ಅರಣ್ಯ ಪ್ರದೇಶಗಳಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಗಣಿಗಾರಿಕೆ ನಡೆಸುವುದಕ್ಕೆ ಅನುಮತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವುದು ಆಘಾತಕಾರಿ ಸಂಗತಿ. ಈಗ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಗಣಿಗಾರಿಕೆಗೆ ಅನುಮತಿ ಇದೆ. ಇದನ್ನು ವಿಸ್ತರಿಸುವುದರಿಂದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಣಿಗಾರಿಕೆಯಿಂದ ಶೇಕಡ 8ರಷ್ಟು ಆದಾಯ ಕಡಿಮೆ ಬಂದಿರುವುದನ್ನು ಗಮನಿಸಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಆದರೆ, ಆದಾಯ ಹೆಚ್ಚಳ ಮಾಡಿಕೊಳ್ಳುವ ಭರದಲ್ಲಿ ಪರಿಸರಕ್ಕೆ ಮಾಡುವ ಹಾನಿಯನ್ನು ಯಾವುದರಿಂದಲೂ ಭರಿಸಲು ಸಾಧ್ಯವಿಲ್ಲ. ಈಗಾಗಲೇ ಅತಿಯಾದ ನಗರೀಕರಣ ಮತ್ತು ಗಣಿಗಾರಿಕೆಯ ಆರ್ಭಟ ಅರಣ್ಯಗಳಿಗೆ ಕುತ್ತು ತಂದಿದೆ. ಮನುಷ್ಯನಿಗೆ ಜೀವಿಸುವ ಹಕ್ಕು ಇರುವಂತೆಯೇ ಇತರ ಎಲ್ಲ ಪ್ರಾಣಿಗಳಿಗೂ, ವನ್ಯಜೀವಿಗಳಿಗೂ ಆ ಹಕ್ಕು ಇದೆ. ಅದನ್ನು ಕಸಿದುಕೊಳ್ಳುವ ಧಾಷ್ಟ ್ಯ ಬೇಡ. ವನ್ಯಜೀವಿಗಳು ಆವಾಸಸ್ಥಾನ ಕಳೆದುಕೊಂಡು ಗ್ರಾಮಗಳಿಗೆ, ನಗರಪ್ರದೇಶಗಳಿಗೆ ನುಗ್ಗುವ ಘಟನೆಗಳು ಹೆಚ್ಚುತ್ತಲೇ ಇವೆ. ಇದು ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ. ಪರಿಸ್ಥಿತಿ ಹೀಗಿರುವಾಗ ಹಗಲಿರುಳು ಗಣಿಗಾರಿಕೆಗೆ ಅನುಮತಿ ಸಿಕ್ಕಿದರೆ ಅದರಿಂದಾಗುವ ಅನಾಹುತಗಳು ಒಂದೆರಡಲ್ಲ. ಈ ಆಪತ್ತುಗಳನ್ನು ಪರಿಗಣಿಸದೆ, ಪರಿಸರ ತಜ್ಞರ, ವನ್ಯಜೀವಿ ರಕ್ಷಕರ ಅನಿಸಿಕೆಗೆ ಕಿವಿಗೊಡದೆ ಸರ್ಕಾರಗಳು ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ.
24 ತಾಸು ಗಣಿಗಾರಿಕೆ, ಅದಿರು ಸಾಗಣೆಯ ಸಾಧಕ-ಬಾಧಕ ಅಧ್ಯಯನಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಅಲ್ಲದೆ, ಈ ಕುರಿತಂತೆ ಸುಪ್ರೀಂ ಕೋರ್ಟ್ ನೇಮಿಸಿದ ಮೇಲ್ವಿಚರಣಾ ಸಮಿತಿಯ ಅಭಿಪ್ರಾಯವನ್ನು ಪಡೆಯಲಿದೆ. ಆದರೆ, ಹಗಲಿರುಳು ಗಣಿಗಾರಿಕೆ, ಸಾಗಣೆಗೆ ಅವಕಾಶ ನೀಡಿದರೆ ಪರಿಸರ, ಅರಣ್ಯ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗುವುದು ನಿಶ್ಚಿತ. ಪರಿಸರಕ್ಕೆ ಹಾನಿ ಮಾಡಿ ಕೈಗೊಂಡ ತಥಾಕಥಿತ ಅಭಿವೃದ್ಧಿ ಯೋಜನೆಗಳಿಂದ ಈಗಾಗಲೇ ಪಶ್ಚಾತಾಪ ಪಡುವಂತಾಗಿದೆ. ಅರಣ್ಯದ ಭೂಮಿಯನ್ನು ಅತಿಕ್ರಮಿಸಿ ಅಲ್ಲಿ ಮಾಡುವ ನಿರ್ವಣಗಳು, ಇತರ ಚಟುವಟಿಕೆಗಳು ಭಾರಿ ಹಾನಿಯನ್ನು ತಂದೊಡ್ಡುತ್ತಿವೆ. ಈ ಕುರಿತಾದ ನಿದರ್ಶನಗಳು ಸರ್ಕಾರ ಮತ್ತು ಜನಸಾಮಾನ್ಯರ ಕಣ್ಮುಂದೆಯೇ ಇರುವಾಗ 24 ಗಂಟೆ ಗಣಿಗಾರಿಕೆಯ ಚಿಂತನೆಯೇ ವಿಪತ್ತನ್ನು ಆಹ್ವಾನಿಸುವಂಥದ್ದು. ಜೀವವೈವಿಧ್ಯ, ಅರಣ್ಯ, ಪರಿಸರ ಸಂರಕ್ಷಣೆ ದೃಷ್ಟಿಯಿಂದ ಹಲವು ರಾಜ್ಯಗಳು ವಿನೂತನ ಯೋಜನೆಗಳನ್ನು ಜಾರೊಗೊಳಿಸುತ್ತಿರುವಾಗ ಕರ್ನಾಟಕ ಈ ನಿಟ್ಟಿನಲ್ಲಿ ಹಿಂದಡಿ ಇಡುವುದು ಯಾವ ನ್ಯಾಯ? ಈ ವಿಷಯದಲ್ಲಿ ಇನ್ನೂ ಕಾಲ ಮಿಂಚಿಲ್ಲ. ಗಣಿಗಾರಿಕೆಯ ಸಮಯ ವಿಸ್ತರಿಸುವ ಬೇಡಿಕೆಯನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿರಸ್ಕರಿಸಬೇಕು. ಆದಾಯಕ್ಕಿಂತ ಪರಿಸರ ಮುಖ್ಯ ಎಂಬುದನ್ನು ಸರ್ಕಾರ ಅರಿಯಬೇಕಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಸ್ಪಷ್ಟ ನೀತಿಯನ್ನು ರೂಪಿಸಿ, ಪರಿಸರ ಮತ್ತು ಜೀವವೈವಿಧ್ಯವನ್ನು ಕಾಪಾಡುವ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಇಲ್ಲವಾದಲ್ಲಿ ಸಮಸ್ಯೆಗಳನ್ನು ಸರ್ಕಾರವೇ ಆಹ್ವಾನಿಸಿಕೊಂಡಂತೆ ಆಗುತ್ತದೆ ಎಂಬುದನ್ನು ಮರೆಯುವಂತಿಲ್ಲ.
ಲಖನೌ ತಂಡದಲ್ಲಿ ನಾನು…LSG ಮಾಲೀಕ ಸಂಜೀವ್ ಜೊತೆಗಿನ ವಿವಾದದ ಕುರಿತು ಮೌನಮುರಿದ KL Rahul
Orange ಜ್ಯೂಸ್ನಿಂದಾಗಿ ಬದಲಾಯ್ತು ಮಹಿಳೆಯ ಬದುಕು; ಲಾಟರಿಯಲ್ಲಿ ಗೆದ್ದಿದ್ದು ಕೋಟಿ ಕೋಟಿ