ಹೆಗಲೇರಿಯೋ ಜಗತ್ತಿನೆಡೆಗೆ ಬೆರಗು ನೋಟ ಬೀರುವ ಮಗು ನೋಡನೋಡುತ್ತಿರುವಂತೇ ಬೆಳೆದು ನಿಂತು ಬಿಟ್ಟಿರುತ್ತಾನೆ. ತೊಡರುಗಾಲಿನಲ್ಲಿ ನಡೆಯುವ ಮಗು ಬೆಳೆಯುತ್ತ ಬೆಳೆಯುತ್ತ ತನ್ನದೇ ನಡೆಯೊಂದನ್ನು ರೂಪಿಸಿಕೊಂಡಿರುತ್ತದೆ. ಹಾವಭಾವ, ಮೈಮುಖಗಳ ಚಲನೆ, ತಲೆಯಲ್ಲಾಡಿಸುವುದು, ಮಾತಾಡುವುದು, ಪ್ರತಿಕ್ರಿಯಿಸುವುದು, ಸಂತೋಷವನ್ನು ವ್ಯಕ್ತಪಡಿಸುವುದು ಹೀಗೆ ಎಲ್ಲವನ್ನೂ ದೊಡ್ಡವರನ್ನು ನೋಡನೋಡುತ್ತಲೇ ಕಲಿತು ತನಗಿಷ್ಟವಾದ ಯಾವುದೋ ವ್ಯಕ್ತಿಯನ್ನು ಮಾದರಿಯಾಗಿಟ್ಟುಕೊಳ್ಳಲುಬಹುದು. ತನ್ನ ಒಡನಾಟಕ್ಕೆ ದೊರೆತ ಸ್ನೇಹಿತರನ್ನು, ಗುರುಗಳನ್ನು, ಅಕ್ಕಪಕ್ಕದ ಮನೆಯವರನ್ನು, ಬಂಧುಗಳಲ್ಲಿ ಯಾರೋ ಒಬ್ಬರನ್ನು ಅನುಕರಿಸಲು ಪ್ರಾರಂಭಿಸಬಹುದು. ಅದೃಷ್ಟವಶಾತ್ ಹಾಗೆ ದೊರೆತ ಸ್ನೇಹಿತರು, ಒಡನಾಡಿಗಳು ಈ ಯುವಕ/ ಯುವತಿಯರಲ್ಲಿ ಆತ್ಮವಿಶ್ವಾಸ ತುಂಬುವ, ಬದುಕಿನಲ್ಲಿ ಶ್ರದ್ಧೆ, ವಿಶ್ವಾಸ ಮೂಡಿಸಬಹುದಾದ, ಹವ್ಯಾಸಗಳನ್ನು ಕಲಿಸುವ ವ್ಯಕ್ತಿಗಳಾಗಿದ್ದರೆ ಆ ಹುಡುಗ ಅಥವಾ ಹುಡುಗಿಯ ತಂದೆ-ತಾಯಿಗಳು ಅದೃಷ್ಟವಂತರೆಂದೇ ಹೇಳಬಹುದು. ಹಾಗೆ ಸೂಕ್ತ ಮಾರ್ಗದರ್ಶನ ದೊರೆಯದೆ ಮಕ್ಕಳು ತಾವೇ ನೋಡಿ ಕಲಿಯುವ, ಅಳವಡಿಸಿಕೊಳ್ಳುವ ಗುಣಗಳು ಅವರನ್ನು ಸನ್ಮಾರ್ಗದಲ್ಲಿಯೇ ನಡೆಸುತ್ತವೆ ಎಂದು ಹೇಳಲಾಗದು.

    ಇಂದಿನ ಮಾಹಿತಿ-ತಂತ್ರಜ್ಞಾನದ ಕಂಗೆಡಿಸುವ ಮಾಹಿತಿಗಳ ನಡುವೆ ಯುವಕ-ಯುವತಿಯರು ಏನನ್ನು ಆರಿಸಿಕೊಂಡು ನೋಡುತ್ತಾರೆ, ಕಲಿಯುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ‘ಏನು ನೋಡುತ್ತಿದ್ದೀಯೆ, ಏನು ಮಾಡುತ್ತಿದ್ದೀ?’ ಎಂದು ಮತ್ತೆ ಮತ್ತೆ ಪ್ರಶ್ನಿಸುವ ತಂದೆ-ತಾಯಿಗಳ ನಡತೆ ಯುವಕರಲ್ಲಿ ಒಂದು ಬಗೆಯ ಅಸಹನೆ, ರೋಷವನ್ನು ಹುಟ್ಟಿಹಾಕಿದರೂ ಆಶ್ಚರ್ಯವಿಲ್ಲ. ‘ನಾನೇನು ಮಗುವಾ ಹಾಗೆಲ್ಲ ಕೇಳಲು…’ ಎಂಬ ಉತ್ತರ ಥಟ್ಟನೆ ಬಂದೀತು. ಇದೀಗ ತಂದೆ-ತಾಯಿಗಳಿಗೆ ನಿಜವಾದ ಪರೀಕ್ಷಾ ಕಾಲ. ತಾಳ್ಮೆ, ಪ್ರೀತಿಯಿಂದ ತಿದ್ದುವ, ಮಹತ್ವಾಕಾಂಕ್ಷೆ ಬೆಳೆಸುವ, ಥಿಯರಿಯಲ್ಲಿ ಆದರ್ಶಮಯವಾಗಿ ಕಾಣುವ, ಆದರೆ ನೈಜ ಜೀವನದಲ್ಲಿ ಕಷ್ಟವಾದ ವ್ಯವಹಾರವನ್ನೇ ಈಗ ಅವರು ಅಳವಡಿಸಿಕೊಳ್ಳಬೇಕಾಗುತ್ತದೆ. ಮಕ್ಕಳ ಬೇಕು, ಬೇಡಿಕೆಗಳ ಕುರಿತಾಗಿ ತಂದೆ ಮತ್ತು ತಾಯಿ ಇಬ್ಬರಲ್ಲೂ ಏಕ ಅಭಿಪ್ರಾಯವಿದ್ದರೆ ಒಂದಿಷ್ಟು ಸಮಸ್ಯೆಗಳು ತನ್ನಿಂದ ತಾನೇ ದೂರಾದಾವು. ಅದಿಲ್ಲದೆ ಅಪ್ಪ ಹೇಳಿದ್ದನ್ನು ಅಮ್ಮ ವಿರೋಧಿಸಿದರೆ, ‘ಅಮ್ಮ ಮುದ್ದು ಮಾಡಿ ಹಾಳು ಮಾಡಿದಳು’ ಎಂದು ಅಪ್ಪ ಎದುರೆದುರೇ ಬೈದರೆ ಪರಿಸ್ಥಿತಿಯ ಲಾಭ ಪಡೆಯುವ ಬುದ್ಧಿವಂತಿಕೆ ಮಕ್ಕಳಲ್ಲಿರುತ್ತದೆ. ಅಮ್ಮನಿಗೆ ಹೇಳದೇ ಅಪ್ಪನ ಬಳಿ, ಅಪ್ಪನಿಗೆ ಹೇಳದೆ ಅಮ್ಮನ ಬಳಿ ತಮಗೆ ಬೇಕಾದುದನ್ನು ಪಡೆಯುವ ತಂತ್ರಗಾರಿಕೆಯನ್ನು ಅವರಾಗಲೇ ಅಳವಡಿಸಿಕೊಂಡಾಗಿರುತ್ತದೆ.

    ತಮಗೆ ಬೇಕಾದುದನ್ನು ಪಡೆಯಲು ತಾವು ಮಾಡಬೇಕಾದ ಪ್ರಯತ್ನ, ಶ್ರಮದ ಕಲ್ಪನೆ, ಬಯಸಿದ್ದು ಸಿಗದಾಗ ಆಗುವ ನಿರಾಸೆಯನ್ನು ನಿಯಂತ್ರಿಸಿಕೊಂಡು ಮತ್ತೆ ಮತ್ತೆ ಸೋಲನ್ನು ಅರಗಿಸಿಕೊಂಡು ಪ್ರಯತ್ನಶೀಲರಾಗುವ ತಾಳ್ಮೆಯಾಗಲೀ, ಗುರಿಮುಟ್ಟುವ ತನಕ ಹೋರಾಟ ಮಾಡುತ್ತೇವೆಂಬ ಮಹತ್ವಾಕಾಂಕ್ಷೆಯಾಗಲೀ ಇಂದಿನ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ ಎಂಬುದು ಸಮಾಜಶಾಸ್ತ್ರೀಯರ ಹಾಗೂ ಮಾನಸಿಕ ತಜ್ಞರ ಅಭಿಪ್ರಾಯ. ಯಶಸ್ಸು, ಕೀರ್ತಿ, ಸಂಪತ್ತು ಸಾಧನೆ- ಎಲ್ಲವೂ ಥಟ್ಟನೆ ಆಗಿಬಿಡಬೇಕು ಎಂಬ ಮನೋಭಾವ. ಬೇಕಾದುದೆಲ್ಲ ಸಿಕ್ಕಿಬಿಡಬೇಕು, ಶ್ರಮವೇ ಇಲ್ಲದೆ ಜಯ ದೊರೆಯಬೇಕು, ಆ ಜಯವನ್ನು ನೋಡಿ ಸ್ನೇಹಿತರೆಲ್ಲ ಮೆಚ್ಚುಗೆ ವ್ಯಕ್ತಪಡಿಸಬೇಕು ಮತ್ತು ಅದನ್ನು ಫೇಸ್​ಬುಕ್ಕುಗಳಲ್ಲಿ ಪ್ರಕಟಸಿ ಲೈಕ್ ಪಡೆದುಬಿಡಬೇಕು… ಹೀಗೆ ವ್ಯಾವಹಾರಿಕ ಬದುಕನ್ನು ಹಾಗೂ ಅಂತರಂಗದ ಬದುಕನ್ನು ವಿಭಾಗಿಸಿಕೊಳ್ಳಲಾಗದೆ ಒಂದರೊಳಗೊಂದು ಸೇರಿಸಿ ಗೋಜಲು ಮಾಡಿಕೊಂಡು ನರಳುವ ಯುವಕರನೇಕರನ್ನು ನೀವು ನೋಡಿರಬಹುದು.

    ವಿದ್ಯಾರ್ಥಿದೆಸೆಯಲ್ಲಿ ವ್ಯಕ್ತಿತ್ವವನ್ನು ಗಟ್ಟಿಯಾದ ರೀತಿಯಲ್ಲಿ ಪೋಷಿಸಿಕೊಳ್ಳದಿದ್ದರೆ ಬರೀ ಪಠ್ಯಪುಸ್ತಕಗಳಲ್ಲಿ ತಮ್ಮ ಬದುಕಿನ ಗುರಿಯನ್ನು ಕಂಡುಕೊಳ್ಳತೊಡಗಿದಲ್ಲಿ ಅಂಥವರು ಮುಂಬರುವ ಬದುಕೆಂಬ ಪರೀಕ್ಷೆಯನ್ನು ಎದುರಿಸುವುದು ಕಷ್ಟವಾಗಿಬಿಡುತ್ತದೆ. ಸಿಲೆಬಸ್ ಇಲ್ಲದ ಪ್ರಶ್ನೆಪತ್ರಿಕೆಗಳೇ ಕಾಣದ, ಊಹಿಸಲೂ ಆಗದ ಪರೀಕ್ಷೆಗಳನ್ನು ಮುಂದೆ ತಾನು ಎದುರಿಸಬೇಕಾಗಬಹುದೆಂಬ ಕಲ್ಪನೆ ಆ ವಯಸ್ಸಿನಲ್ಲಿ ಇರುವುದಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಸಮಾಜ ಏನೋ ವಿದ್ಯಾರ್ಥಿಗಳು ಎಂಬ ರಿಯಾಯಿತಿಯನ್ನು ಕೊಡುತ್ತದೆ ನಿಜ. ಆದರೆ ಅದೇ ಪದವಿ ಮುಗಿಸಿ ಹೊರ ಬಂದ ವಿದ್ಯಾರ್ಥಿಗೆ ಸಮಾಜದಲ್ಲಿ ತೆರೆದ ತೋಳಿನ ಸ್ವಾಗತವೇನೂ ದೊರೆಯದು. ಬದಲು ಆತ ಅಥವಾ ಆಕೆ ಸ್ಪರ್ಧಾತ್ಮಕ ಸಮಾಜಕ್ಕೆ ಓರ್ವ ಸ್ಪರ್ಧಾಳುವಾಗಿ ಪ್ರವೇಶಿಸಬೇಕಾಗುತ್ತದೆ. ಅವಕಾಶ ದೊರೆತವನು ಗೆದ್ದ, ಅವಕಾಶ ಗಿಟ್ಟಿಸಿ ಕೊಳ್ಳಲಾರದವನು ನಿರಾಶೆಯ ಕೂಪಕ್ಕೆ ಬಿದ್ದ… ಇದು ಇಂದಿನ ಉದ್ಯೋಗದ ಪರಿಸ್ಥಿತಿಯೂಹೌದು.

    ತುಂಬ ಮೃದುಸ್ವಭಾವದ, ಹಿಂಜರಿಕೆಯ ಮನಸ್ಥಿತಿಯವರಾದರೆ ಅಷ್ಟೇ ಸಾಕು. ಹತಾಶ ಮನಸ್ಸುಗಳು ಸೋಲನ್ನು ಹೇಗೆ ಸ್ವೀಕರಿಸಬೇಕೆಂಬುದು ತಿಳಿಯದೆ ದಿಕ್ಕೆಡುತ್ತವೆ. ದಿಕ್ಕೆಟ್ಟ ಮನಸ್ಸು ತೋರುವ ಪರಿಹಾರ ಪಲಾಯನವಾದ, ಆತ್ಮಹತ್ಯೆಯಂಥ ಕ್ರೂರ ನಿರ್ಧಾರಗಳು. ಮೊನ್ನೆ ಒಂದೇ ದಿನ ಮೂರು ಆತ್ಮಹತ್ಯೆಯ ಸುದ್ದಿಗಳನ್ನು ಕೇಳಿದ ನನಗೆ ‘ಅಯ್ಯೋ ಆ ಬೆಳೆದು ನಿಂತ ಮಗ’ ಒಂದೇ ಕ್ಷಣ ತಾಯಿ-ತಂದೆಯರನ್ನು ನೆನಪಿಸಿಕೊಂಡಿದ್ದರೆ ಈ ಕರಾಳಕೃತ್ಯ ಘಟಿಸುತ್ತಿರಲಿಲ್ಲವೇನೋ ಎನ್ನಿಸಿತು.

    ಅಷ್ಟರಲ್ಲಿ ಯುವಕರ ಮತ್ತೊಂದು ಮುಖ ನೋಡುವ ಅವಕಾಶ ದೊರೆಯಿತು. ‘ಬೇಂದ್ರೆ ಬದುಕು ಬರಹ’ ಎಂಬ ಫೇಸ್​ಬುಕ್ ಪೇಜ್ ಕಟ್ಟಿಕೊಂಡ ಯುವಕರ ಗುಂಪೊಂದು ಬೇಂದ್ರೆ 125ರ ಸಂಭ್ರಮಕ್ಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು. 66 ಜನ ಬೇಂದ್ರೆ ಪ್ರಿಯರು ಬರೆದ ಲೇಖನಗಳ ಗುಚ್ಛವನ್ನು (‘ಕಂಡವರಿಗಷ್ಟೆ’) ಬಿಡುಗಡೆ ಮಾಡುವ ಸಮಾರಂಭಕ್ಕೆ ಹೋಗುವ ಅವಕಾಶ ದೊರೆಯಿತು. ಪ್ರಾರಂಭದಲ್ಲಿ ಬಿಂದುಮಾಲಿನಿಯವರು ವಾದ್ಯಗಳ ಅಬ್ಬರವಿಲ್ಲದೆ ಏಕತಾರಿಯ ಜತೆ ಕಣ್ಮುಚ್ಚಿ ಹಾಡಿದ ಬೇಂದ್ರೆ ಗೀತೆಗಳು ಸಭಿಕರ ಅಂತರಂಗದ ಲೋಕವನ್ನು ಮುದಗೊಳಿಸಿದವು. ಪ್ರಾಪಂಚಿಕ ಬದುಕಿನಲ್ಲಿ ಬಡತನ, ಕಣ್ಣೆದುರೇ ಮಕ್ಕಳ ಸಾವು, ನಿರುದ್ಯೋಗ, ಅವಜ್ಞೆಯಂತಹ ಅವಮಾನಗಳನ್ನು ನುಂಗುತ್ತಲೇ ನಲಿವನ್ನು ನೀಡಿ ಓದುಗರ ಬದುಕಿನಲ್ಲಿ ಉತ್ಸಾಹ ತುಂಬಿದ ಕವಿ ಬೇಂದ್ರೆ ಅಜ್ಜ. ಬೇಂದ್ರೆಯವರ ಕುರಿತಾದ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಎಲ್ಲರೂ ಯುವಕರೇ ಎಂಬುದು ಹೆಮ್ಮೆಯ ಮತ್ತು ಆಶಾದಾಯಕ ಸಂಗತಿಯಾಗಿತ್ತು. ವೇದಿಕೆಯ ಮೇಲಿದ್ದ ವಿದ್ವಾಂಸರೆಲ್ಲ ಬೇಂದ್ರೆಯವರ ಅಭ್ಯಾಸದಿಂದ ಹೇಗೆ ನಮ್ಮ ಬದುಕನ್ನು ಆನಂದಮಯವಾಗಿಸಿಕೊಳ್ಳಲು ಸಾಧ್ಯ ಎಂಬುದನ್ನು ಮನಗಾಣಿಸಿ ಮಾತಾಡಿದರು.

    ಯುವಜನತೆ ಹತಾಶರಾಗದೆ ಬದುಕಿನಲ್ಲಿ ಶಾಂತಿ, ಪ್ರೀತಿಯನ್ನು ಕಂಡುಕೊಳ್ಳಬೇಕೆಂದಿದ್ದರೆ ಸಾಹಿತ್ಯ, ಸಂಗೀತಗಳು ಅವರ ಕೈ ಹಿಡಿಯಲು ಸದಾ ಸಿದ್ಧ ಎಂಬುದನ್ನು ಮತ್ತೆ ಮತ್ತೆ ತೋರಿಸುವ ಇಂಥ ಪ್ರಯತ್ನಗಳು ಯುವಕರಿಂದಲೇ ನಡೆಯುತ್ತಿರುವುದು ಮರಳುಗಾಡಿನಲ್ಲಿ ಓಯಸಿಸ್​ನಂತೆ ತಂಪಾದ ಭರವಸೆಗಳು. ಮಕ್ಕಳಿಗೆ ಇನ್ನೇನು ಕೊಡಿಸಲು ಸಾಧ್ಯವಾಗದಿದ್ದರೂ ಸರಿಯೇ. ಬದುಕಿಗೆ ನಮ್ಮನ್ನು ಬಿಗಿಯಾಗಿ, ಪ್ರಿಯವಾಗಿ ಬಂಧಿಸಬಹುದಾದ ಯಾವುದಾದರೊಂದು… ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ, ನಾಟಕ, ಅಭಿನಯ ಸಮಾಜಸೇವೆಗಳಂಥ ಯಾವುದಾದರೂ ಭಾವನಾತ್ಮಕ ಎಳೆಯನ್ನು ಎಳವೆಯಲ್ಲೇ ಮಕ್ಕಳು ಅಳವಡಿಸಿಕೊಳ್ಳುವಂತೆ ಮಾಡಿದರೆ ತಂದೆ-ತಾಯಿಗಳಾಗಿ ನಾವು ಮಾಡಬಹುದಾದ ದೊಡ್ಡ ಸಾಧನೆ ಎಂದುಕೊಳ್ಳಬಹುದು.

    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts