More

    ಔಷಧಕ್ರಾಂತಿ, ಸಂಪರ್ಕಕ್ರಾಂತಿಯ ಮಹತ್ವ ಅರಿಯೋಣ

    ಔಷಧಕ್ರಾಂತಿ, ಸಂಪರ್ಕಕ್ರಾಂತಿಯ ಮಹತ್ವ ಅರಿಯೋಣಹಿಂದೆ ಅನ್ನ, ಬಟ್ಟೆ, ಸೂರು ಈ ಮೂರು ಜೀವನಾವಶ್ಯಕ ವಸ್ತುಗಳಾಗಿದ್ದವು. ಈಗ ಇವುಗಳ ಜತೆಗೆ ಔಷಧ ಮತ್ತು ಸಂಪರ್ಕ ಸಾಧನಗಳು ಕೂಡ ಸೇರಿಕೊಂಡಿವೆ.
    ಔಷಧ ಮತ್ತು ಸಂಪರ್ಕ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹತ್ವದ ಬದಲಾವಣೆ, ಕ್ರಾಂತಿಯನ್ನು ಜನಸಾಮಾನ್ಯರು ಅರಿತುಕೊಳ್ಳುವುದು ಇಂದಿನ ಅಗತ್ಯವಾಗಿದೆ.

    ನನ್ನ ಬಾಲ್ಯದಲ್ಲಿ ಹಿರಿಯರು ಹೇಳುತ್ತಿದ್ದ ಮಾತು ತುಂಬ ಚೆನ್ನಾಗಿ ನೆನಪಿದೆ. “ಬದುಕಲು ಏನು ಬೇಕು? ಎರಡು ಹೊತ್ತು ಊಟ, ತಲೆಗೊಂದು ಸೂರು, ಎರಡು ಜೊತೆ ಬಟ್ಟೆ ಇದ್ದರೆ ಸಾಕು, ಜೀವನ ನಡೆದುಕೊಂಡು ಹೋಗುತ್ತದೆ’ ಅಂತ. ಆಗಿನ ಪ್ರಧಾನಿಗಳಾದ ಲಾಲ್​ ಬಹಾದೂರ್​ ಶಾಸ್ತ್ರಿ, ಇಂದಿರಾ ಗಾಂಧಿಯವರ ಕಾರ್ಯಶೈಲಿಯನ್ನು ಅವಲೋಕಿಸಿದರೂ ಅವರ ಆದ್ಯತೆ ಎಲ್ಲರಿಗೂ ಊಟ, ಬಟ್ಟೆ, ಸೂರು ಒದಗಿಸುವುದೇ ಆಗಿತ್ತು. “ರೋಟಿ, ಕಪಡಾ, ಮಕಾನ್​’ ಎಂಬ ಹಿಂದಿ ಸಿನಿಮಾ ಕೂಡ ಬಂದಿತ್ತು. ಮನುಷ್ಯನಿಗೆ ಈ ಮೂರೂ ಸಂಗತಿಗಳು ಇದ್ದರೆ ಸಾಕು ಎಂಬ ಮನೋಭಾವವಿತ್ತು. ಆದರೆ, ಕಳೆದ 50-60 ವರ್ಷಗಳಲ್ಲಿ ಮನುಷ್ಯನ ಅವಶ್ಯಕತೆಗಳ ಪಟ್ಟಿ ಬೆಳೆಯುತ್ತಲೇ ಹೋಯಿತು. ರೋಟಿ, ಕಪಡಾ, ಮಕಾನ್​& ಈ ಮೂರು ಆದ್ಯತೆಗಳಲ್ಲೇ ಎಷ್ಟೊಂದು ಬದಲಾವಣೆಗಳಾಗಿವೆ.

    1960ರ ದಶಕದಲ್ಲಿ, ಅದರಲ್ಲೂ ಚೀನಾದೊಂದಿಗೆ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ದೇಶ ಆಹಾರಧಾನ್ಯಗಳ ತೀವ್ರ ಕೊರತೆ ಎದುರಿಸಿದ್ದು, ಆಗಿನ ಪ್ರಧಾನಿ ಲಾಲ್​ ಬಹಾದೂರ ಶಾಸ್ತ್ರಿ ವಾರಕ್ಕೊಂದು ದಿನದಲ್ಲಿ ಒಪ್ಪತ್ತು ಉಪವಾಸ ಮಾಡುವಂತೆ ದೇಶದ ಜನರಿಗೆ ಕರೆ ನೀಡಿದ್ದು ಗೊತ್ತೇ ಇದೆ. ಆದರೆ ಈಗ ಸ್ಥಿತಿ ಬದಲಾಗಿದೆ. ನಮಗೆ ಸಾಕಾಗುವಷ್ಟು ಮಾತ್ರವಲ್ಲ, ಹೊರಗಡೆ ರ್ತು ಮಾಡುವಷ್ಟರ ಮಟ್ಟಿಗೆ ಉತ್ಪಾದನೆ ಜಾಸ್ತಿಯಾಗಿದೆ.
    ತೀವ್ರ ಕಳವಳ ಮತ್ತು ಅಷ್ಟೇ ಬೇಸರದ ಸಂಗತಿ ಎಂದರೆ ಆಹಾರದ ಪೋಲಿನ ಪ್ರಮಾಣ ಕೂಡ ಜಾಸ್ತಿಯಾಗುತ್ತಿದೆ. ನಾವು ಬೆಳೆಯುತ್ತಿರುವ ಆಹಾರಧಾನ್ಯದ ಶೇಕಡ 40ರಷ್ಟನ್ನು ಪೋಲು ಮಾಡುತ್ತಿದ್ದೇವೆ! ಮತ್ತೊಂದೆಡೆ, ಪೌಷ್ಟಿಕತೆ ವಿಷಯದಲ್ಲಿ ನೋಡಿದರೆ ದೇಶದ ಸ್ಥಿತಿ ನಿರಾಸೆ ಮೂಡಿಸುವಂತಿದೆ. ಸಮತೋಲಿತ ಆಹಾರ, ರಾಸಾಯನಿಕಮುಕ್ತ- ತಾಜಾ ಆಹಾರ ಎಂಬುದು ಬಡ ಮತ್ತು ಮಧ್ಯಮವರ್ಗದವರಿಗೆ ಮಾತ್ರವಲ್ಲ ಸಿರಿವಂತರಿಗೂ ಸಿಗದಂಥ ಪರಿಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ, ಜನರಿಗೆ ಸರಿಯಾದ ಮಾಹಿತಿ ಇಲ್ಲದಿರುವುದು. ಸರಿಯಾದ ರೀತಿಯಲ್ಲಿ ಆಹಾರಧಾನ್ಯ ಪೂರೈಕೆ ಆಗದಿರುವುದು. ಅತಿಯಾದ ವ್ಯಾಪಾರೀಕರಣದ ಭಾವ ಬೆಳೆದಿರುವುದು. ಕಾಡಿನ ಪ್ರಾಣಿಗಳನ್ನು ನಗರಕ್ಕೆ ತಂದು ಆಹಾರವಾಗಿ ಬಳಸಲು ಅನೈತಿಕ ವ್ಯವಹಾರ ಮಾಡಿ, ಎಲ್ಲೆ ಮೀರಿದ ಆಸೆಬುರುಕುತನ, ಅಮಾನವೀಯ ವರ್ತನೆಯಿಂದಾಗಿ ಕೋವಿಡ್​ ಮಹಾಮಾರಿ ಹಬ್ಬಿದ್ದು ಈಗ ಎಲ್ಲರಿಗೂ ಗೊತ್ತಾದ ವಿಷಯ.

    ಬಟ್ಟೆಯ ವಿಷಯದ ಬಗ್ಗೆ ಗಮನಿಸೋಣ. ಹಿಂದೆಲ್ಲ ಕೈಮಗ್ಗವನ್ನೇ ಅಸ್ತ್ರವನ್ನಾಗಿಸಿಕೊಂಡು ಪರಿಸರಸ್ನೇಹಿ ಬಟ್ಟೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಈ ಆಂದೋಲನ ಬ್ರಿಟಿಷರ ವಿರುದ್ಧವೂ ಪರಿಣಾಮಕಾರಿಯಾಗಿ ಸಾಬೀತಾಯಿತು. ಹಿಂದೆಲ್ಲ ವರ್ಷಕ್ಕೆ ಎರಡು ಜತೆ ಬಟ್ಟೆ ಸಾಕು ಎಂಬ ತೃಪ್ತಿ ಇತ್ತು. ಈಗ ಹಾಗಿಲ್ಲ, ತಿಂಗಳಿಗೆ ನಾಲ್ಕು ಜತೆ ಬಟ್ಟೆಗಳನ್ನು ಕೊಂಡರೂ ಕಡಿಮೆ ಎನ್ನುವವರಿದ್ದಾರೆ. ಪಾಲಿಸ್ಟರ್​, ನೈಲಾನ್​ ಬಟ್ಟೆ ಉತ್ಪಾದನೆಯ ಪ್ರಮಾಣ ಭಾರಿ ವೇಗ ಪಡೆದುಕೊಂಡಿದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ. ಮನೆಯ ವಿಷಯಕ್ಕೆ ಬಂದರೆ, ಸರಳ, ಚಿಕ್ಕ ಮನೆಯ ಕಲ್ಪನೆಯೇ ಮರೆಯಾಗಿದೆ. ಮನೆಯ ಎಲ್ಲ ಸದಸ್ಯರಿಗೂ ಪ್ರತ್ಯೇಕ ಕೋಣೆ, ಆ ಕೋಣೆಗೆ ತಾಗಿಕೊಂಡೇ ಶೌಚಗೃಹ ಬೇಕು. ಈ ಕಟ್ಟಡಗಳನ್ನು ಕಟ್ಟಲು ಬಳಸುತ್ತಿರುವ ಸಾಮಗ್ರಿಗಳ ಬಗ್ಗೆಯೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಿಮೆಂಟ್​, ಕಬ್ಬಿಣ, ಮರಳು, ಗ್ರಾನೈಟ್​ ಸೇರಿದಂತೆ ನಿರ್ಮಾಣದ ಸಾಮಗ್ರಿಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೇವೆ? ಇವುಗಳ ಉತ್ಪಾದನೆ ವೇಳೆ ಆಗುವ ಪರಿಸರ ಮಾಲಿನ್ಯ, ಸಾಗಾಟದ ವೇಳೆ ಉಂಟಾಗುವ ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಿಂದೊಮ್ಮೆ ಇದೇ ಅಂಕಣದಲ್ಲಿ ಸರಳ ಮತ್ತು ಹಸಿರು ಇಂಧನ ಹೊಂದಿರುವ ಅಡುಗೆಮನೆ ಬಗ್ಗೆ ವಿವರವಾಗಿ ಚರ್ಚಿಸಲಾಗಿತ್ತು. ಇಷ್ಟೆಲ್ಲ ಖರ್ಚು ಮಾಡಿ ಮನೆ ಕಟ್ಟಿದರೂ, ಕೆಲವರು ಸ್ವಲ್ಪ ಸಮಯದಲ್ಲೇ ಈ ಮನೆ ಸರಿಹೋಗುತ್ತಿಲ್ಲ ಎಂದು ಬೀಳಿಸಿ ಮತ್ತೆ ಕಟ್ಟುತ್ತಾರೆ. ಅದರಲ್ಲೂ, ನಗರಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳಿಂದಲೇ ವಾಯುಮಾಲಿನ್ಯ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಶೋಚನೀಯ ಸಂಗತಿ. ಜಗತ್ತಿನ ಶೇಕಡ 10ರಷ್ಟು ಕಾರ್ಬನ್​ ಡೈಆಕ್ಸೈಡ್​ ಪರಿಸರಕ್ಕೆ ಸೇರುತ್ತಿರುವುದು ಸಿಮೆಂಟ್​ ಕಾರ್ಖಾನೆಗಳಿಂದಲೇ ಎಂಬುದನ್ನು ಮರೆಯುವಂತಿಲ್ಲ. ನಾವು ಬಳಸುತ್ತಿರುವ ಗ್ರಾನೈಟ್​ಗಳಿಂದ ಬೆಟ್ಟ&ಬೆಟ್ಟಗಳೇ ಕರಗಿ ಹೋಗುತ್ತಿವೆ. ಸಿಮೆಂಟ್​ ಶೀಟ್​ಗಳು (ಆರ್​ಸಿಸಿ ಛಾವಣಿ) ಪರಿಸರಕ್ಕೆ ಪೂರಕವಲ್ಲ ಎಂಬುದು ಗೊತ್ತಿದ್ದರೂ, ಅವುಗಳ ಬಳಕೆ ಹೆಚ್ಚುತ್ತಿದೆ. ಅಂಧಾನುಕರಣೆ, ವಿಲಾಸೀ ಜೀವನ ಪದ್ಧತಿಯಿಂದ ಪರಿಸರಕ್ಕೆ ಎಷ್ಟು ಪೆಟ್ಟು ಕೊಡುತ್ತಿದ್ದೇವೆ ಎಂಬುದನ್ನು ಅವಲೋಕಿಸಿದರೆ ನಿಜಕ್ಕೂ ಆತಂಕವಾಗುತ್ತದೆ.‌

    ಜೀವನಶೈಲಿಯಲ್ಲಿ ವೇಗವಾಗಿ ಆಗುತ್ತಿರುವ ಬದಲಾವಣೆಯಿಂದ ವೈಯಕ್ತಿಕ ಆರೋಗ್ಯಕ್ಕೂ ಹಾನಿಯಾಗುತ್ತಿದೆ ಎಂಬ ಸಂಗತಿಯನ್ನು ಮರೆತು ಬಿಟ್ಟಿದ್ದೇವೆ. ಈಗಂತೂ ಕರೊನಾ ಮಹಾಮಾರಿ ಧೂಮಕೇತುವಿನಂತೆ ಧುತ್ತೆಂದು ಬಂದು ಅಪ್ಪಳಿಸಿದೆ. ಈ ಮೊದಲು ಹೇಳಿದಂತೆ, ಹಿಂದೆಲ್ಲ ರೋಟಿ, ಕಪಡಾ, ಮಕಾನ್​& ಈ ಮೂರನ್ನೇ ಜೀವನಾವಶ್ಯಕ ವಸ್ತುಗಳು ಎಂದು ಪರಿಗಣಿಸಲಾಗಿತ್ತು. ಈಗ ಇವುಗಳ ಜತೆಗೆ ಇನ್ನೂ ಎರಡು ಸೇರಿಕೊಂಡಿವೆ. ಅವುಗಳೇ ಫಾರ್ಮಾ(ಔಷಧ) ಮತ್ತು ಫೋನ್​. ಕೈಗಾರಿಕಾ ಕ್ರಾಂತಿ ನಂತರ ಮಾಹಿತಿ-ತಂತ್ರಜ್ಞಾನದ ಕ್ರಾಂತಿಯಾಯ್ತು. ಈಗ ಔಷಧ ಕ್ರಾಂತಿಯ ಹೊಸ್ತಿಲಲ್ಲಿದ್ದೇವೆ. ಆರೋಗ್ಯದ ವಿಷಯದಲ್ಲಿ ಎಷ್ಟೆಲ್ಲ ಬದಲಾವಣೆಗಳು ಸಂಭವಿಸಿವೆ ಎಂಬುದನ್ನು ಅವಲೋಕಿಸಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. 50-60 ವರ್ಷಗಳ ಹಿಂದೆ ಸೀಮಿತ ಔಷಧಗಳಿದ್ದವು, ಮನೆಮದ್ದಿಗೆ ಆದ್ಯತೆ ಇತ್ತು. ಮತ್ತು ಜನಸಾಮಾನ್ಯರು ಔಷಧಗಳ ಕುರಿತಾಗಿ ಹೆಚ್ಚು ತಿಳಿದುಕೊಳ್ಳಲು ಬಯಸುತ್ತಿರಲಿಲ್ಲ. ಡಾಕ್ಟರ್​ ಕೊಟ್ಟಿದ್ದನ್ನು ಕಣ್ಣು ಮುಚ್ಚಿ ತೆಗೆದುಕೊಳ್ಳುತ್ತಿದ್ದೆವು. ಈಗ ಸ್ಥಿತಿ ಬದಲಾಗಿದೆ. ನಾವು ಯಾವ ಔಷಧ ತೆಗೆದುಕೊಳ್ಳುತ್ತಿದ್ದೇವೆ, ಅದರ ಪರಿಣಾಮಗಳೇನು (ಅಡ್ಡ ಪರಿಣಾಮಗಳೂ ಇವೆಯೇ?), ಔಷಧ ತಯಾರಿಕೆಯ ಪ್ರಕ್ರಿಯೆ ಏನು, ಅದಕ್ಕೆ ಏನೆಲ್ಲ ಸಾಮಗ್ರಿ ಬಳಸಲಾಗಿದೆ ಎಂಬ ಪ್ರಾಥಮಿಕ ಮಾಹಿತಿಯನ್ನಾದರೂ ತಿಳಿದುಕೊಳ್ಳಬೇಕು. ವೈದ್ಯಕಿಯ ಕ್ಷೇತ್ರ, ಔಷಧ ಕ್ಷೇತ್ರದ ಬದಲಾವಣೆ ಬಗ್ಗೆ ಅರಿತುಕೊಳ್ಳುವುದು ಅಗತ್ಯವಾಗಿದೆ. ಕೋವಿಡ್​ನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ರೋಗ ಲಕ್ಷಣರಹಿತರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ, ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದೆ ಕರೊನಾಪೀಡಿತರಾದವರು ರ್ನಿಲಕ್ಷ$್ಯ ವಹಿಸುವಂತಿಲ್ಲ. “ನನಗೇನಾಗಿದೆ, ಯಾವುದೇ ಲಕ್ಷಣಗಳು ಇಲ್ಲ’ ಎಂದು ಸುರಾ ಕ್ರಮಗಳನ್ನು ರ್ನಿಲಸಿದರೆ ಅವರು ನೂರಾರು ಜನರಿಗೆ ಸೋಂಕನ್ನು ಹರಡುವ ಅಪಾಯ ಇರುತ್ತದೆ. ಮತ್ತು ಅಂಥ ರೋಗಿ ತಾನು ಕೂಡ ಅಪಾಯವನ್ನು ಆಹ್ವಾನಿಸಿಕೊಂಡಂತೆ.

    ಲಸಿಕೆ ವಿಷಯದಲ್ಲಿ ನಿರ್ಲಕ್ಷ್ಯ ಬೇಡ: ಲಸಿಕೆ ವಿಷಯದಲ್ಲೂ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಧೋರಣೆ ಕಂಡುಬರುತ್ತಿದೆ. ಅಂಥ ಮನೋಭಾವ ದೂರವಾಗಬೇಕು. ಅದೆಷ್ಟೋ ಜನರು, “ನಾನು ನಿಯಮಿತವಾಗಿ ಯೋಗ, ಪ್ರಾಣಾಯಾಮ ಮಾಡುತ್ತೇನೆ. ಹೊರಗಡೆ ಏನೂ ತಿನ್ನುವುದಿಲ್ಲ. ಆರೋಗ್ಯದ ಸಮಸ್ಯೆಯೂ ಇಲ್ಲ. ಹಾಗಾಗಿ, ಯಾವುದೇ ಲಸಿಕೆ ಬೇಡ’ ಎಂದು ಹೇಳುತ್ತಿದ್ದಾರೆ. ಕರೊನಾ ವಿರುದ್ಧ ಹೋರಾಡಬೇಕಾದರೆ ನಮ್ಮ ದೇಹದ ರೋಗ ಪ್ರತಿನಿರೋಧಕ ಶಕ್ತಿ ಹೆಚ್ಚಿಸಬೇಕು. ನಮ್ಮ ದಿನಚರಿ, ಜೀವನಶೈಲಿ ಏನೇ ಆಗಿರಲಿ, ಕರೊನಾ ಸೋಂಕು ಯಾರನ್ನೂ ಬಿಡುತ್ತಿಲ್ಲ. ಕೆಲ ತಿಂಗಳ ಹಿಂದಷ್ಟೇ ಜನರು ಲಸಿಕೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು. ಆದರೆ, ಲಸಿಕೆ ಬಂದಾದ ಮೇಲೆ ಅವಗಣನೆ, ನಿರ್ಲಕ್ಷ್ಯ ತಳೆಯತೊಡಗಿದರು. ಇಂಥ ಧೋರಣೆ ಸರಿಯಲ್ಲ. ಲಸಿಕೆ ಪಡೆದರೆ ಕೋವಿಡ್​ ಬರುವುದಿಲ್ಲ ಎಂಬ ತಪ್ಪುಕಲ್ಪನೆಯೂ ಬಹಳ ಜನರಲ್ಲಿದೆ. ಲಸಿಕೆ ಕೋವಿಡ್​ನ್ನು ತಡೆಹಿಡಿಯುವ ರಕ್ಷಾಕವಚವಲ್ಲ. ಬದಲಿಗೆ ಕರೊನಾ ಸೋಂಕು ಕಾಣಿಸಿಕೊಂಡಾಗ ಅದರ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ವಾಸ್ತವವನ್ನು ಮನಗಾಣಬೇಕು.

    ಸೂಕ್ತ ತಿಳಿವಳಿಕೆ ಅಗತ್ಯ: ಕ್ವಾರಂಟೈನ್​ ಎಂದರೇನು? ಸೋಂಕು ಪೀಡಿತರಾದವರು ಏಕೆ ಪ್ರತ್ಯೇಕವಾಗಿ ಇರಬೇಕು? ಏಕೆ ಪರಸ್ಪರ ಕೈ ಕುಲುಕಬಾರದು? ಮಾಸ್ಕ್​ ಧರಿಸುವುದರಿಂದ ಆಗುವ ಪ್ರಯೋಜನಗಳೇನು? ಈ ಎಲ್ಲ ಸಂಗತಿಗಳ ಬಗ್ಗೆ ಸೂಕ್ತ ಅರಿವು, ಮಾಹಿತಿ ಹೊಂದುವುದು ಅಗತ್ಯ. ಇವು ಹೊಸ ವಿಷಯಗಳೆಂದು ಎನಿಸಿದರೂ, ಇವುಗಳ ಕುರಿತಾದ ಸರಿಯಾದ ಮಾಹಿತಿಯೇ ನಮ್ಮನ್ನು ಕರೊನಾ ವಿರುದ್ಧ ಹೋರಾಡಲು ಸಜ್ಜುಗೊಳಿಸಬಲ್ಲದು.
    ಈ ಕುರಿತಾದ ತಿಳಿವಳಿಕೆ ಮತ್ತು ಹೊಸ ವಿಷಯಗಳನ್ನು ಅರಿಯುವ ಪರಿಗೆ ನಮಗೆ ಮಾದರಿ ಮತ್ತು ಪ್ರೇರಣೆ ಅನಂತಕುಮಾರ್​. ಅವರು ಓದಿದ್ದು ಬಿಎ, ಎಲ್​ಎಲ್​ಬಿ. ಆದರೆ, ಅವರು ರಾಸಾಯನಿಕ ಮತ್ತು ರಸಗೊಬ್ಬರ ಪೂರೈಕೆ ಸಚಿವರಾಗಿದ್ದಾಗ ಸ್ವಲ್ಪ ಸಮಯದಲ್ಲೇ ಔಷಧ ರಂಗದಲ್ಲಿ ಕ್ರಾಂತಿಯನ್ನೇ ತಂದರು. ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪನೆ ಮಾಡುವ ಮೂಲಕ, ಔಷಧಗಳನ್ನು ಕಡಿಮೆ ಬೆಲೆಗೆ ಸಿಗುವಂತೆ ಮಾಡಿದ್ದು ಸಾಧಾರಣ ಸಾಧನೆಯೇನಲ್ಲ. ಅದರ ಜತೆಗೆ, ಕ್ಯಾನ್ಸರ್​, ಹೃದಯರೋಗ ಔಷಧಗಳು ಸೇರಿದಂತೆ ಅತ್ಯಾವಶ್ಯಕ ಔಷಧಗಳ ಬೆಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡರು. 500 ಔಷಧಗಳನ್ನು ಬೆಲೆ ನಿಯಂತ್ರಣ ಪಟ್ಟಿಗೆ ಸೇರಿಸಿದರು. ಹೃದಯಕ್ಕೆ ಅಳವಡಿಸುವ ಸ್ಟಂಟ್​, ಮಂಡೆಚಿಪ್ಪಿನ ಚಿಕಿತ್ಸೆಗೆ ಬೇಕಾಗುವ ಉಪಕರಣದ ಬೆಲೆ ಇಳಿಸಿದರು. ಕೋವಿಡ್​ ಸಂದರ್ಭದಲ್ಲಿ ಜನಸಾಮಾನ್ಯರು ಔಷಧಗಳ ಜತೆ ಸಂಪರ್ಕಸಾಧನಗಳ ಬಗ್ಗೆಯೂ ಅರಿಯಬೇಕಿದೆ. ಹಿಂದೆ ವಿಡಿಯೋ ಕಾನ್ಫರೆನ್ಸ್​ ದೊಡ್ಡ ಕನಿಗಳಲ್ಲಿ ಮಾತ್ರ ಇತ್ತು. ಆದರೆ, ಇಂದಿನ ಸನ್ನಿವೇಶದಲ್ಲಿ ಮನೆ&ಮನೆಯಿಂದ ಇಂಥ ಸಭೆಗಳಾಗುತ್ತಿವೆ. ಒಬ್ಬರೇ ಒಂದು ಕೋಣೆಯಲ್ಲಿ 15&16 ದಿನ ಇರಬೇಕಾದರೆ, ಔಷಧಗಳ ಬಗ್ಗೆಯೂ ಗೊತ್ತಾಗಬೇಕು. ಝೂಮ್​, ವೆಬ್​, ಸಭೆಯಲ್ಲಿ ಹೇಗೆ ಭಾಗವಹಿಸುವುದು ಎನ್ನುವುದನ್ನು ಸ್ವತಃ ತಿಳುದುಕೊಳ್ಳಲೇಬೇಕಾದ ಅವಶ್ಯಕತೆ ಮುಖ್ಯಮಂತ್ರಿಯಾದಿಯಾಗಿ ಎಲ್ಲರಿಗೂ ಇದೆ. ಇಂಥ ಸುಧಾರಣಾ ಕ್ರಮಗಳನ್ನು ಜನಸಾಮಾನ್ಯರೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ, ಓಡಾಟ ಮಾಡದೆಯೇ ಆಪ್ತರ ಜತೆ ಸಂಪರ್ಕ ಹೊಂದಲು ಸಹಾಯವಾಗುತ್ತದೆ.
    ಈ ಸಂಪರ್ಕಕ್ರಾಂತಿಯ ಮಹತ್ವವನ್ನು ಅರಿತು, ಅಳವಡಿಸಿಕೊಳ್ಳಬೇಕಿದೆ. ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಸಂಪರ್ಕ ಕ್ರಾಂತಿ ಆರಂಭವಾಯಿತು. ಮೊದಲು ಎಲ್ಲರ ಕೈಗೂ ಮೊಬೈಲ್​ ಬಂತು. ನಂತರ 2ಜಿ ಬಂತು. ಬಳಿಕ 3ಜಿ ಬಂತು, 4ಜಿ ಮೋಡಿ ಮಾಡಿತು. ಇನ್ನೇನು 5ಜಿ ತಂತ್ರಜ್ಞಾನ ಕೂಡ ಇಷ್ಟರಲ್ಲೇ ಅನುಷ್ಠಾನಕ್ಕೆ ಬರಲಿದೆ ಮತ್ತು ಜನಸಾಮಾನ್ಯರ ಜೀವನದಲ್ಲಿ ಮಹತ್ವದ ಬದಲಾವಣೆ, ಸುಧಾರಣೆ ತರಲಿದೆ ಎಂಬುದರಲ್ಲಿ ಅನುಮಾನವಿಲ್ಲ.

    (ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts