ಮಾರ್ಗದರ್ಶಿಯಾಗೋಣ

| ಶಿಲ್ಪಾ ಕುಲಕರ್ಣಿ

ಶಕುನಿಯ ಕುಮ್ಮಕ್ಕಿನಂತೆ ಪಗಡೆಯಾಟದ ನೆಪದಲ್ಲಿ ಪಾಂಡವರ ಸಂಪತ್ತನ್ನೆಲ್ಲ ವಶಪಡಿಸಿಕೊಂಡು ಅವರನ್ನು ವನವಾಸಕ್ಕೆ ಕಳುಹಿಸಿ, ಕಿರಿಯನಾದರೂ ತಾನೇ ರಾಜನಾಗಬೇಕೆಂಬ ದುರಾಸೆಯನ್ನು ದುರ್ಯೋಧನ ತಂದೆಯಲ್ಲಿ ವ್ಯಕ್ತಪಡಿಸುತ್ತಾನೆ. ‘ಯುಧಿಷ್ಠಿರ ಈ ಆಟವನ್ನು ಅತ್ಯಂತ ಇಷ್ಟಪಡುವವನಾದರೂ ನುರಿತವನಲ್ಲ. ಆದರೆ ಶಕುನಿ ಪಗಡೆಯಲ್ಲಿ ಪಳಗಿದವ, ತನ್ನ ನೈಪುಣ್ಯದಿಂದ ಆಟದಲ್ಲಿ ಗೆದ್ದೇಗೆಲ್ಲುತ್ತಾನೆ. ಪಾಂಡವರನ್ನು ಸೋಲಿಸಲು ಇದೇ ಸರಳೋಪಾಯ’ ಎಂದು ಧೃತರಾಷ್ಟ್ರನಲ್ಲಿ ಪಟ್ಟುಹಿಡಿಯುತ್ತಾನೆ. ಮಗನ ಒತ್ತಡಕ್ಕೆ ಮಣಿಯುವ ಧೃತರಾಷ್ಟ್ರ, ಪಾಂಡುರಾಜನ ಮಕ್ಕಳ ಮೇಲೆ ಮೊದಲಿನಿಂದಲೂ ತನಗಿದ್ದ ಹಗೆಗೊಂದು ನಿರ್ಣಾಯಕ ಫಲಿತಾಂಶ ನೀಡಲು ಇದೇ ಉತ್ತಮ ಸಮಯ ಎಂದು ಭಾವಿಸಿ, ಪಗಡೆಯಾಟಕ್ಕೆ ಪಾಂಡವರನ್ನು ಕರೆಸುವಂತೆ ವಿದುರನಿಗೆ ಸೂಚಿಸುತ್ತಾನೆ. ‘ಈ ಮೋಸದಾಟದಿಂದ ಇಡೀ ಕುರುವಂಶ ನಾಶವಾಗುವುದು ಖಂಡಿತ. ತಂದೆಯಿಲ್ಲದ ನಿನ್ನ ತಮ್ಮನ ಮಕ್ಕಳಲ್ಲಿ ಇಂತಹ ಅಧರ್ಮ ಸರಿಯಲ್ಲ. ಅವರಿಗೆ ನ್ಯಾಯವಾಗಿ ಸಲ್ಲತಕ್ಕ ಸಾಮ್ರಾಜ್ಯವನ್ನು ಕೊಟ್ಟು ಹಿರಿಯನಾಗಿ ಅವರಿಗೆ ಆಶೀರ್ವದಿಸು. ಇಂತಹ ಅಧರ್ಮಕಾರ್ಯಕ್ಕೆ ಕೈಹಾಕುವುದು ಬೇಡವೆಂದು ದುರ್ಯೋಧನನಿಗೂ, ಶಕುನಿಗೂ ತಿಳಿಹೇಳು’ ಎಂದು ವಿದುರನು ಧೃತರಾಷ್ಟ್ರನಲ್ಲಿ ಪರಿಪರಿಯಾಗಿ ಮನವಿ ಮಾಡಿಕೊಂಡ. ಆದರೆ ಯಾರದೇ ಹಿತವಚನವನ್ನು ಆಲಿಸಲಾಗದ ಚಿತ್ತಸ್ಥಿತಿಯಲ್ಲಿದ್ದ ಧೃತರಾಷ್ಟ್ರ, ‘ಇದು ಸಹೋದರರೆಲ್ಲರೂ ಸಂತೋಷಕ್ಕಾಗಿ ಸೇರುವ ಕೂಟ, ಸೌಹಾರ್ದಯುತ ಆಟ; ಇದರಿಂದ ಯಾರಿಗೂ ಅಪಾಯವಿಲ್ಲ. ಅಷ್ಟಕ್ಕೂ ನಾವೆಲ್ಲರೂ ಆ ಭಗವಂತನ ಅಧೀನ, ಅವನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ’ ಎಂದು ಆತನಿಗೆ ಜ್ಞಾನಿಯಂತೆ ಬುದ್ಧಿವಾದ ಹೇಳಿದ, ಸಾಲದೆಂಬಂತೆ ಪಾಂಡವರನ್ನು ಕರೆತರಲು ರಾಜಾಜ್ಞೆ ವಿಧಿಸಿದ. ವಿದುರ ಅನ್ಯಮಾರ್ಗವಿಲ್ಲದೆ, ‘ಕುರುಕುಲದ ಅಧೋಗತಿ ಸಮೀಪಿಸುತ್ತಿದೆ’ ಎಂದು ಕೊರಗುತ್ತಲೇ ಪಾಂಡವರಿಗೆ ಆಟದ ಆಹ್ವಾನದ ಸುದ್ದಿಯನ್ನು ತಲುಪಿಸುತ್ತಾನೆ. ತರುವಾಯದಲ್ಲಿ, ಸಂಚಿನ ಫಲವಾಗಿ ಪಾಂಡವರು ಜೂಜಾಟದಲ್ಲಿ ಸೋತು, ವನವಾಸ ಅನುಭವಿಸಿ, ಅದು ಕುರುಕ್ಷೇತ್ರ ಯುದ್ಧಕ್ಕೂ ಮುನ್ನುಡಿಯಾಗಿ, ಕೊನೆಗೆ ಕುರುವಂಶದ ನಾಶಕ್ಕೆ ಕಾರಣವಾಯಿತು ಎಂಬುದನ್ನು ನಾವೆಲ್ಲ ಓದಿ-ಕೇಳಿ ತಿಳಿದುಕೊಂಡಿದ್ದೇವೆ. ಇಂಥ ದೃಷ್ಟಾಂತದ ಅರಿವಿದ್ದರೂ, ಧೃತರಾಷ್ಟ್ರ-ಗಾಂಧಾರಿಯರಂತೆ ಅನೇಕ ಪಾಲಕರು ಮಕ್ಕಳ ಮೇಲಿನ ಕುರುಡುಪ್ರೀತಿಯಿಂದಾಗಿ ಅನ್ಯಾಯವನ್ನು ಅಪ್ಪಿಕೊಳ್ಳುವುದು ಮಾತ್ರವಲ್ಲದೆ, ತಪ್ಪನ್ನು ತಡೆಯಲೆತ್ನಿಸದೆ ಅದೇ ಸರಿಯೆಂದು ಬಿಂಬಿಸುತ್ತಾರೆ, ಸಮರ್ಥಿಸಿಕೊಳ್ಳುತ್ತಾರೆ. ಮಕ್ಕಳಲ್ಲಿ ತಪ್ಪಿನ ಅರಿವು ಮೂಡುವಂತೆ ಮಾಡದೆ, ತಂತಮ್ಮ ಮಕ್ಕಳದ್ದೇ ಸರಿಯೆಂದು ವಾದಿಸುತ್ತ ಬದ್ಧವೈರಿಗಳಾಗುತ್ತಾರೆ. ನಮ್ಮ ಮಕ್ಕಳಿಗೆ ಒತ್ತಾಸೆಯಾಗಿ ನಿಲ್ಲಬೇಕು ಎಂಬುದರಲ್ಲಿ ಎರಡುಮಾತಿಲ್ಲ; ಆದರೆ ಒಂದೊಮ್ಮೆ ಅವರು ವಾಮಮಾರ್ಗ ಹಿಡಿದಿರುವುದು ಕಂಡಲ್ಲಿ, ವ್ಯಾಮೋಹವನ್ನೂ ಬದಿಗೆ ಸರಿಸಿ, ಅವರಿಗೆ ಬುದ್ಧಿವಾದ ಹೇಳಿ ಸರಿದಾರಿಗೆ ತರಬೇಕು. ಪರರ ಮಕ್ಕಳಲ್ಲಿ ಕಾಣುವ ಒಳ್ಳೆಯ ಗುಣಗಳನ್ನು ಶ್ಲಾಘಿಸಬೇಕು. ಬಾಲ್ಯದಲ್ಲಿ ಮಕ್ಕಳಿಗೆ ಅಕ್ಕರೆಯನ್ನು ಎರೆಯುವಿಕೆ ಎಷ್ಟು ಮುಖ್ಯವೋ, ದಿನಗಳೆದಂತೆ ಅವರ ಸ್ನೇಹಿತರಾಗಿ ಅವರ ಬಾಳಹಾದಿಗೆ ಮಾರ್ಗದರ್ಶನದ ಬೆಳಕು ಬೀರುವವರೂ ನಾವಾಗಬೇಕು ಎಂಬುದನ್ನು ಮರೆಯದಿರೋಣ.

(ಲೇಖಕಿ ಇಂಜಿನಿಯರ್ ಹಾಗೂ ಹವ್ಯಾಸಿ ಬರಹಗಾರ್ತಿ) (ಪ್ರತಿಕ್ರಿಯಿಸಿ: [email protected])