ಸಿದ್ದಾಪುರ: ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠ ಆವಾರದ ಗೋ ಸ್ವರ್ಗದಲ್ಲಿ ಆಯೋಜಿಸಿದ್ದ ವಿಶ್ವ ಮಣ್ಣಿನ ದಿನದ ಮುಂದಿನ ಭಾಗವಾಗಿ ಬೆಳೆ ವೈವಿಧಿ್ಯಕರಣದ ಮೂಲಕ ಮಣ್ಣಿನ ಆರೋಗ್ಯ ರಕ್ಷಣೆ ಕುರಿತಂತೆ ರೈತ ಸ್ನೇಹಿ ಸಂವಾದ ಕಾರ್ಯಕ್ರಮ ನಡೆಯಿತು.
ಭಾಕೃಅಪ ರಾಷ್ಟ್ರೀಯ ಮಣ್ಣು ಸರ್ವೆಕ್ಷಣಾ ಭೂ ಬಳಕೆ ನಿಯೋಜನೆ ಸಂಸ್ಥೆ, ಪ್ರಾದೇಶಿಕ ಕಚೇರಿ ಬೆಂಗಳೂರು, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಶಿರಸಿ ಮತ್ತು ಭಾನ್ಕುಳಿ ಗೋ ಸ್ವರ್ಗ ಸಂಶೋಧನಾ ಕೇಂದ್ರಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಷ್ಟ್ರೀಯ ಮಣ್ಣು ಸರ್ವೆಕ್ಷಣಾ ಮತ್ತು ಭೂ-ಬಳಕೆ ನಿಯೋಜನೆ ಸಂಸ್ಥೆ ಬೆಂಗಳೂರು ಹಿರಿಯ ವಿಜ್ಞಾನಿ ಡಾ.ಆರ್. ಶ್ರೀನಿವಾಸನ್, ಡಾ. ಚರಣಕುಮಾರ ಜಿ.ಆರ್., ಡಾ.ಶ್ವೇತಾ ಕುಮಾರಿ ಅವರು ಅತ್ಯಮೂಲ್ಯವಾದ ಮಣ್ಣಿನ ಸ್ವಾಸ್ಥ್ಯವನ್ನು ಪರ್ಯಾಯ ಬೆಳೆಗಳು ಅಥವಾ ಬೆಳೆಗಳ ಬದಲಾವಣೆ ಮೂಲಕ ಹೇಗೆ ಕಾಯ್ದುಕೊಳ್ಳಬಹುದು ಹಾಗೂ ಇದರಿಂದ ಸಸ್ಯಗಳಲ್ಲಿ ರೋಗ ನಿಮೂಲನ ಹೇಗೆ ಸಾಧ್ಯ ಎನ್ನುವ ಕುರಿತು ಮಾಹಿತಿ ನೀಡಿದರು.
ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಡಾ. ರೂಪಾ ಪಾಟೀಲ ಗೋಸ್ವರ್ಗದ ಸಂಶೋಧನಾ ಕೇಂದ್ರದಲ್ಲಿ ಆಗಾಗ ಸರಣಿ ಕಾರ್ಯಕ್ರಮ ಆಯೋಜಿಸಿ ರೈತ ಮಿತ್ರರಿಗೆ ಮಾಹಿತಿ ನೀಡಲು ಐಸಿಎಆರ್ನಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. </p><p>ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅರುಣ ಅವರು ಮಣ್ಣು ಪರೀಕ್ಷೆ ಮತ್ತು ಬೆಳೆಗಳ ಇಳುವರಿ ಮೇಲೆ ಅದರ ಪ್ರಭಾವ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದಾಪುರ ಹವ್ಯಕ ಮಂಡಲ ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ ಇಂತಹ ರೈತೋಪಯೋಗಿ ಕಾರ್ಯಕ್ರಮ ಗಳು ಹೆಚ್ಚು ರೈತರಿಗೆ ತಲುಪಲು ಅನುಕೂಲವಾಗುವ ದಿಸೆಯಲ್ಲಿ ಮುಂದಿನ ದಿನಗಳಲ್ಲಿ ಮಂಡಲ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಮಣ್ಣು ಪರೀಕ್ಷೆ ವಿಧಾನ, ಪರ್ಯಾಯ ಬೆಳೆಗಳ ಕುರಿತು ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮುಖ್ಯಸ್ಥ ಆರ್.ಎಸ್. ಹೆಗಡೆ ಹರಗಿ, ಡಾ. ಗಂಗಾಧರ, ಇತರರು ಉಪಸ್ಥಿತರಿದ್ದರು. ಗೋಸ್ವರ್ಗ ಪ್ರಭಾರಿ ಎಂ.ಜಿ. ರಾಮಚಂದ್ರ ಮರ್ಡಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎಸ್. ಹೆಗಡೆ ಶಿರಸಿ ಹಾಗೂ ಎಂ.ವಿ. ಹೆಗಡೆ ಮುತ್ತಿಗೆ ಕಾರ್ಯಕ್ರಮ ನಿರ್ವಹಿಸಿದರು.