ಬೆಳ್ತಂಗಡಿ: ಈ ವರ್ಷ ಮಳೆ ದೊಡ್ಡ ಪ್ರಮಾಣದಲ್ಲಿ ನಾಶನಷ್ಟಗಳನ್ನು ಉಂಟು ಮಾಡಿದ್ದು, ಜನ-ಜಾನುವಾರು, ಮನೆ ಎಲ್ಲ ರೀತಿಯಲ್ಲೂ ತೊಂದರೆ ಅನುಭವಿಸಿದೆ. ರಾಜ್ಯ ಸರ್ಕಾರ ದ.ಕ.ಜಿಲ್ಲೆಗೆ ಅನ್ವಯಿಸುವಂತೆ 300 ಕೋ.ರೂ.ನ ವಿಶೇಷ ಅನುದಾನ ಘೋಷಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಆಗ್ರಹಿಸಿದರು.
ಕೆಲವು ಕಡೆ ನಾಲ್ಕು ಗ್ರಾಮಗಳಿಗೆ ಒಬ್ಬ ಗ್ರಾಮ ಲೆಕ್ಕಿಗರಿದ್ದಾರೆ. ಇನ್ನೂ ಕೂಡ ನಷ್ಟವಾದ ಸ್ಥಳಗಳಿಗೆ ಅಧಿಕಾರಿ ವರ್ಗ ಭೇಟಿ ನೀಡಿಲ್ಲ. ದ.ಕ.ಸಹಿತ ಬೆಳ್ತಂಗಡಿ ಹಾನಿಗೆ ತುರ್ತು ಕ್ರಮಕ್ಕೆ ಸರ್ಕಾರದಲ್ಲಿ ಯಾವುದೇ ವ್ಯವಸ್ಥೆಯಿಲ್ಲ. ಪ್ರತಿ ಗ್ರಾಪಂಗೆ 15 ಸಾವಿರ ರೂ. ನೀಡಿದೆ. ಅದರಲ್ಲಿ ಪಂಚಾಯಿತಿ ಏನು ವ್ಯವಸ್ಥೆ ಮಾಡಬಹುದು. ಸಣ್ಣ ಹೊಂಡ ತುಂಬಿಸಲು ಸರ್ಕಾರ ಆರ್ಥಿಕ ಬಲ ನೀಡಿಲ್ಲ.
ಬೆಳ್ತಂಗಡಿ ತಾಲೂಕಿನಲ್ಲಿ 2019-20 ರಲ್ಲಿ 249 ಪೂರ್ಣ ಹಾನಿಯಾದ ಮನೆ, 40 ಭಾಗಶಃ ಹಾನಿಯಾದ ಮನೆ ಸೇರಿ ಒಟ್ಟು 289 ಮನೆಗಳಿಗೆ 11.53 ಕೋ.ರೂ.ಅನುದಾನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಸರ್ಕಾರ ನೆರೆ ಸಂದರ್ಭದಲ್ಲೂ ರಾಜಕೀಯ ಮಾಡುತ್ತ ಸಣ್ಣತನ ತೋರಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಉಪಸ್ಥಿತರಿದ್ದರು.