ಮುಂಡರಗಿ: ಶರಣರು ನುಡಿದಂತೆ ನಡೆದರು. ತಮ್ಮ ಗೃಹಸ್ಥಾಶ್ರಮದಲ್ಲಿ ವೈಚಾರಿಕ ಬದುಕು ನಡೆಸಿದರು. ಅವರ ನಡೆ-ನುಡಿಗಳಲ್ಲಿ ಯಾವುದೇ ಬೇಧವಿರಲಿಲ್ಲ. ಶರಣ ನಗೆಮಾರಿ ತಂದೆ ತನ್ನ ಅಗಾಧ ಜೀವನ ಪ್ರೀತಿ ಮತ್ತು ಹಾಸ್ಯ ಪ್ರಜ್ಞೆಯಿಂದ ಪ್ರಸಿದ್ಧಿ ಹೊಂದಿದ್ದರು. ಅವರು ಚುಚ್ಚು ಮಾತುಗಳನ್ನಾಡದೆ, ಎಲ್ಲರೂ ಮೆಚ್ಚುವ ಮಾತುಗಳನ್ನಾಡುತ್ತಿದ್ದರು ಎಂದು ನಿವೃತ್ತ ಉಪನ್ಯಾಸಕ ಎ.ವೈ. ನವಲಗುಂದ ಹೇಳಿದರು.
ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಕಸಾಪ, ಶಸಾಪ, ಮತ್ತು ಚೈತನ್ಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಏರ್ಪಾಟಾಗಿದ್ದ ಶರಣ ಚಿಂತನ ಮಾಲಿಕೆ-7ರ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶರಣ ನಗೆಮಾರಿ ತಂದೆ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ನೀಲಪ್ಪ ಹಕ್ಕಂಡಿ ಮಾತನಾಡಿ, ಶರಣರು ತಾತ್ವಿಕ ತಳಹದಿ ಮೇಲೆ ಸಮಾಜ ಕಟ್ಟಿದ್ದರು. ಶರಣರಲ್ಲಿ ಹಾಸ್ಯಪ್ರಜ್ಞೆಯೂ ಇತ್ತು ಎಂಬುದಕ್ಕೆ ಸಾಕ್ಷಿ ಅವರಲ್ಲಿ 61ಕ್ಕೂ ಹೆಚ್ಚು ಜನ ನಗೆಮಾರಿಗಳು ಇದ್ದರು. ಅಂದಿನ ಕಲ್ಯಾಣದ ಏಳುನೂರ ಎಪ್ಪತ್ತು ಗಣಂಗಳಲ್ಲಿ ನಗಿಸುವ ಕಾಯಕ ಮಾಡುತ್ತಿದ್ದ ಇವರ ಶೈಲಿ ಜಾನಪದ ಮೂಲದ್ದಾಗಿತ್ತು. ಅತಿ ಹೆಚ್ಚು ಜನಪ್ರಿಯರಾಗಿದ್ದ ಒಟ್ಟು ನಾಲ್ವರು ನಗೆಮಾರಿಗಳಲ್ಲಿ ಮೊದಲನೆಯವರು ಅರಿವಿನ ಮಾರಿತಂದೆ, ಎರಡನೆಯವರು ಮನಸೊಂದ ಮಾರಿ ತಂದೆ, ಮೂರನೆಯವರು ನಗೆಮಾರಿ ತಂದೆ ಮತ್ತು ನಾಲ್ಕನೆಯವರು ಕಂಬದ ಮಾರಿತಂದೆ. ಇವರನ್ನು ತಂದೆ ಎಂದು ಕರೆಯಲು ಕಾರಣ ಇವರು ಅರಿವಿನ ಗುರುಗಳಾಗಿದ್ದರು. ಜಾನಪದ ಮೂಲದ ಸೊಗಡಿನಲ್ಲಿ ನಗೆಯ ಸೆಲೆ ಉಕ್ಕಿಸುವ ನೈಪುಣ್ಯತೆ ಹೊಂದಿದ್ದು ತಮ್ಮ ಕೆಲಸವನ್ನು ದುಡಿಮೆ ಎಂದು ನೋಡದೆ ಕಾಯಕ ಎಂದು ಭಾವಿಸಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬುದನ್ನು ಮನಮುಟ್ಟುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಸಾಪ ತಾಲೂಕಾಧ್ಯಕ್ಷ ಆರ್.ಎಲ್. ಪೊಲೀಸಪಾಟೀಲ ಮಾತನಾಡಿ, ಶಿವಶರಣರು ತಮ್ಮ ಬದುಕಿನ ಕುರಿತ ಐತಿಹಾಸಿಕ ದಾಖಲೆಗಳು ಹಾಗೂ ವಿವರಗಳನ್ನು ಬಿಟ್ಟು ಹೋಗದಿದ್ದರೂ ವಚನಗಳೆಂಬ ಮಹಾಸಂಪತ್ತನ್ನು ನಮಗೆ ಕೊಟ್ಟು ಹೋಗಿದ್ದಾರೆ. ಸಮಾಜದ ಎಲ್ಲ ವರ್ಗಗಳನ್ನು ಸಮಾನತೆ ಹಾದಿಯಲ್ಲಿ ನಡೆಸಿದ್ದಾರೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ ಹಾಗೂ ವೀಣಾ ಪಾಟೀಲಕಾರ್ಯಕ್ರಮ ನಿರ್ವಹಿಸಿದರು.