ಬೇಲೂರು: ಹತ್ತಾರು ವರ್ಷ ಬಾಳಿಕೆ ಬರುವಂತೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.
ಪಟ್ಟಣದ ಮುಖ್ಯ ರಸ್ತೆಯಿಂದ ಹೊಳೆ ಬೀದಿಗೆ ಸಂಪರ್ಕ ಕಲ್ಪಿಸುವ ಪಪ್ಲಿ ಬೀದಿ ರಸ್ತೆಯ ಕಾಂಕ್ರಿಟ್ ಕಾಮಗಾರಿ ಪರಿಶೀಲಿಸಿ ಮಾತನಾಡಿ, 13 ಲಕ್ಷ ರೂ., ಎಸ್‌ಎಫ್‌ಸಿ ಅನುದಾನದಡಿ ಪಪ್ಲಿ ಬೀದಿ, ಹನುಮಂತನಗರ, ಪುರಿಬಟ್ಟಿ ಬೀದಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದವು. ಸ್ಥಳೀಯ ಸದಸ್ಯರು, ಸಾರ್ವಜನಿಕರು ಹಲವು ಬಾರಿ ರಸ್ತೆ ದುರಸ್ತಿಗೆ ಮನವಿ ಮಾಡಿದ್ದರು. ಆದ್ದರಿಂದ ಎಸ್‌ಎಫ್‌ಸಿ ಅನುದಾನದಿಂದ ಯೋಜನೆ ರೂಪಿಸಿ ಕಾಮಗಾರಿ ಮಾಡಿಸಲಾಗುತ್ತಿದೆ ಎಂದರು.
ಸ್ಥಳೀಯರು ಕಾಮಗಾರಿ ನಡೆಯುವಾಗ ಗಮನಹರಿಸಿ ಕಳಪೆ ಕಂಡುಬಂದರೆ ತಡೆದು ಗುಣಮಟ್ಟದಲ್ಲಿ ಕೆಲಸ ಮಾಡುವಂತೆ ತಿಳಿಸಬೇಕು. ಜತೆಗೆ ರಸ್ತೆ ನಿರ್ಮಾಣ ಮಾಡುವಾಗ ಎರಡೂ ಬದಿಯಲ್ಲಿ ಜಾಗ ಬಿಡದೆ ಸಂಪೂರ್ಣವಾಗಿ ಕಾಂಕ್ರೀಟ್ ಹಾಕುವ ಮೂಲಕ ಉತ್ತಮ ರಸ್ತೆ ನಿರ್ಮಿಸಬೇಕು. ರಸ್ತೆ ಬದಿ ಮನೆಗಳನ್ನು ನಿರ್ಮಿಸಿ ಕೊಂಡಿರುವವರು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದರು. ಆರೋಗ್ಯಾಧಿಕಾರಿ ಲೋಹಿತ್ ಹಾಗೂ ವಾರ್ಡ್‌ನ ನಿವಾಸಿಗಳಿದ್ದರು.