ಬೆಂಗಳೂರು: ಕರ್ನಾಟಕ ಏಕೀಕರಣದ ಸಂಭ್ರಮ, ಸಡಗರದಲ್ಲಿರುವ ನಾವು, ಕನ್ನಡದಲ್ಲಿಯೇ ಮಾತನಾಡುತ್ತೇವೆಂಬ ಸಂಕಲ್ಪದೊಂದಿಗೆ ಸಮೃದ್ಧ ಕರ್ನಾಟಕ ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದು ಹಿರಿಯ ನಟ ಎಚ್.ಸಿ. ದತ್ತಾತ್ರೇಯ (ದತ್ತಣ್ಣ) ಅಭಿಪ್ರಾಯ ವ್ಯಕ್ತಪಡಿಸಿದರು.
ಚಾಮರಾಜಪೇಟೆಯಲ್ಲಿರುವ ಸಂಸ್ಕೃತ ವಿಶ್ವವಿದ್ಯಾಲಯವು ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಏಕೀಕರಣಕ್ಕೆ ಕಾರಣರಾದವರನ್ನು ಸ್ಮರಿಸುವುದು ಅಷ್ಟೇ ಅಲ್ಲ. ತಮ್ಮ ಕರ್ತವ್ಯ ಏನೆಂದು ತಿಳಿಯುವ ಕೆಲಸವಾಗಬೇಕು ಎಂದು ಕರೆ ನೀಡಿದರು.
ಒಂದೆಡೆ ತಮಿಳರ ಪ್ರಾಬಲ್ಯ, ಮತ್ತೊಂದೆಡೆ ಉರ್ದು, ತೆಲುಗು, ಮರಾಠಿ ಪ್ರಾಬಲ್ಯದಿಂದ ಹರಿದು ಹಂಚಿಹೋಗಿದ್ದ ಕನ್ನಡಿಗರು ಮನೆ, ಮನದಲ್ಲಿ ಕನ್ನಡವೆಂದರೂ ಮಾತೃಭಾಷೆ ಮಾತನಾಡಲು ಅಸ್ಪೃಶ್ಯರಾಗಿ ಬದುಕಬೇಕಿದ್ದ ಕಾಲವೊಂದಿತ್ತು. ಪರಕೀಯ ಭಾವನೆಯಲ್ಲಿ ಬದುಕುತ್ತಿದ್ದ ಕಾಲದಲ್ಲಿ ಕನ್ನಕ ಕುಲಪುರೋಹಿತ ಆಲೂರು ವೆಂಕಟರಾಯರು ಹಳ್ಳಿಹಳ್ಳಿಗೆ ಸುತ್ತಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ ಎಂದರು.
ಆದರೆ ನಾವು ಕನ್ನಡಕ್ಕಾಗಿ ಏನು ಮಾಡುತ್ತಿದ್ದೇವೆ ಎಂದು ಕೇಳಿಕೊಳ್ಳಬೇಕಿದೆ. ಕನ್ನಡ ಮಾತನಾಡುವುದು, ಕನ್ನಡ ಪುಸ್ತಕ ಓದುವುದು, ಮನೆಗೆ ಕನ್ನಡ ಪತ್ರಿಕೆಗಳನ್ನು ತರಿಸುವುದು ಇಂತಹ ಸಣ್ಣ ಪುಟ್ಟ ಕೆಲಸ ಮಾಡಿದರೆ ಸಾಕು. ಮತ್ತೇನೂ ಬೇಡ ಎಂದು ತಿಳಿಸಿದರು.
ಸಂಸ್ಕೃತ ಎಲ್ಲ ಭಾಷೆಗಳ ಹಾಗಲ್ಲ. ಜಗತ್ತಿನಾದ್ಯಂತ ಇರುವ ಜ್ಞಾನ ಸಂಪತ್ತಿನ ಭಂಡಾರವೇ ಆಗಿದೆ ಎಂಬುದು ನನ್ನ ತಿಳಿವಳಿಕೆಯಾಗಿದೆ. ಇಂತಹ ಜಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.
ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಅಹಲ್ಯಾ ಮಾತನಾಡಿ, ಇಂದಿನ ಕನ್ನಡ ಕಂಗ್ಲೀಷೊ, ಇಂಗ್ ಕನ್ನಡವೋ ಗೊತ್ತಿಲ್ಲ. ಎಲ್ಲ ಭಾಷೆಯನ್ನು ಮಿಶ್ರಣ ಮಾಡಿ ಕನ್ನಡ ಮಾತನಾಡುತ್ತಿದ್ದೇವೆ. ಕನ್ನಡಿಗರು ವಿಶಾಲ ಹೃದಯದವರು ಎಂಬುದು ಗೊತ್ತಿದೆ. ಆದರೆ. ಭಾಷೆ ವಿಚಾರದಲ್ಲಿ ತುಂಬಾ ಔದಾರ್ಯತೋರಿಸುವ ಬದಲು ಕನ್ನಡ ಉಳಿಸಿ ಬೆಳೆಸಲು ಜಾಗೃತರಾಗೋಣ ಎಂದು ಹೇಳಿದರು.
ಕನ್ನಡಕ್ಕೆ ಮೊದಲ ಆದ್ಯತೆಯನ್ನು ನೀಡೋಣ ನಂತರ ಬೇರೆ ಭಾಷೆಗೆ ನೀಡೋಣ. ಕಣ ಕಣದಲ್ಲಿಯೂ ಕನ್ನಡತನವನ್ನು ತುಂಬಿಕೊಳ್ಳೋಣವೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿವಿ ಕುಲಸಚಿವ ವಿಶ್ವನಾಥ ಪಿ ಹಿರೇಮಠ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಬಾಲಯ್ಯ ಸೇರಿ ಹಲವರು ಉಪಸ್ಥಿತರಿದ್ದರು.
ದೈನಂದಿನ ಚಟುವಟಿಕೆಗಳಲ್ಲಿ ಕನ್ನಡವನ್ನು ಬಳಸೋಣ. ಅನ್ಯ ಭಾಷಿಕರಿಗೆ ಅವರದ್ದೇ ಭಾಷೆಯಲ್ಲಿ ಮಾತನಾಡುವ ಬದಲಾಗಿ ಕನ್ನಡದಲ್ಲಿ ಮಾತನಾಡಿದರೆ ಸಹಜವಾಗಿ ಅವರು ಕೂಡ ಕನ್ನಡ ಕಲಿಯಲಿದ್ದಾರೆ. ಈ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗ ಮಾಡಬೇಕಿದೆ.
– ಕೆ.ಎನ್. ಚನ್ನೇಗೌಡ, ವಿಜಯವಾಣಿ ಸಂಪಾದಕ