ಹಿರಿಯರಾಗಿರುವ ವಿಶ್ವನಾಥ್​ ಪಕ್ಷ ಒಗ್ಗೂಡಿಸುವ ಕೆಲಸ ಮಾಡಲಿ, ಇಲ್ಲಸಲ್ಲದ ಹೇಳಿಕೆ ಕೊಡುವುದಲ್ಲ: ಮಹದೇವಪ್ಪ

ಮೈಸೂರು: ಕಳ್ಳನ ಮನಸ್ಸು ಉಳ್ಳುಳ್ಳಗೆ‌. ವಿಶ್ವನಾಥ್ ಹಿರಿಯ ನಾಯಕರಾಗಿದ್ದು, ಪಕ್ಷವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡಬಾರದು ಎಂದು ಮಾಜಿ ಸಚಿವ ಎಚ್​.ಸಿ.ಮಹದೇವಪ್ಪ ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ವಿಫಲ ಎಂಬ ವಿಶ್ವನಾಥ್​ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಒಗ್ಗೂಡಿ ಸಮನ್ವಯ ಸಮಿತಿ ರಚಿಸಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಯಾಕೆ ಎಲ್ಲರೂ ಮಾತನಾಡುತ್ತೀರಿ? ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರು ಯಾವ ಉದ್ದೇಶ ಇಟ್ಟುಕೊಂಡು ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ಜತೆಗೆ ಅವರು ಅಧಿಕಾರ ಅನುಭವಿಸಿದವರು. ಈಗ ರಾಜಕೀಯ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ರೋಷನ್ ಬೇಗ್ ಮನಸ್ಸಿನಲ್ಲಿ ಏನಿದೆ ಎಂದು ಅವರನ್ನೇ ಕೇಳಬೇಕು. ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತೆ ಎಂದು ಗೊತ್ತಾಗಲ್ಲ‌. ಯಾರು ಎಲ್ಲಿಗೆ ಹೋಗುತ್ತಾರೆ ಎಂದು ತಿಳಿಯುವುದಿಲ್ಲ ಎಂದರು.

ಚುನಾವನೋತ್ತರ ಸಮೀಕ್ಷೆಗಳನ್ನು ನಂಬಲು ಆಗುವುದಿಲ್ಲ ಎಂದ ಅವರು, ಸಮೀಕ್ಷೆಗಿಂತ‌ ನಮಗೆ ಜನರ ನಾಡಿ ಮಿಡಿತ ಮುಖ್ಯ. ನಾಳೆ ಎಲ್ಲ ಸಮೀಕ್ಷೆಗಳಿಗೂ ಉತ್ತರ ಸಿಗಲಿದೆ. ನಾನು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತೇನೆ. ಕರ್ನಾಟಕದಲ್ಲಿ 16ರಿಂದ 18 ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *