ನೀರಿನ ಸಮಸ್ಯೆ ಆಗದಿರಲಿ

ಚಾಮರಾಜನಗರ: ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೂ ಅಂತಹ ಕಡೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಬೇಕು. ಅಲ್ಲದೆ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಮೇವು ದಾಸ್ತಾನು ಮಾಡಿಕೊಳ್ಳಬೇಕು. ಜಿಲ್ಲೆಯ ಜನರು ಬೇರೆಡೆ ಕೆಲಸಕ್ಕಾಗಿ ಗುಳೆ ಹೋಗದಂತೆ ಸ್ಥಳೀಯವಾಗಿಯೇ ಉದ್ಯೋಗ ಕೊಡಬೇಕು ಎಂದು ತಿಳಿಸಿದರು.

ಮಳೆ ಬಾರದಿದ್ದರೂ ಜಿಲ್ಲೆಯಲ್ಲಿ ಬರಗಾಲ ಬಾರದಂತೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಿ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು. ರೈತರು, ಬಡವರು, ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 12,500 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ಬೆಳೆಯಲಾಗಿತ್ತು. ಇದರಲ್ಲಿ 972 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಫಸಲು ನಾಶವಾಗಿದೆ. ಇದಕ್ಕೆ ಈಗಾಗಲೇ 43 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್.ವಿ.ದೇಶಪಾಂಡೆ, ಮುಂದಿನ 7 ದಿನಗಳ ಒಳಗೆ ಬಾಳೆ ಫಸಲಿಗೆ ಕೊಡುವ ಪರಿಹಾರವನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಮಾತನಾಡಿ, ಜಿಲ್ಲೆಯಲ್ಲಿ ಶೇ.26 ರಷ್ಟು ವಾಡಿಕೆ ಮಳೆ ಕಡಿಮೆ ಇದೆ. ಕಳೆದ ವರ್ಷ ಉತ್ತಮ ಮಳೆ ಆಗಿದ್ದರಿಂದ ಶೇ.41 ರಷ್ಟು ಬಿತ್ತನೆ ಆಗಿತ್ತು. ಆದರೆ ಈ ಬಾರಿ ಶೇ.30 ರಷ್ಟು ಬಿತ್ತನೆ ಆಗಿದೆ. ಜುಲೈ ಮೊದಲ ವಾರದಲ್ಲಿ ಮಳೆ ಬಂದರೆ ಈಗಾಗಲೇ ಬಿತ್ತನೆ ಆಗಿರುವ ಫಸಲು ಕೈ ಸೇರುತ್ತದೆ. ಇಲ್ಲದಿದ್ದರೆ ಒಣಗುತ್ತದೆ ಎಂದರು.

ಹನೂರು ಶಾಸಕ ಆರ್.ನರೇಂದ್ರ ಮಾತನಾಡಿ, ಇನ್ನೂ 15 ದಿನದಲ್ಲಿ ಮಳೆ ಬಾರದಿದ್ದರೆ ಹನೂರು ಭಾಗದಲ್ಲಿ ಮೇವಿನ ಸಮಸ್ಯೆ ಕಾಡುತ್ತದೆ. ಶೇ.40 ರಷ್ಟು ಜನರು ಬಯಲಿನಲ್ಲಿಯೇ ಜಾನುವಾರುಗಳನ್ನು ಮೇಯಿಸುತ್ತಾರೆ. ಪ್ರತಿ ಮನೆಯಲ್ಲೂ 25-30 ಹಸುಗಳಿವೆ. ಪಶುಸಂಗೋಪನಾ ಇಲಾಖೆಯವರು ಸಂಗ್ರಹಿಸಿರುವ ಮೇವು ಮನೆಯಲ್ಲಿ ಸಾಕುವ ಹಸುಗಳಿಗೆ ಅನುಕೂಲವಾಗುತ್ತದೆ ಎಂದು ದೂರಿದರು.

ಹನೂರು ಕ್ಷೇತ್ರ ವ್ಯಾಪ್ತಿಯ ಜಾಗೇರಿ ಗ್ರಾಮ ವ್ಯಾಪ್ತಿಯಲ್ಲಿ 6 ಗ್ರಾಮಗಳಿದ್ದು, 12,700 ಎಕರೆ ಅರಣ್ಯ ಪ್ರದೇಶವಿದೆ. 2,879 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆ ಬಿಟ್ಟುಕೊಟ್ಟಿದೆ. ಈಗಾಗಲೇ ಈ ಭೂಮಿಯನ್ನು ಜಂಟಿ ಸರ್ವೇ ನಡೆಸಲಾಗಿದೆ. ಆದರೆ ಇಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕು ಪತ್ರ ನೀಡದ ಹಿನ್ನೆಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿಲ್ಲ ಎಂದರು.

ಈ ಕುರಿತು ಪರಿಶೀಲಿಸಿ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಜಿಪಂ ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಒ ಕೆ.ಎಸ್.ಲತಾಕುಮಾರಿ, ಎಸ್ಪಿ ಆನಂದಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಇತರರಿದ್ದರು.

Leave a Reply

Your email address will not be published. Required fields are marked *