More

    ತಂಬಾಕು ದುಷ್ಪರಿಣಾಮ ಬಗ್ಗೆ ಗವಿಮಠ ಜಾಗೃತಿ ಮೂಡಿಸಲಿ

    ಕೊಪ್ಪಳ: ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿದ್ದು, ಸಾಮಾಜಿಕ ಜಾಗೃತಿಗೆ ಹೆಸರಾದ ಗವಿಮಠ, ತಂಬಾಕು ಸೇವನೆಯಂತಹ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಿ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಆಶಯ ವ್ಯಕ್ತಪಡಿಸಿದ್ದಾರೆ.

    ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಕೈಲಾಸ ಮಂಟಪದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಅನುಭಾವಿಗಳ ಅಮೃತ ಚಿಂತನಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಶ್ರೀಮಠವು ಅನೇಕ ಜಾಗೃತಿ ಕಾರ್ಯ ಮಾಡುತ್ತಿದೆ. 2 ಸಾವಿರ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ತಂಬಾಕಿನಿಂದಾಗುವ ದುಷ್ಪರಿಣಾಮಗಳ ಕುರಿತು ಶ್ರೀಗಳು ಜಾಗೃತಿ ಮೂಡಿಸಲಿ ಎಂದು ಮನವಿ ಮಾಡಿದರು.

    ನಮ್ಮದು ಯುವಕರು ಹೆಚ್ಚಿರುವ ದೇಶ. ಇನ್ನೆರೆಡು ದಶಕ ಕಳೆದರೆ ಮುದುಕರ ದೇಶವಾಗಲಿದೆ. ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಇದು ಆತಂಕಕಾರಿ. ಸದ್ಗುಣಗಳನ್ನು ಅಳವಡಿಸಿಕೊಂಡು ಜೀವನ ರೂಪಿಸಿಕೊಳ್ಳಿ. ತಂದೆ-ತಾಯಿ ಕೂಲಿಯವರೆಂಬ ಕೀಳರಿಮೆ ಬೇಡ. ನೀವು ಏನಾಗಬೇಕೆಂಬು ದನ್ನು ಇಂದೇ ನಿರ್ಧರಿಸಿ. ಆ ನಿಟ್ಟಿನಲ್ಲಿ ನಿರಂತರ ಶ್ರಮಪಡಿ. ಟೀಕೆಗಳಿಗೆ ಅಂಜದಿರಿ. ಒಂದು ನಿಮಿಷವನ್ನೂ ವ್ಯರ್ಥ ಮಾಡಬೇಡಿ. ಸಾಧನೆಗೆ ಬಡತನ ಅಡ್ಡಿಯಾಗದು. ಗವಿಶ್ರೀಗಳು, ಪ್ರಧಾನಿ ಮೋದಿ ಅವರಂಥವರೂ ಬಡತನದಿಂದ ಬಂದವರು. ಮೋದಿ ಚಿಕ್ಕವರಿದ್ದಾಗ ಪ್ರತಿ ದಿನ ಒಬ್ಬೊಬ್ಬರ ಮನೆಯಲ್ಲಿ ಊಟ ಮಾಡುತ್ತಿದ್ದರು. ಇಂದು ಜಗತ್ತೇ ಮೆಚ್ಚುವ ನಾಯಕರಾಗಿದ್ದಾರೆ. ಎಲ್ಲರಲ್ಲೂ ಆ ಸಾಮರ್ಥ್ಯವಿದೆ. ಅದನ್ನು ಬಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.

    ಸ್ವೀಡನ್​ನಲ್ಲಿ ಸಾಕಷ್ಟು ನೀರಿದ್ದರೂ, ಅಲ್ಲಿ ಮಿತ ಬಳಕೆ ಮಾಡಲಾಗುತ್ತಿದೆ. ನಮ್ಮಲ್ಲಿ ಸ್ವಲ್ಪ ನೀರಿದ್ದರೂ ಹೆಚ್ಚು ಬಳಸುತ್ತೇವೆ. ಈ ಬಗ್ಗೆ ಎಲ್ಲರೂ ಚಿಂತಿಸಬೇಕು. ನಾನು ಹನಿ ನೀರನ್ನೂ ವ್ಯರ್ಥ ಮಾಡುವುದಿಲ್ಲ ಎಂದು ಹೇಳಿದರು.

    ಚಿಂತಕಿ ಡಾ.ವೀಣಾ ಬನ್ನಂಜೆ ಮಾತನಾಡಿ, ಜನಸಾಗರ ವನ್ನು ಒಗ್ಗೂಡಿಸುವ ಶಕ್ತಿ ಭಕ್ತಿಗಿದೆ. ಅದೊಂದು ಆಧ್ಯಾತ್ಮಿಕ ಶಕ್ತಿ. ನಂಬಿಕೆ ಹುಟ್ಟುವುದು ಅದ್ಭುತ ಶ್ರದ್ಧೆಯಿಂದ. ನಂಬಿಕೆ ಅಲ್ಲಾಡಿಸುವುದು ಅಪಚಾರ ಮಾಡಿದಂತೆ. ಭಕ್ತಿ ಮಾರ್ಗದ ದಾರ್ಶನಿಕರ ಆದರ್ಶ ಪಾಲಿಸಬೇಕು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕ್ರೋಧ, ಅಸೂಯೆ, ತಾತ್ಸಾರ ಭಾವ ಬೆಳೆಯುತ್ತಿದೆ. ಸಂತೋಷದ ದಿನಗಳು ಮರೆಯಾಗುತ್ತಿವೆ ಎಂದರು.

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಯೋಗಪಟು ಖುಷಿಗೌಡ ಯೋಗ ಪ್ರದರ್ಶಿಸಿದರು. ಅನಾಥ ಮಕ್ಕಳಿಗಾಗಿ ಹೋರಾಡಿದ ಚೆನ್ನಮ್ಮ ಹಳ್ಳಿಕೇರಿ, ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ, ಡಾ.ವಿಜಯ ಸಂಕೇಶ್ವರ ದಂಪತಿ ಸೇರಿ ಇತರರನ್ನು ಸನ್ಮಾನಿಸಲಾಯಿತು. ಇಲಕಲ್ಲ ಚಿತ್ತರಗಿ ಮಠದ ಗುರುಮಹಾಂತ ಸ್ವಾಮೀಜಿ, ಬುಕ್ಕಸಾಗರದ ಕರಿಸಿದ್ದೇಶ್ವರ ಮಠದ ವಿಶ್ವರಾಧ್ಯಸ್ವಾಮೀಜಿ, ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ, ಮಹಾಲಿಂಗಪುರ ಸಿದ್ಧಾರೂಢ ಮಠದ ಸಹಜಾನಂದ ಸ್ವಾಮೀಜಿ, ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಇದ್ದರು.

    ಡಾ.ವಿಜಯ ಸಂಕೇಶ್ವರಗೆ ವಿಶ್ವಚೇತನ ಪ್ರಶಸ್ತಿ

    ಮಾಂಜರಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರ ದೇವರ ವಿಶಾಳಿ ಜಾತ್ರಾ ಮಹೋತ್ಸವ ಜ.23, 24 ಹಾಗೂ 25ರಂದು ಜರುಗಲಿದೆ. ಜಾತ್ರೋತ್ಸವ ನಿಮಿತ್ತ ಕಾಡಸಿದ್ಧೇಶ್ವರ ಸಂಸ್ಥಾನ ಮಠ ಹಾಗೂ ವೀರಭದ್ರ ದೇವಸ್ಥಾನದ ವತಿಯಿಂದ ನೀಡುವ ‘ವಿಶ್ವಚೇತನ ಪ್ರಶಸ್ತಿ’ಯನ್ನು ಈ ಬಾರಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರಿಗೆ ಕೊಡಮಾಡಲಾಗುವುದು ಎಂದು ಶ್ರೀಮಠದ ಆಡಳಿತ ಅಧಿಕಾರಿ ಅಡವಯ್ಯ ಅರಳಿಕಟ್ಟಿಮಠ ತಿಳಿಸಿದ್ದಾರೆ. ಜ.13ರಿಂದ 23ರವರೆಗೆ ಪ್ರತಿದಿನ ಸಂಜೆ 4ರಿಂದ 6.30ರವರೆಗೆ 11 ಲಕ್ಷ ಬಿಲ್ವಾರ್ಚನೆ ಹಾಗೂ ರುದ್ರಾಕ್ಷ ಅರ್ಚನೆ ನಡೆಯಲಿದೆ. ಮಕರ ಸಂಕ್ರಮಣ ಪುಣ್ಯಸ್ನಾನ, ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯರ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಸಭೆ ಜ.15ರಂದು ಕೃಷ್ಣಾ ನದಿ ತೀರದ ಕಲ್ಲೋಳದಲ್ಲಿ ನಡೆಯಲಿದೆ. ಜ.22ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ, 23ರಂದು ಬನ್ನಿ ಸಸಿಗಳ ಉಚಿತ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ, 24ರಂದು ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಧರ್ಮ ಸಮಾರಂಭ, 25ರ ಸಂಜೆ 4 ಗಂಟೆಗೆ ವೀರಭದ್ರ ದೇವರ ಮಹಾರಥೋತ್ಸವ ನಡೆಯಲಿದೆ. ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಗೋ ಕೈಲಾಸ ಉದ್ಘಾಟನೆ, ಯಾತ್ರಿ ನಿವಾಸಕ್ಕೆ ಅಡಿಗಲ್ಲು ಸಮಾರಂಭ, ನೆರೆ ಸಂತ್ರಸ್ತರಿಗೆ ಗೃಹ ನಿರ್ವಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts