ಜನರ ಸಂಕಟಕ್ಕೆ ಪ್ರಾಮಾಣಿಕ ಪರಿಹಾರವಾಗಿ ನಿಲ್ಲೋಣ

ಪ್ರವಾಹದ ಹೊತ್ತಲ್ಲಿ ಸಹಾಯ ಮಾಡುವ ಮನಸ್ಸಿದ್ದಲ್ಲಿ ನೆಲಮಟ್ಟದಲ್ಲಿ ಕೆಲಸ ಮಾಡುತ್ತಿರುವ, ಮಾಡಬಲ್ಲ ಸಂಘಟನೆಗಳೊಂದಿಗೆ ಜೋಡಿಸಿಕೊಳ್ಳಿ. ಅನೇಕ ಬಾರಿ ಹಣ, ವಸ್ತುಗಳಿಗಿಂತ ಸಾಂತ್ವನ ಹೇಳುವವರು ಬಲು ಮುಖ್ಯ. ಪ್ರತ್ಯಕ್ಷ ವ್ಯಕ್ತಿಯೇ ಅಲ್ಲಿದ್ದರೆ ಆತ ಕಳಿಸುವ ರಗ್ಗು-ಟವೆಲ್ಲುಗಳಿಗಿಂತ ಹೆಚ್ಚಿನ ಕೆಲಸವಾಗುತ್ತದೆ.

ನಮ್ಮ ಮಾನಸಿಕ ಸ್ಥಿತಿಗತಿಗಳು ಎಂಥವೆಂಬುದನ್ನು ಊಹಿಸುವುದೂ ಅಸಾಧ್ಯ. ನಮ್ಮ ಲಾಭಕ್ಕಾಗಿ ಯಾರ ಬಗ್ಗೆ ಏನು ಬೇಕಾದರೂ ಹೇಳಿ ಬಚಾವಾಗಿಬಿಡುತ್ತೇವೆ. ಯಾರನ್ನಾದರೂ ಮಣ್ಣು ಮುಕ್ಕಿಸಿ ನಾವು ಕುರ್ಚಿಯ ಮೇಲೆ ಕುಳಿತುಬಿಡುತ್ತೇವೆ. ಕೊನೆಗೆ ನಮ್ಮ ಸ್ವಾರ್ಥ ಸಾಧನೆಗಾಗಿ ಅನ್ಯರ ಭಾವನೆಗಳೊಂದಿಗೂ ಆಟವಾಡಿಬಿಡುತ್ತೇವೆ. ನಾನು ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಬಗ್ಗೆ ಹೇಳುತ್ತಿದ್ದೇನೆ. ಕೃಷ್ಣಾ, ಭೀಮಾ, ಮಲಪ್ರಭಾ, ಘಟಪ್ರಭಾ, ಅಘನಾಶಿನಿ, ಶರಾವತಿ, ತುಂಗಭದ್ರ, ನೇತ್ರಾವತಿ ಎಲ್ಲವೂ ಭೋರ್ಗರೆಯುತ್ತಿವೆ. ಹಳ್ಳಿಹಳ್ಳಿಗಳನ್ನು ನುಂಗಿ ನೀರು ಕುಡಿಯುತ್ತಿದೆ. ವಿನಾಶದ ತಾಂಡವ ನೃತ್ಯವೇ ನಡೆಯುತ್ತಿದೆ. ಸಂತ್ರಸ್ತರಿಗೆ ನೆಮ್ಮದಿ ಕೇಂದ್ರಗಳು ವ್ಯಾಪಕವಾಗಿ ಕೆಲಸ ಮಾಡುತ್ತಿವೆ. ಅಧಿಕಾರಿಗಳೂ ಮುತುವರ್ಜಿಯಿಂದ ದುಡಿಯುತ್ತಿದ್ದಾರೆ. ಹಿಂದೆಂದೂ ಇಲ್ಲದಷ್ಟು ಕಾಳಜಿ ಈ ಬಾರಿ ಕಂಡು ಬಂದಿದೆ. ಈ ನಡುವೆ, ‘ಕೊಡಗಿಗೆ ಉತ್ತರ ಕರ್ನಾಟಕವೂ ಸ್ಪಂದಿಸಿತ್ತು; ಈಗ ಉತ್ತರ ಕರ್ನಾಟಕದವರ ನೋವಿಗೆ ರಾಜ್ಯವೇಕೆ ಸುಮ್ಮನಿದೆ’ ಎಂದು ಕೇಳುವವರ ಪ್ರಶ್ನೆಗೆ ಖಂಡಿತ ಯಾರೂ ಉತ್ತರಿಸಲಾರರು. ನೆನಪಿಡಿ, ಹೀಗೆ ಪ್ರಶ್ನಿಸುತ್ತಿರುವವರಾರೂ ಪ್ರವಾಹಪೀಡಿತ ಪ್ರದೇಶಗಳಲಿಲ್ಲ. ಅವರಲ್ಲಿ ಬಹುತೇಕರು ಸುರಕ್ಷಿತ ಪ್ರದೇಶಗಳಲ್ಲಿ ಕುಳಿತು ಫೇಸ್​ಬುಕ್​ಗಳಲ್ಲಿ ಸಾಹಸದ ವರದಿ ಗೀಚುತ್ತಿದ್ದಾರೆ. ಪ್ರತ್ಯಕ್ಷ ಪ್ರವಾಹ ಭೂಮಿಯಲ್ಲಿ ಏನು ನಡೆಯುತ್ತಿದೆ ಎಂಬ ಅರಿವೇ ಅವರಿಗಿಲ್ಲ. ಅನೇಕರು ಜನರನ್ನು ದಕ್ಷಿಣ-ಉತ್ತರದವರೆಂದು ವಿಭಾಗಿಸಿ ಸಂಕಟದ ಸಮಯದಲ್ಲಿ ಸಹಕಾರದ ನೆಪದಲ್ಲಿ ಕಿಡಿ ಹಚ್ಚುತ್ತಿದ್ದಾರೆ. ಹೀಗೆ ಜನರ ಭಾವನೆಗಳನ್ನು ಭಡಕಾಯಿಸಿ ಅವರನ್ನು ಹಣ ಕೊಡುವುದಕ್ಕೆ ಒತ್ತಾಯಿಸುವ ಪರಿಯಿದೆಯಲ್ಲ ನಿಜಕ್ಕೂ ಸೂಕ್ತವಾದದ್ದಲ್ಲ.

ಈ ಹಿಂದೆ ಚೆನ್ನೈ, ಕೊಡಗುಗಳಲ್ಲಾದ ಪ್ರವಾಹದ ಪರಿಸ್ಥಿತಿಗೂ ಉತ್ತರ ಕರ್ನಾಟಕದ ಈಗಿನ ಪರಿಸ್ಥಿತಿಗೂ ಅಜಗಜಾಂತರ. ಅಲ್ಲಿ ಹೇಳದೇ ಕೇಳದೆ ನೀರು ಅಣೆಕಟ್ಟುಗಳಿಂದ ಬಿಡಲ್ಪಟ್ಟಿತ್ತು. ಸುರಿಯುವ ಮಳೆ ನಡುವೆ ಏಕಾಕಿ ನುಗ್ಗಿದ ನೀರಿಗೆ ಜನ ಕಂಗಾಲಾಗಿಬಿಟ್ಟರು. ಅವರಲ್ಲನೇಕರಿಗೆ ಜೀವ ಉಳಿಸಿಕೊಳ್ಳಬೇಕೋ, ಮನೆಯ ಆಸ್ತಿಪಾಸ್ತಿಗಳ ಕಡೆ ಗಮನ ಕೊಡಬೇಕೋ ಎಂಬ ಗೊಂದಲ ತೀರುವ ವೇಳೆಗೆ ಅನೇಕರ ಪ್ರಾಣಕ್ಕೇ ಸಂಚಕಾರ ಬಂದಿತ್ತು. ತರಾತುರಿಯಲ್ಲಿ ನೆಮ್ಮದಿ ಕೇಂದ್ರಗಳು ತೆರೆಯಲ್ಪಟ್ಟವು; ಅಲ್ಲಿಗೆ ಅಕ್ಕಿ ಬೇಳೆ ತಲುಪಿಸುವಲ್ಲಿ ಹೈರಾಣಾಯಿತು ಆಡಳಿತ ವ್ಯವಸ್ಥೆ. ನೀರಿನ ಮಟ್ಟ ಏರುತ್ತಿದ್ದಂತೆ ಜನ ದಿಕ್ಕಾಪಾಲಾಗಿ ಧಾವಿಸಲಾರಂಭಿಸಿದರು. ಈ ಒತ್ತಡ ತಡೆಯಲಾರದೆ ಆಡಳಿತಯಂತ್ರ ಕುಸಿದು ಬಿತ್ತು.

ನೋಡ ನೋಡುತ್ತಿದ್ದಂತೆ ದೇಶದಾದ್ಯಂತ ಚೆನ್ನೈ ಪ್ರವಾಹದ ಪರ ಅನುಕಂಪದ ಅಲೆ ಹರಿಯಲಾರಂಭಿಸಿತು. ಆಗಲೇ ಶುರುವಾದದ್ದು ಹಣ ಸಂಗ್ರಹಣೆಯ ಕಸುಬು. ಹತ್ತಿರದಿಂದ ನೋಡಿರುವುದಕ್ಕೆ ಈ ಸತ್ಯದ ಅರಿವಿದೆ ನನಗೆ. ಆರಂಭದಲ್ಲಿ ಜನರ ಸಹಕಾರಕ್ಕೆ ಸ್ಥಳೀಯರು ಧಾವಿಸಿ ತಾತ್ಕಾಲಿಕ ಅವಶ್ಯಕತೆಗಳನ್ನು ಪೂರೈಸಿದ್ದರು. ನೊಂದವರಿಗೆ ಬೇಕಾದ್ದನ್ನು ತಮ್ಮ ಮನೆಗಳಲ್ಲೇ ತಯಾರಿಸಿ ಕೊಡುತ್ತಿದ್ದರು. ನಾನು ಓಡಾಡುತ್ತಿದ್ದ ಸ್ಥಳಗಳಲ್ಲಿ ಅಪಾರ್ಟ್​ವೆುಂಟ್​ಗಳಲ್ಲಿದ್ದ ಜನ ಎದುರಿಗಿದ್ದ ಸ್ಲಮ್ ಜನರಿಗೆ ಅಡುಗೆ ಮಾಡಿ ಬಡಿಸಿದ್ದನ್ನು ಜನ ನೋಡಿದ್ದರು. ಆದರೆ ಆನಂತರದ ದಿನಗಳಲ್ಲಿ ಅನುಕಂಪದ ಅಲೆ ಎದ್ದುಬಿಟ್ಟಿತಲ್ಲ; ಜನರಿಗೆ ಅಪಾರ್ಟ್​ವೆುಂಟ್ ಬೇಡವಾಯ್ತು. ತಂದು ಕೊಡುವವರ ಸಂಖ್ಯೆ ಹೆಚ್ಚಾದಂತೆ ನಿರಾಶ್ರಿತರೂ ಆಯ್ಕೆ ಮಾಡಿಕೊಳ್ಳಲಾರಂಭಿಸಿದರು. ಚೆನ್ನೈನ ಮಿತ್ರ ಧರ್ಮ ಮತ್ತವರ ತಂಡದವರು ರಾತ್ರಿಯಿಡೀ ಅಡುಗೆ ಮಾಡಿ ಹಂಚಲೆತ್ನಿಸಿ ಸೋತು ಹೋಗುತ್ತಿದ್ದರು. ಇವರ ಚಿತ್ರಾನ್ನ ಈಗ ಕೇಳುವವರು ಗತಿ ಇಲ್ಲ! ಬಿಸ್ಕತ್ತುಗಳ ರಾಶಿಯಂತೂ ಕೇಳಲೇಬೇಡಿ. ಜನ ಅದನ್ನು ನೋಡಿ ರೋಸಿ ಹೋಗಿದ್ದರು. ಕೊಟ್ಟಿದ್ದನ್ನು ಪಡೆದು ಅಂಗಡಿಗಳಿಗೆ ಕಡಿಮೆ ಬೆಲೆಗೆ ಮಾರಿಬಿಡುತ್ತಿದ್ದರು. ಒಂದೆಡೆಯಂತೂ ನಿರಾಶ್ರಿತರ ಕೇಂದ್ರದಲ್ಲಿ ‘ಊಟ ಬೇಡ, ಹಣ ಕೊಡಿ’ ಎಂದು ಕೇಳಿ ನಮ್ಮನ್ನು ದಂಗು ಬಡಿಸಿದ್ದರು.

ಈ ನಡುವೆ ರಾಜಕಾರಣಿಗಳ ಅಯೋಗ್ಯತನ ಬೇರೆ. ಚೆನ್ನೈಗೆ ಕೂಡಿಕೊಳ್ಳುವ ರಸ್ತೆಯ ಆರಂಭದಲ್ಲಿಯೇ ಒಂದಷ್ಟು ಪುಢಾರಿಗಳು ನಿಂತುಕೊಂಡು ಬರುವ ಲಾರಿಗಳನ್ನು ತಮ್ಮ ಗೋಡೌನಿನತ್ತ ತಿರುಗಿಸಿಕೊಳ್ಳುತ್ತಿದ್ದರು. ನಾವು ಇಲ್ಲಿಂದ ತುಂಬಿಸಿ ಕಳಿಸಿದ್ದ ಧಾನ್ಯದ ಚೀಲಗಳು ಅಲ್ಲಿ ಇಳಿಸಲ್ಪಡುತ್ತಿದ್ದವು. ಅದಕ್ಕೆ ಜಯಲಲಿತರದ್ದೋ ಕರುಣಾನಿಧಿಯದ್ದೋ ಚಿತ್ರ ಮೆತ್ತಿಸಿ ತಮಗೆ ಬೇಕಾದ ಸ್ಥಳಗಳಿಗೆ ಕಳಿಸಿಬಿಡುತ್ತಿದ್ದರು. ನಾವು ಕೊಂಡೊಯ್ದ ವಸ್ತುಗಳನ್ನು ಸೂಕ್ತ ಸ್ಥಳಕ್ಕೆ ಒಯ್ಯುವಲ್ಲಿ ಸಾಕು-ಸಾಕಾಗಿ ಹೋಗಿತ್ತು.

ಅತ್ತ ಅಗತ್ಯಕ್ಕೂ ಮೀರಿದ ವಸ್ತುಗಳ ಸಂಗ್ರಹವನ್ನು ಸಂಭಾಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಔಷಧಗಳು ಬೇಕೆಂದು ನಮಗೆ ಹೇಳಿದ ವೈದ್ಯರೇ ಅಲ್ಲಿಗೆ ಹೋಗುವ ವೇಳೆಗೆ ಅದಾಗಲೇ ಸಾಕಷ್ಟು ಬಂದಿರುವ ದಾಸ್ತಾನನ್ನು ತೋರಿಸಿ ನಾವು ತಂದಿರುವುದನ್ನು ಮರಳಿ ಒಯ್ದುಬಿಡಿ ಎಂದಿದ್ದರು. ಒಯ್ಯುವುದಾದರೂ ಎಲ್ಲಿಗೆ? ಅವರು ಇಟ್ಟುಕೊಂಡು ಮಾಡುವುದಾದರೂ ಏನು? ಚೆನ್ನೈಗೆ ಹರಿದು ಬಂದಿದ್ದ ಔಷಧದ ಮಹಾಪೂರದಲ್ಲಿ ಅರ್ಧ ಭಾರತದ ಆರೋಗ್ಯವನ್ನು ಸಂಭಾಳಿಸಬಹುದಿತ್ತೇನೋ? ಇವೆಲ್ಲ ಗೊತ್ತಿದ್ದವರೂ ಸುಮ್ಮನಾಗಲಿಲ್ಲ. ಹಣ ಸಂಗ್ರಹಣೆ ಮಾಡುತ್ತಲೇ ಇದ್ದರು. ಅದೆಷ್ಟು ಕೋಟಿಗಳಷ್ಟು ಹಣ ಅನೇಕರ ಜೇಬು ಸೇರಿತೋ ದೇವರೇ ಬಲ್ಲ. ಅವರಿಗೆಲ್ಲ ಪ್ರವಾಹ ಒಂದು ಮನಮೋಹಕ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು. ಅದನ್ನು ಬಳಸಿಕೊಂಡು ಅವರು ತಮ್ಮ ಅಕೌಂಟುಗಳನ್ನು ತುಂಬಿಸಿಕೊಳ್ಳುತ್ತಿದ್ದರು.

ಕೊಡಗಿನದ್ದೂ ಇದೇ ಕಥೆ. ನೆಮ್ಮದಿ ಕೇಂದ್ರಗಳಿಗೆಂದು ವಸ್ತುಗಳು ಪ್ರವಾಹದೋಪಾದಿಯಲ್ಲಿ ಬರುತ್ತಿದ್ದವು. ಲಾರಿಗಟ್ಟಲೆ ವಸ್ತುಗಳನ್ನು ತಂದವರು ಎಲ್ಲಿ ಇಳಿಸಬೇಕೆಂದು ಅರಿಯದೇ ಗಂಟೆಗಟ್ಟಲೆ ತಿರುಗಾಡುತ್ತಲೇ ಉಳಿಯುತ್ತಿದ್ದರು. ಕೊನೆಗೆ ಎಲ್ಲಾದರೊಂದು ಕಡೆ ಅದನ್ನು ಒತ್ತಾಯಪೂರ್ವಕವಾಗಿ ತುರುಕಿ ಮರಳಿಬಿಡುತ್ತಿದ್ದರು. ಮಡಿಕೇರಿಯಲ್ಲಿ ಬಿಸ್ಕತ್ತಿನ ಅರಮನೆಯೇ ಕಟ್ಟಬಹುದಿತ್ತು. ಅಷ್ಟು ರಾಶಿ! ನಿಜವಾದ ಸಮಸ್ಯೆ ಶುರುವಾಗುವುದು ಪ್ರವಾಹವಿದ್ದಾಗಲಲ್ಲ; ಅದರ ನೀರು ಇಳಿದಾಗ. ಪ್ರವಾಹದ ಹೊತ್ತಲ್ಲಿ ಅವರೆಡೆಗೆ ಕಾಳಜಿಯ ಮಹಾಪೂರ ಹರಿದಿರುತ್ತದೆ. ಅವರಿದ್ದೆಡೆ ಅನ್ನ, ನೀರುಗಳು ಬಿಡಿ, ಗೋಡಂಬಿ, ದ್ರಾಕ್ಷಿಗಳೂ ಬರುತ್ತವೆ. ಆಮೇಲೆ ಜನ ನಿಧಾನವಾಗಿ ಕರಗಲಾರಂಭಿಸುತ್ತಾರೆ. ನೀರಿಂಗಿ ಮನೆಗಳತ್ತ ಮರಳುವಾಗ ಅಕ್ಷರಶಃ ಒಂಟಿಯಾಗಿಬಿಡುತ್ತಾರೆ. ಮನೆಯೊಳಗೆ ಹೊಕ್ಕ ಚರಂಡಿ ನೀರು ಗೋಡೆಗಳ ಬಣ್ಣವನ್ನೇ ಬದಲಾಯಿಸಿಬಿಟ್ಟಿರುತ್ತದೆ. ಕೆಸರು ಮನೆಯೊಳಗೆ ಸೇರಿಕೊಂಡು ನೀರಿಂಗಿದ ನಂತರವೂ ಅಣಕಿಸುತ್ತಲೇ ಇರುತ್ತದೆ. ಊರತುಂಬ ಸತ್ತುಬಿದ್ದಿರುವ ನಾಯಿ, ದನಗಳು ಕೆಟ್ಟ ವಾಸನೆಯನ್ನು ಹರಡಿಸುತ್ತಲೇ ಇರುತ್ತವೆ. ವ್ಯಕ್ತಿ ಬಲುಬೇಗ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗಿಡುತ್ತಾನೆ. ಹದಿನೈದು ದಿನಗಳ ಹಿಂದೆ ತುಳುಕಾಡುತ್ತಿದ್ದ ಔಷಧಗಳು ಈಗ ಹುಡುಕಾಡಿದರೂ ಸಿಗಲಾರದು. ಸಂಕಟಗಳು ಇಲ್ಲಿಗೇ ಮುಗಿಯಲೊಲ್ಲದು. ಮನೆಯೊಳಗಿನ ವಸ್ತುಗಳು ಕಾಣೆಯಾಗಿರುತ್ತವೆ, ಹಣ-ಒಡವೆಗಳನ್ನು ಸಮಯಸಾಧಕರು ಲೂಟಿಗೈದುಬಿಟ್ಟಿರುತ್ತಾರೆ. ಯಾರಿಗೂ ಹೇಳಿಕೊಳ್ಳಲಾಗದ ವೇದನೆ ಅದು.

ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಪ್ರವಾಹ ಬಂದಾಗಲೂ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದುದನ್ನು ನಾನೇ ನೋಡಿದ್ದೇನೆ. ಏಕೆಂದು ಕೇಳಿದರೆ ಮನೆಯ ವಸ್ತುಗಳನ್ನು ಯಾರಾದರೂ ಕಳವು ಮಾಡಿಬಿಡುವರೆಂಬ ಭಯ ಅವರಿಗೆ. ನೆಮ್ಮದಿ ಕೇಂದ್ರಕ್ಕೆ ಬಂದು ಸೇರಿಕೊಂಡರೂ ಮನೆಯವರೊಬ್ಬರಾದರೂ ಪ್ರವಾಹಪೀಡಿತ ಮನೆಗಳಲ್ಲೇ ಉಳಿದಿರುತ್ತಾರೆ! ಆದರೆ ಅಂದು ಅವರ ಆಕ್ರಂದನಕ್ಕೆ ಪ್ರತಿಸ್ಪಂದಿಸುವವರು ಯಾರೂ ಇರಲಾರರು. ಎಲ್ಲರಿಗೂ ಈಗ ಕಣ್ಣೆದುರಿಗಿರುವ ಸಮಸ್ಯೆಯನ್ನು ಮುಂದಿಟ್ಟು ಹಣ-ವಸ್ತುಗಳನ್ನು ಸಂಗ್ರಹಿಸುವ ಬಯಕೆ. ಹಾಗಂತ ಎಲ್ಲರ ಮನಸ್ಥಿತಿಗಳು ಕೆಟ್ಟದ್ದೆಂದು ನಾನು ಹೇಳುವುದಿಲ್ಲ. ಆದರೆ ಬಹುತೇಕರು ಪ್ರವಾಹದ ಪರಿಸ್ಥಿತಿಯನ್ನು ಮಾಧ್ಯಮಗಳಲ್ಲಿ ನೋಡಿಯೇ ಸಹಾಯ ಮಾಡಲು, ಕೇಳಲು ಮುಂದಡಿಯಿಟ್ಟುಬಿಡುತ್ತಾರೆ. ಆ ಪ್ರದೇಶಗಳ ಪರಿಚಯವೂ ಅವರಿಗಿರುವುದಿಲ್ಲ, ಅಲ್ಲಿನ ಜನರ ನೈಜ ಪರಿಸ್ಥಿತಿಯ ಚಿತ್ರಣವೂ ಗೊತ್ತಿರುವುದಿಲ್ಲ. ನಿನ್ನೆ ಬೆಂಗಳೂರಿನ ವ್ಯಕ್ತಿಯೊಬ್ಬ ಕರೆಮಾಡಿ ಪ್ರವಾಹ ಸಂತ್ರಸ್ತರಿಗೆ ಹಣ ಕೇಳಲು ಹೋದಾಗ ಮಾರವಾಡಿಗಳು ಮತ್ತು ಮುಸಲ್ಮಾನರು ಬೈದು ಕಳಿಸಿದರೆಂದು ನನ್ನೆದುರಿಗೆ ವರದಿ ಇಟ್ಟ. ಅವನೊಳಗೆ ಆಕ್ರೋಶ ಮಡುಗಟ್ಟಿತ್ತು. ಆದರೆ ಈ ಬಗೆಯ ಪರಿಸ್ಥಿತಿಗಳು ನಿರ್ವಣವಾದಾಗ ಎಲ್ಲರಿಗಿಂತಲೂ ಮೊದಲು ದಾನಕ್ಕೆ ನಿಲ್ಲುವುದೇ ಮಾರವಾಡಿಗಳು. ತಮ್ಮ ಕೈಮೀರಿ ಸಹಕಾರ ಕೊಟ್ಟು ತಾವೇ ವ್ಯವಸ್ಥಿತವಾಗಿ ಅದನ್ನು ತಮ್ಮ ಸಂಘಗಳ ಮೂಲಕ ತಲುಪಿಸುತ್ತಾರೆ. ಆದರೆ ಕೆಲವರು ಅವರ ಬಳಿ ದುಡ್ಡು ಕೇಳಲು ಹೋಗುವುದಲ್ಲದೆ ಅವರು ನಿರಾಕರಿಸಿದಾಗ ಜಾತಿ-ಪ್ರದೇಶಗಳನ್ನು ನೆನಪಿಸಿಕೊಟ್ಟು ಅವರನ್ನು ನಿಂದಿಸುವ ಪರಿ ಇದೆಯಲ್ಲ ಅದು ಪ್ರವಾಹಕ್ಕಿಂತಲೂ ಕೆಟ್ಟದ್ದು. ನನಗೆ ಕರೆ ಮಾಡಿದ ವ್ಯಕ್ತಿ ಪ್ರವಾಹಪೀಡಿತ ಪ್ರದೇಶದವನೇ ಆಗಿದ್ದು ಬೆಂಗಳೂರಿನಲ್ಲಿ ಕೆಲಸಕ್ಕಿರುವವನು ಎಂದು ಅರಿವಾದಾಗಲಂತೂ ಕೋಪ ನೆತ್ತಿಗೇರಿಬಿಟ್ಟಿತ್ತು. ಅಲ್ಲವೇ ಮತ್ತೆ? ಇಂತಹ ಕಠಿಣ ಸಂದರ್ಭಗಳಲ್ಲಿ ಊರಿನ ಜನರ ಜೊತೆ ನಿಲ್ಲಬೇಕಾದವನಿಗೆ ಬೆಂಗಳೂರಿನಲ್ಲಿ ಏನು ಕೆಲಸ? ಪ್ರತ್ಯಕ್ಷ ಜನರ ಸಹಕಾರಕ್ಕೆ ಶ್ರಮದಾನ ಮಾಡುತ್ತ ಅಲ್ಲಿಗೆ ಬರುವ ಸಾಮಗ್ರಿಗಳನ್ನು ಸೂಕ್ತ ವಿಲೇವಾರಿ ಮಾಡುತ್ತ ಜನರ ಕ್ಷೇಮ ನೋಡಿಕೊಳ್ಳಬೇಕಾದವ ಇಲ್ಲಿ ಹಣ ಸಂಗ್ರಹಣೆಯ ಕಾಯಕ ಮಾಡುತ್ತಿದ್ದಾನೆ. ಪ್ರವಾಹ ಪೀಡಿತರಿಗಾಗಿ ನಾಲ್ಕು ದಿನ ಕಂಪನಿಯ ರಜೆ ಕರಗಿಸಲೊಲ್ಲದ ಇಂಥವರಿಂದ ಪ್ರಾಮಾಣಿಕತೆ ನಿರೀಕ್ಷಿಸಲು ಸಾಧ್ಯವೇ?

ಈ ಬಾರಿ ಪ್ರವಾಹದ ಸಂದರ್ಭ ಅನೇಕರಿಗೆ ಸುಗ್ಗಿ. ಕೆಲವರು ತಮ್ಮ ವೈಯಕ್ತಿಕ ಸಂಖ್ಯೆಗಳನ್ನೇ ಕೊಟ್ಟು ಅದಕ್ಕೆ ಪೇಟಿಎಮ್ ಗೂಗಲ್ ಪೇಗಳ ಮೂಲಕ ಹಣ ಕಳಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಅದು ಸೂಕ್ತ ಜಾಗಕ್ಕೆ ತಲುಪುವುದಾ? ಕೊನೆಯ ಪಕ್ಷ ಸರಿಯಾದ ಕೆಲಸಕ್ಕೆ ಬಳಕೆಯಾಗುವುದಾ ಎಂದು ಕಣ್ಣಿಡುವವರು ಯಾರು? ನನಗೆ ಗೊತ್ತು ಈ ಹೊತ್ತಲ್ಲಿ ಹೀಗೆ ಹೇಳಿದರೆ ಕೊಡಬೇಕೆಂದುಕೊಂಡವರು ಸ್ವಲ್ಪ ಹಿಂದೇಟುಹೊಡೆಯಬಹುದು. ಆದರೆ ಮತ್ತೆ ಮತ್ತೆ ಹೀಗೆ ಮೋಸವೇ ನಡೆಯುತ್ತಿರುವುದು ಅರಿವಾಗಿಬಿಟ್ಟರೆ ಶಾಶ್ವತವಾಗಿ ಸೇವಾ ಮನೋಭಾವವೇ ಇಲ್ಲವಾಗಿಬಿಡಬಹುದು. ಅದಕ್ಕೆ ಕೊಡುವವರೂ ಎಚ್ಚರಿಕೆ ವಹಿಸಲಿ ಎನ್ನುವುದು ಅಷ್ಟೇ. ನೆಲಮಟ್ಟದಲ್ಲಿ ಕೆಲಸ ಮಾಡುತ್ತಿರುವ, ಮಾಡಬಲ್ಲ ಸಂಘಟನೆಗಳೊಂದಿಗೆ ಜೋಡಿಸಿಕೊಳ್ಳಿ. ಅನೇಕ ಬಾರಿ ಹಣ, ವಸ್ತುಗಳಿಗಿಂತ ಸಾಂತ್ವನ ಹೇಳುವವರು ಬಲು ಮುಖ್ಯ. ಪ್ರತ್ಯಕ್ಷ ವ್ಯಕ್ತಿಯೇ ಅಲ್ಲಿದ್ದರೆ ಆತ ಕಳಿಸುವ ರಗ್ಗು-ಟವೆಲ್ಲುಗಳಿಗಿಂತ ಹೆಚ್ಚಿನ ಕೆಲಸವಾಗುತ್ತದೆ. ಅವೆಲ್ಲವೂ ನಮ್ಮ ಸಾಮರ್ಥ್ಯದ ಮೇಲೆ ನಿರ್ಭರವಾದುದು.

ಕೊನೆಗೂ ಹೇಳಬೇಕಾದ್ದು ಒಂದೇ. ಜನರ ಸಂಕಟಕ್ಕೆ ನಾವು ಪ್ರಾಮಾಣಿಕ ಪರಿಹಾರವಾಗಿ ನಿಲ್ಲುವಂತಾದರೆ ಸಾಕು ಅಷ್ಟೇ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

One Reply to “ಜನರ ಸಂಕಟಕ್ಕೆ ಪ್ರಾಮಾಣಿಕ ಪರಿಹಾರವಾಗಿ ನಿಲ್ಲೋಣ”

Leave a Reply

Your email address will not be published. Required fields are marked *