More

    ಎಲ್ಲ ಶಾಲೆಗಳಲ್ಲೂ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಪ್ರಾರಂಭಿಸಲಿ

    ಮೈಸೂರು: ಮಕ್ಕಳಲ್ಲಿ ಶಿಸ್ತು, ಸಮಯಪ್ರಜ್ಞೆ, ದೇಶಭಕ್ತಿ ಬೆಳೆಸಲು ಸಹಕಾರಿಯಾಗಿರುವ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅನ್ನು ಎಲ್ಲ ಶಾಲೆಗಳಲ್ಲೂ ಪ್ರಾರಂಭಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡುರಂಗ ನಿರ್ದೇಶನ ನೀಡಿದರು.

    ನಗರದ ಶ್ರೀ ಜಯಚಾಮರಾಜೇಂದ್ರ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಮಂಗಳವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಕುರಿತು ಆಯೋಜಿಸಿದ್ದ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ವಿದ್ಯಾರ್ಥಿಗಳು ಕೇವಲ ವಿದ್ಯೆಯ ಕಡೆಗೆ ಮಾತ್ರವಲ್ಲದೆ ಸಮಾಜದ ಕಡೆಗೂ ಗಮನಹರಿಸಬೇಕು. ಸಮಾಜಮುಖಿ ಕೆಲಸಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಇದಕ್ಕೆ ಸ್ಕೌಟ್ ಮತ್ತು ಗೈಡ್ಸ್ ಸಹಕಾರಿಯಾಗಲಿದೆ ಎಂದರು.

    ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ ಮಾತನಾಡಿ, ಈ ಹಿಂದೆ ವಿದ್ಯಾರ್ಥಿಗಳು ವಿದ್ಯೆಯನ್ನು ತಮಗೋಸ್ಕರ ಕಲಿಯುತ್ತಿದ್ದರು. ಅಂತಹ ಕಲಿಕಾ ವಾತಾವರಣ ಶಾಲೆಗಳಲ್ಲಿ ಇತ್ತು. ಆದರೆ, ಇಂದು ವಿದ್ಯಾರ್ಥಿಗಳು ವಿದ್ಯೆಯನ್ನು ಪಾಲಕರು, ಶಿಕ್ಷಕರು, ಶಿಕ್ಷಣ ಅಧಿಕಾರಿಗಳಿಗೋಸ್ಕರ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ಶಿಕ್ಷಣ ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗಿದ್ದು, ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡುತ್ತಿಲ್ಲ. ಆದರೆ, ಹೊಸ ಶಿಕ್ಷಣ ನೀತಿಯಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿರುವುದು ಸಂತಸದ ವಿಚಾರ ಎಂದರು.

    ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಪಿ.ವಿಶ್ವನಾಥ್ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಪ್ರಸ್ತುತ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನೈತಿಕ ಶಿಕ್ಷಣವನ್ನು ಮಕ್ಕಳಿಗೆ ನೀಡಲಿದೆ. ಹೀಗಾಗಿ ಸಂಸ್ಥೆಯ ಮಹತ್ವ ಅರಿತು ಸಂಸ್ಥೆಯ ಚಟುವಟಿಕೆಯನ್ನು ಎಲ್ಲ ಶಾಲೆಗಳಿಗೂ ವಿಸ್ತರಿಸಬೇಕು ಎಂದು ತಿಳಿಸಿದರು.

    ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಕೆ.ಬಸವರಾಜು, ಜಿಲ್ಲಾ ಖಜಾಂಚಿ ಡಾ.ಕೆ.ಬಿ.ಗುರುಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts