ಹುನಗುಂದ: ಮತದಾನದ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಿದರೆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಂಚಾರಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎ ಮೂಲಿಮನಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹಕ್ಕು ಮತ್ತು ಕರ್ತವ್ಯಗಳನ್ನು ಮರೆತು ನಮ್ಮ ಸೌಲಭ್ಯಗಳ ಬಗ್ಗೆ ಗಮನಹರಿಸಿದ ಪರಿಣಾಮ ದೇಶ ಪ್ರಗತಿ ಕಂಡಿಲ್ಲ. ಪೆನ್ನು, ಪುಸ್ತಕ ಹಾಗೂ ಇತರ ವಸ್ತುಗಳನ್ನು ಚೌಕಾಸಿ ಮಾಡಿ ತೆಗೆದುಕೊಳ್ಳುವ ಜನರು ಜನಪ್ರತಿನಿಧಿಗಳ ಆಯ್ಕೆಯಲ್ಲಿ ವಿಚಾರ ಮಾಡಿ ಮತ ಹಾಕುತ್ತಿಲ್ಲ ಎಂದರು.
ಉಪನ್ಯಾಸಕಿ ಛಾಯಾ ಪುರಂದರೆ ಮಾತನಾಡಿ, ಪ್ರಜಾಪ್ರಭುತ್ವದ ಆಧಾರಸ್ತಂಭ ಚುನಾವಣೆ. ಅಂತಹ ಚುನಾವಣೆಯಲ್ಲಿ ಮತದಾನ ಮಹತ್ವದ ಪಾತ್ರವಹಿಸುತ್ತದೆ ಎಂದರು.
ಗ್ರೇಡ್ 2 ತಹಸೀಲ್ದಾರ್ ಮಹೇಶ ಸಂದಿಗೌಡ ಮಾತನಾಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಜೆಎಂಎ್ಸಿ ಹಿರಿಯ ದಿವಾಣಿ ನ್ಯಾಯಾಧೀಶ ಹನಮಂತರಾವ್ ಕುಲಕರ್ಣಿ, ಹೆಚ್ಚುವರಿನ್ಯಾಯಾಧೀಶ ಬಸವರಾಜ ನೇಸರಗಿ, ವಕೀಲರ ಸಂಘದ ಅಧ್ಯಕ್ಷ ಪಿ. ಎಸ್ ಕಠಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸಿಕಂದರ್ ಧನ್ನೂರ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶರಣಪ್ಪ ಹೂಲಗೇರಿ, ಸಿಡಿಪಿಒ ವಿ. ಎ. ಗಿರಿತಿಮ್ಮಣ್ಣವರ ಮತ್ತಿತರರಿದ್ದರು.