ಸೋಮವಾರಪೇಟೆ: ಭತ್ತ ಕೃಷಿ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಸಮೀಪದ ಗೌಡಳ್ಳಿ ಗ್ರಾಮದ ರಾಜು ಅವರ ಗದ್ದೆಯಲ್ಲಿ 6ನೇ ವರ್ಷದ ಭತ್ತ ನಾಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಅಪ್ಪಚ್ಚು ರಂಜನ್, ಇತ್ತೀಚಿನ ದಿನಗಳಲ್ಲಿ ಯುವ ಜನರು ಪಟ್ಟಣಕ್ಕೆ ಹೋಗುವುದು ಮಾಮೂಲಾಗಿದೆ. ಪಟ್ಟಣಗಳಲ್ಲಿ ಬದುಕು ಕಟ್ಟಿಕೊಂಡರೂ ನಮ್ಮ ಮೂಲ ನೆಲೆಯ ಸಂಪರ್ಕವನ್ನು ಕಡಿದುಕೊಳ್ಳಬಾರದು. ಕೃಷಿ ಭೂಮಿಯನ್ನು ಬರಡಾಗಿಸದೇ ವ್ಯವಸಾಯ ಮಾಡಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಭತ್ತದ ಗದ್ದೆಗಳು ಪಾಳು ಬೀಳುತ್ತಿರುವುದು ಕಳವಳಕಾರಿ. ಈ ನಿಟ್ಟಿನಲ್ಲಿ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‌ನಿಂದ ಪ್ರತಿ ವರ್ಷ ಭತ್ತ ನಾಟಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಬದುಕಿನ ಮೂಲವಾಗಿರುವ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಗದ್ದೆ ನಾಟಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘಟನೆ ವತಿಯಿಂದ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ಕೊಡಗಿನ ಕೃಷಿಕರನ್ನು ಸಿ ಮತ್ತು ಡಿ ಜಾಗದ ಸಮಸ್ಯೆ, ಕಸ್ತೂರಿ ರಂಗನ್ ವರದಿ ಅನುಷ್ಠಾನದ ಸಮಸ್ಯೆಗಳು ಬಹುವಾಗಿ ಕಾಡುತ್ತಿದೆ. ಜಿಲ್ಲೆಯ ಕೃಷಿ ಹಾಗೂ ಕೃಷಿಕರ ಉಳಿವಿಗಾಗಿ ನಡೆಯುವ ಹೋರಾಟಕ್ಕೆ ಸಂಘ ಬೆಂಬಲ ನೀಡುತ್ತ ಬಂದಿದೆ. ಇದೀಗ ಸುಪ್ರೀಂ ಕೋರ್ಟ್‌ನಲ್ಲಿರುವ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿ, ಕೃಷಿಕರನ್ನು ಒಕ್ಕಲೆಬ್ಬಿಸದಂತೆ ತಡೆಯಬೇಕಿದೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಎನ್. ರವೀಂದ್ರ ಮಾತನಾಡಿ, ಕೃಷಿ ಭೂಮಿ ಉಳಿವಿಗೆ ಎಲ್ಲರೂ ಮನಸ್ಸು ಮಾಡಬೇಕಿದೆ. ಮಿಶ್ರ ಬೇಸಾಯ ಪದ್ಧತಿಯಿಂದ ಲಾಭ ಗಳಿಸಬಹುದು. ಕೃಷಿ ಭೂಮಿ ಎಂದಿಗೂ ರೈತರನ್ನು ಕೈ ಬಿಡುವುದಿಲ್ಲ ಎಂದರು.
ಪ್ರಗತಿ ಪರ ಕೃಷಿಕ ಪೊನ್ನಂಪೇಟೆಯ ರವಿಶಂಕರ್ ಮಾತನಾಡಿ, ಕೃಷಿ ಭೂಮಿ ಸದ್ಬಳಕೆ ಆಗಬೇಕಿದೆ. ರೈತರಿಂದಲೇ ದೇಶ ಎಂಬುದನ್ನು ಮನಗಂಡು ಸರ್ಕಾರಗಳೂ ಕೃಷಿಗೆ ಹೆಚ್ಚು ಉತ್ತೇಜನ ನೀಡಬೇಕಿದೆ ಎಂದರು. ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ, ಗ್ರಾ.ಪಂ. ಸದಸ್ಯ ನವೀನ್ ಅಜ್ಜಳ್ಳಿ ಮಾತನಾಡಿದರು.
ಗ್ರಾ.ಪಂ. ಅಧ್ಯಕ್ಷ ನಾಗರಾಜ್, ಕಾಫಿ ಮಂಡಳಿ ಅಧಿಕಾರಿ ಲಕ್ಷ್ಮೀಕಾಂತ್, ಗೌಡಳ್ಳಿ ಸಹಕಾರ ಸಂಘದ ಉಪಾಧ್ಯಕ್ಷರಾದ ಮಮತಾ, ಬಿಜಿಎಸ್ ಶಾಲೆ ಮುಖ್ಯ ಶಿಕ್ಷಕಿ ರತ್ನಮ್ಮ, ರೋಟರಿ ಕ್ಲಬ್ ಅಧ್ಯಕ್ಷ ಜೆ.ಕೆ. ಪೊನ್ನಪ್ಪ, ಪ್ರಣವ್ ಫೌಂಡೇಷನ್ ಅಧ್ಯಕ್ಷ ರಾಕೇಶ್ ರೈ, ಗದ್ದೆ ಮಾಲೀಕ ಜಿ.ಎಸ್. ರಾಜು, ಅಸೋಸಿಯೇಷನ್ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಪ್ರಧಾನ ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ ಇದ್ದರು.
ಬಿಜಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಗದ್ದೆಯಲ್ಲಿ ನಾಟಿ ಮಾಡುವಮೂಲಕ ಭತ್ತ ಕೃಷಿ ಬಗ್ಗೆ ಜಾಗೃತಿ ಮೂಡಿಸಿದರು. ಇದಕ್ಕೂ ಮುನ್ನ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು.