
ಕೂಡ್ಲಿಗಿ: ರಕ್ತದಾನ ಜೀವದಾನ ಮಾಡಿದಂತೆ. ಯುವಕರು ರಕ್ತದಾನಕ್ಕೆ ಮುಂದಾಗಬೇಕು ಎಂದು ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಕುಮಾರ್ ಹೇಳಿದರು.
ಇದನ್ನೂ ಓದಿ:ದೇಶ ರಕ್ಷಕ ಪಡೆಯಿಂದ ವಿಶ್ವ ರಕ್ತದಾನಿಗಳ ದಿನ ಆಚರಣೆ
ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ತಾಲೂಕು ಆರೋಗ್ಯ ಇಲಾಖೆ, ಕೆಕೆಆರ್ ಟಿಸಿ ಕೂಡ್ಲಿಗಿ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ ತಿಮ್ಮಲಾಪುರ, ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಹಣ ಸೊಸೈಟಿ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
18ರಿಂದ 60 ವರ್ಷದೊಳಗಿನ ಆರೋಗ್ಯವಂತರು ರಕ್ತದಾನ ಮಾಡಬಹುದು. ಹೊಸ ರಕ್ತ ಉತ್ಪತ್ತಿಯಾಗಿ ದೇಹ ಚೈತನ್ಯದಿಂದ ಕೂಡಿರುತ್ತದೆ. ಹೃದಯ ಸಂಬಂಧಿ ರೋಗ ತಡೆಯಬಹುದು ಎಂದರು.
ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಮಾತನಾಡಿ, ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ರಕ್ತ ನೈಸರ್ಗಿಕವಾಗಿದ್ದು, ಕೃತಕ ಸೃಷ್ಟಿ ಅಸಾಧ್ಯ. ಅಪಘಾತ ಹಾಗೂ ಹೆರಿಗೆ ಸಮಯದಲ್ಲಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬೇಕು. ಯುವಕರು ರಕ್ತದಾನ ಮೂಲಕ ಸಾಮಾಜಿಕ ಬದ್ಧತೆ ಮೆರೆಯಬೇಕು ಎಂದು ತಿಳಿಸಿದರು. 250ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಶುಕೂರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ್ ನಾಯ್ಕ, ಸಾರಿಗೆ ವ್ಯವಸ್ಥಾಪಕ ಮಂಜುನಾಥ ಹೊನ್ನಳ್ಳಿ, ಪಪಂ ಸದಸ್ಯ ಸಚಿನ್ ಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳಾದ ಕೆ.ಸುನೀತಾ, ಪಿ.ಬಿ.ಗಿರಿಜಾ, ಭವ್ಯಾ, ಐಸಿಟಿಸಿ ಆಪ್ತ ಸಮಾಲೋಚಕರಾದ ಮರುಳಾರಾಧ್ಯ, ಮಹಾಂತೇಶ್, ಕೆ.ಪ್ರಶಾಂತ ಕುಮಾರ್, ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಓಬಣ್ಣ, ಪ್ರಮುಖರಾದ ನಾಗರಾಜ, ಬೋರಣ್ಣ, ಸೋಮಶೇಖರ್, ಸುನೀಲ್ ಸಾಥಿಹಾಳ್, ಸತೀಶ್ ಇತರರಿದ್ದರು.