ಅಕ್ಕಿಆಲೂರ: ಕನ್ನಡ ತಾಯಿ ಭುವನೇಶ್ವರಿ ದೇವಿ ಭಾರತ ಮಾತೆಯ ಮಗಳು. ನಾವು ಕನ್ನಡ ಮತ್ತು ಭಾರತವನ್ನು ಸಮಾನವಾಗಿ ಆರಾಧಿಸೋಣ ಎಂದು ರಾಣೆಬೆನ್ನೂರಿನ ವಂದೇ ಮಾತರಂ ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಹೇಳಿದರು.
ಪಟ್ಟಣದ ನರಸಿಂಗ ರಾವ್ ದೇಸಾಯಿ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾದ ದುಂಡಿ ಬಸವೇಶ್ವರ ಜನಪದ ಕಲಾಸಂಘದ 33ನೇ ಕನ್ನಡ ನುಡಿ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಮತ್ತು ಕನ್ನಡವನ್ನು ಪ್ರೀತಿಸಿ, ಗೌರವಿಸುವವರ ಮಧ್ಯೆ ವೈಚಾರಿಕ ಭಿನ್ನಾಭಿಪ್ರಾಯ ಬರಬಾರದು. ಕನ್ನಡ ತಾಯಿ ಭುವನೇಶ್ವರಿ ಭಾರತ ಮಾತೆಯ ಮಗಳು ಎಂಬುದನ್ನು ಅನೇಕ ಸಾಹಿತಿಗಳು, ಕವಿಗಳು ವಿಮರ್ಶಾತ್ಮಕವಾಗಿ ಪ್ರಸ್ತುತ ಪಡಿಸಿದ್ದಾರೆ. ಹೊರ ರಾಜ್ಯದಲ್ಲಿ ನಿಂತಾಗ ಕನ್ನಡ ಪ್ರೀತಿಸೋಣ, ವಿದೇಶಗಳಲ್ಲಿ ನಿಂತಾಗ ಭಾರತವನ್ನು ಗೌರವಿಸೋಣ ಎಂದು ಹೇಳಿದರು.
ಲೇಖಕ, ವಾಗ್ಮಿ ಅಮೋಘ ಹಿರೇಮಠ ಮಾತನಾಡಿ, ನಮ್ಮ ನಾಡು ಭಾರತಕ್ಕೆ ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಕೊಡುಗೆ ನೀಡಿದೆ ಎಂದರು.
ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಶ್ರೀ ಮಾತನಾಡಿ, ಇಂದಿನ ಯುವ ಸಮುದಾಯ ಸಾಹಿತ್ಯ ಬರೆಯುವ ಆಸಕ್ತಿ ಬೆಳೆಸಿಕೊಳ್ಳಬೇಕು. 8 ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯದಲ್ಲಿ ಪ್ರಸಿದ್ಧ ಸಾಹಿತಿಗಳ ಉದಯವಾಗಬೇಕಿದೆ ಎಂದು ಹೇಳಿದರು.
ಜೂನಿಯರ್ ರಾಜಕುಮಾರ ಖ್ಯಾತಿಯ ಅಶೋಕ ಬಸ್ತಿ ಅವರಿಗೆ ದುಂಡಿ ಬಸವೇಶ್ವರ ಜನಪದ ಕಲಾ ಸಂಘದಿಂದ ಈ ಬಾರಿಯ ಬಸವ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೂನಿಯರ್ ಪುನೀತ್ ರಾಜ್ಕುಮಾರ್ ಖ್ಯಾತಿಯ ರಾಘವೇಂದ್ರ ಬಸ್ತಿ ನೃತ್ಯದ ಮೂಲಕ ರಂಜಿಸಿದರು. ನಂತರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಾಹಿತಿ ಎಂ.ಎಸ್. ಮುಶಪ್ಪನವರ ರಚಿತ ಸಿದ್ಧಾರೂಢರ ನೆನಪು ಕೃತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷ ಬಸವರಾಜ ಕೋರಿ, ಗ್ರಾಪಂ ಅಧ್ಯಕ್ಷ ಮಖಬೂಲ್ ಅಹ್ಮದ್ ರುಸ್ತುಂಕಾನವರ, ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಅಧ್ಯಕ್ಷ ಮನೋಜ ದೇಸಾಯಿ, ಸಿದ್ದಲಿಂಗಪ್ಪ ಸಿಂಧೂರ, ಬಿ. ಎಸ್. ಕಲ್ಲೇರ, ಅರುಣ ಮುಚ್ಚಂಡಿ ಉಪಸ್ಥಿತರಿದ್ದರು.
ನಾಡಿನ ಅಭಿಮಾನ ಜಾಗೃತಿಗೊಳಿಸುವಲ್ಲಿ ದುಂಡಿ ಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ನುಡಿ ಸಂಭ್ರಮ ಮಹತ್ವದ ಕಾರ್ಯ ಮಾಡುತ್ತಿದೆ. ಫೆ. 16ರಂದು ಜರುಗಲಿರುವ ಆಳ್ವಾಸ್ ಸಾಂಸ್ಕೃತಿಕ ವೈಭವ ನಮ್ಮೂರಿಗೆ ಮತ್ತಷ್ಟು ಮೆರುಗು ನೀಡಲಿದೆ.
| ನಂದಿನಿ ವಿರುಪಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷೆ ಅಕ್ಕಿಆಲೂರ