ಕಾಂಗ್ರೆಸ್​ ಬಾಬ್ರಿ ಮಸೀದಿ ಅಜೆಂಡಾ ಮೇಲೆ ಎಲೆಕ್ಷನ್​ಗೆ ಹೋಗಲಿ; ಈಶ್ವರಪ್ಪ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಿಸುತ್ತೇವೆ ಎಂದು ಕಾಂಗ್ರೆಸಿಗರು ಲೋಕಸಭೆ ಚುನಾವಣೆಗೆ ಹೋಗಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಹಿರಿಯ ಮುಖಂಡ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.

ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸೋಮವಾರ ನಗರಕ್ಕೆ ಅಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸಿಗರಿಗೆ ಯಾವುದೇ ವಿಷಯಗಳಿಲ್ಲ, ಹೀಗಾಗಿ ಬಿಜೆಪಿ ವಿರುದ್ಧ ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಾಲ್ಕೂವರೆ ವರ್ಷ ಬಿಟ್ಟು ಈಗ ರಾಮ ಮಂದಿರ ಪ್ರಸ್ತಾಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಾವು ಮಂದಿರ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ. ಪ್ರಧಾನಿ ಮೋದಿ ಅವರೇ ಅಡ್ಡ ಬಂದರೂ ನಿರ್ಮಾಣ ಮಾಡೇ ತೀರುತ್ತೇವೆ. ಇನ್ನು ಕೆಲವೇ ದಿನಗಳಲ್ಲಿ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಗಲಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವಕಾಶವಾದಿ. ಸಿಎಂ ಆಗುವ ಅವಕಾಶ ಇದ್ದರೆ ಯಾವ ಪಕ್ಷಕ್ಕೂ ಬರುತ್ತಾರೆ. ಬಿಜೆಪಿಯವರು ನಿಮ್ಮನ್ನು ಸಿಎಂ ಮಾಡುತ್ತೇವೆ ಅಂತ ಹೇಳಿದ್ರೆ ಸಾಕು, ಬಿಜೆಪಿಗೂ ಬರಲು ಸಿದ್ಧರಿದ್ದಾರೆ. ಆದರೆ ನನ್ನನ್ನು ಏನೇ ಮಾಡಿದರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಬಿಜೆಪಿ ಬಿಟ್ಟು ಹೋದವರ್ಯಾರೂ ಉದ್ಧಾರ ಅಗಿಲ್ಲ. ಮರಳಿ ಇಲ್ಲಿಗೆ ಬಂದೇ ಎಲ್ಲವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಗಂಗಾ ನದಿಯಂತೆ. ಎಲ್ಲವನ್ನು ಸೇರಿಕೊಳ್ಳುವಷ್ಟು ಪವಿತ್ರವಾಗಿದೆ. ಗಲೀಜು ಎಂದು ಗೊತ್ತಾದರೆ ನಾವೇ ಇಲ್ಲಿಯೇ ಉಗಿದು ಮುಂದೆ ಹೋಗುತ್ತೇವೆ. ಸಿದ್ದರಾಮಯ್ಯ ಅವರಂತೆ ಕೀಳುಭಾಷೆ ಬಳಸಲು ಬರಲ್ಲ. ನಮ್ಮದು ಶಿಸ್ತಿನ ಪಕ್ಷ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗಿಂತ ಸಿದ್ದರಾಮಯ್ಯ ಕೆಟ್ಟವರೇನು ಎಂದು ಪ್ರಶ್ನಿಸುವ ಮೂಲಕ ಬಂದರೆ ಬರಲಿ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ, ಸಂಸದ ಭಗವಂತ ಖೂಬಾ, ಪಕ್ಷದ ನಗರ ಜಿಲ್ಲಾಧ್ಯಕ್ಷರಾದ ಎಂಎಲ್ಸಿ ಬಿ.ಜಿ.ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಶಾಸಕರಾದ ಬಸವರಾಜ ಮತ್ತಿಮೂಡ, ರಾಜ್ಯ ಉಪಾಧ್ಯಕ್ಷ ಬಾಬುರಾವ ಚವ್ಹಾಣ್, ಬೀದರ್ ಉಸ್ತುವಾರಿ ಅಮರನಾಥ ಪಾಟೀಲ್, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಮುಖಂಡರಾದ ರವಿ ಬಿರಾದಾರ, ಸಂಗಮೇಶ ನಾಗನಳ್ಳಿ, ಸುಭಾಷ ರಾಠೋಡ, ಅಂಬಾರಾಯ ಅಷ್ಟಗಿ, ಬಸವರಾಜ ಇಂಗಿನ್ ಇತರರಿದ್ದರು.

ಖರ್ಗೆ ಸೋಲಿಸಲು ಬಿಜೆಪಿ ಕಾರ್ಯಕರ್ತ ಸಾಕು
2019ರ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲು ಖಚಿತ. ಅವರನ್ನು ಸೋಲಿಸಲು ನಾಯಕರು ಬೇಕಿಲ್ಲ, ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತ ಸಾಕು ಎಂದು ಈಶ್ವರಪ್ಪ ಹೇಳಿದರು. ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ. ಗೆದ್ದೇ ಗೆಲ್ಲುತ್ತೇವೆ. ಬಿಜೆಪಿಗೆ ಕಾರ್ಯಕರ್ತರ ಬಲವಿದೆ. ಇಲ್ಲಿ ಹುರಿಯಾಳು ಅಥವಾ ವ್ಯಕ್ತಿ ಆಧರಿತ ಚುನಾವಣೆ ನಡೆಯಲ್ಲ. ಸಿದ್ಧಾಂತದ ಮೇಲೆ ಚುನಾವಣೆ ನಡೆಯುವುದರಿಂದ ಬಿಜೆಪಿಯನ್ನು ಜನರು ಆರಿಸಿ ತರಲಿದ್ದಾರೆ ಎಂದರು. ಕಾಂಗ್ರೆಸ್- ಜೆಡಿಎಸ್ ಸರ್ಕಾರದಿಂದ ಜನ ಕಂಗೆಟ್ಟಿದ್ದರಿಂದ ಬಿಜೆಪಿ ಮೆಲುಗೈ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ನೇರ ರಾಜಕಾರಣ ಮಾಡುತ್ತಿದ್ದರೆ, ಕಾಂಗ್ರೆಸಿಗರು ಬೆತ್ತಲೆ ರಾಜಕಾರಣ ಮಾಡುತ್ತಿದ್ದಾರೆ ಎಂಬುದಕ್ಕೆ ರಾಮ ನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಿಡ್ನಾಪ್ ಮಾಡಿದ್ದೇ ಸಾಕ್ಷಿ ಎಂದು ಕಿಡಿಕಾರಿದರು.