ಶಿರಸಿ;: ಭವ್ಯ ಹಾಗೂ ಸದೃಢ ಭಾರತ ನಿರ್ಮಾಣ ಮಾಡುವ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೇ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಿಪಿಐ ಶಶಿಕಾಂತ ವರ್ವ ಹೇಳಿದರು.
ಗುರುವಾರ ನಗರದ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜ್ನಲ್ಲಿ ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಾದಕ ವಸ್ತು ಮುಕ್ತ ಸಮಾಜ ನಿರ್ವಣದಲ್ಲಿ ಮಾಧ್ಯಮ ಮತ್ತು ವಿದ್ಯಾರ್ಥಿಗಳ ಪಾತ್ರ’ ಕುರಿತು ಮಾತನಾಡಿದರು.
ವಿದ್ಯೆ ಎಂಬ ಪ್ರಯತ್ನದಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ಒಳ್ಳೆಯ ಉದ್ಯೋಗ ಪಡೆಯುವತ್ತ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕಾಗಿದ್ದು, ಮಾದಕ ವಸ್ತುಗಳ ವ್ಯಸನಕ್ಕೆ ಅಂಟಿಕೊಂಡರೆ ಅದರಿಂದ ಹೊರಬರುವುದು ಬಹಳ ಕಷ್ಟವಾಗಿದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಮಾದಕ ವಸ್ತು ಸೇವನೆಯಿಂದ ಕಾನೂನು ಅಡಿಯಲ್ಲಿ ಸಿಲುಕಿಕೊಂಡರೆ ಸಮಾಜ, ಕುಟುಂಬ ಬಹಿಷ್ಕಾರ ಹಾಕಲಿದೆ. ಸ್ಪರ್ಧಾತ್ಮಕ ಪರೀಕ್ಷೆಯತ್ತ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಬೇಕು. ಪ್ರತಿ ದಿನ ಬೆಳಗ್ಗೆ ಪತ್ರಿಕೆ ಓದುವುದನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದ ಅವರು, ಪತ್ರಕರ್ತರಿಗೆ ಸರ್ಕಾರವು ನೆರವು ನೀಡುವುದರ ಜತೆ ಪೋ›ತ್ಸಾಹ ನೀಡುತ್ತಿದೆ. ಆದರೆ, ಬೆರಳಣಿಕೆಯಷ್ಟು ಪತ್ರಕರ್ತರಿಂದ ಸಮಾಜದಲ್ಲಿ ಕೆಟ್ಟ ಹೆಸರು ಬರಲು ಕಾರಣವಾಗಿದೆ. ಅದಕ್ಕೆ ಅವಕಾಶ ನೀಡಬಾರದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಕಾಲೀನ ಆಗು- ಹೋಗುಗಳ ತಿಳಿವಳಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಓದುವ ಹವ್ಯಾಸ ಕಡಿಮೆಯಾಗಿದೆ. ಚುಟುಕು ಓದಿನ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದು, ಸಮಗ್ರ ಓದು ಅವಶ್ಯವಿದೆ. ವಿದ್ಯಾರ್ಥಿ ಜೀವನದಲ್ಲಿ ಸರಿಯಾಗಿ ಅಧ್ಯಯನ ಮಾಡಿದಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಸಂಚಾರ ದಟ್ಟಣೆ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ನಗರ ಠಾಣೆಯ ಪಿಎಸ್ಐ ನಾಗಪ್ಪ.ಬಿ. ಉಪನ್ಯಾಸ ನೀಡಿ, ಪತ್ರಿಕಾ ರಂಗವು ಸಮಾಜದಲ್ಲಿ ಛಾಪು ಮೂಡಿಸುತ್ತಿರುವುದಿಂದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿದ್ದು, ಭವ್ಯ ಸಮಾಜ ನಿರ್ವಿುಸಲು ಪತ್ರಿಕಾ ರಂಗ ತನ್ನದೇ ಕೊಡುಗೆ ನೀಡುತ್ತಿದೆ. ಸಂಚಾರ ನಿಯಮಗಳು ಎಲ್ಲವೂ ತಿಳಿದರೂ ತಪ್ಪು ಮಾಡುತ್ತಿದ್ದೇವೆ. 18 ವರ್ಷ ತುಂಬಿದ ನಂತರ ವಾಹನ ಚಾಲನಾ ಪರವಾನಗಿ ಪತ್ರ ಪಡೆದ ನಂತರ ವಾಹನ ಚಲಾಯಿಸಬೇಕು. 18 ವರ್ಷದ ಪೂರ್ವದಲ್ಲಿ ವಾಹನ ಚಲಾಯಿಸಿದರೆ ತಂದೆ- ತಾಯಿ ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಕರ್ತ ಬಸವರಾಜ ಪಾಟೀಲ, ಕಾಲೇಜ್ನ ಪ್ರಭಾರಿ ಪ್ರಾಚಾರ್ಯ ಸುಬ್ರಹ್ಮಣ್ಯ ಭಟ್ಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಜಿಲ್ಲಾ ಪತ್ರಿಕಾ ಮಂಡಳಿ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಹಿರಿಯರಾದ ಸತ್ಯನಾರಾಯಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ವಿನುತಾ ಹೆಗಡೆ ಸ್ವಾಗತಿಸಿದರು. ಕಾಲೇಜ್ನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ನಿರೂಪಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು.
ಬಡತನ ಮತ್ತು ಹಸಿವು ಕಲಿಸುವ ವಿದ್ಯೆಯನ್ನು ಯಾವ ವಿಶ್ವವಿದ್ಯಾಲಯದ ಕಲಿಸಲು ಸಾಧ್ಯವಿಲ್ಲ. ಕಷ್ಟಪಟ್ಟು ಓದಿನಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು.
| ಶಶಿಕಾಂತ ವರ್ವ, ಸಿಪಿಐ ಶಿರಸಿ