ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲಿ

1 Min Read
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲಿ

ಹಿರೇಕೆರೂರ: ತಾಲೂಕಿನಲ್ಲಿ ಸರ್ವಜ್ಞ ಏತ ನೀರಾವರಿ ಯೋಜನೆ ಮತ್ತು ತುಂಗಭದ್ರಾ ನದಿಯಿಂದ 335 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸದಿರುವ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಪತ್ರ ಬರೆಯಲಾಗಿದೆ. ಶೀಘ್ರವೇ ಯೋಜನೆಗಳನ್ನು ಪೂರ್ಣಗೊಳಿಸಿ ತಾಲೂಕಿನ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಒತ್ತಾಯಿಸಿದರು.

ಪಟ್ಟಣದ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿಗೆ 2019-20ರಲ್ಲಿ 95 ಕೆರೆ ತುಂಬಿಸುವ 185 ಕೋಟಿ ರೂ. ವೆಚ್ಚದ ಯೋಜನೆ ಮಂಜೂರಾಗಿ ಕೆಲಸ ಪ್ರಾರಂಭವಾಗಿದೆ. 2023ರಲ್ಲಿ ಈ ಯೋಜನೆಯನ್ನು ಮುಕ್ತಾಯಗೊಳಿಸಿ ಕೆರೆ ತುಂಬಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. 2023-24ರಲ್ಲಿ ಕೆರೆ ತುಂಬಿಸುವ ಯೋಜನೆ ಪೂರ್ಣಗೊಂಡಿದ್ದರೆ ರೈತರು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ, ಸರ್ಕಾರದ ವಿಳಂಬ ಧೋರಣೆಯಿಂದ ಇದುವರೆಗೂ ಈ ಯೋಜನೆ ಪೂರ್ಣಗೊಂಡಿಲ್ಲ. ಈ ವರ್ಷವೂ ಇದರಿಂದ ರೈತರಿಗೆ ಬಹಳಷ್ಟು ಅನಾನುಕೂಲವಾಗುತ್ತದೆ. ಅಲ್ಲದೆ, ಈಗಾಗಲೇ ಮಡ್ಲೂರು, ಗುಡ್ಡದಮಾದಾಪುರ, ಅಸುಂಡಿ, ದುರ್ಗಾದೇವಿ, ತಡಗಣಿ, ಆಣೂರು ಏತ ನೀರಾವರಿ ಯೋಜನೆಗಳು ಪೂರ್ಣಗೊಂಡು ಲೋಕಾರ್ಪಣೆ ಆಗಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿಲ್ಲ. ಕೂಡಲೇ ಸರ್ವಜ್ಞ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಪೂರ್ಣಗೊಂಡ ಯೋಜನೆಗಳಿಂದ ಕೆರೆಗಳನ್ನು ತುಂಬಿಸಬೇಕು.

15 ದಿನದೊಳಗೆ ಕ್ರಮ ಕೈಗೊಳ್ಳಬೇಕು ಹಾಗೂ 2022- 23ನೇ ಸಾಲಿನ ತಾಲೂಕಿನ 96 ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಪ್ರಾರಂಭವಾಗಿದ್ದು, ಇದುವರೆಗೂ ಮುಕ್ತಾಯವಾಗಿಲ್ಲ. ತಾಲೂಕಿನಲ್ಲಿ ಫ್ಲೋರೈಡ್‌ಯುಕ್ತ ನೀರು ಇರುವುದರಿಂದ ಡೆಂೆ ಇತರ ಸಾಂಕ್ರಾಮಿಕ ರೋಗಗಳು ಬರುತ್ತಿವೆ. ಕೂಡಲೇ ಈ ಯೋಜನೆ ಪೂರ್ಣಗೊಳಿಸಿ ಕುಡಿಯುವ ನೀರಿನ ಸೌಲಭ್ಯ ಮಾಡಿಕೊಡಬೇಕು. ಮೂರು ತಿಂಗಳ ಒಳಗಾಗಿ ಯೋಜನೆ ಪೂರ್ಣಗೊಳ್ಳದೆ ಹೋದರೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

See also  ಚುನಾವಣಾ ಪ್ರಚಾರದ ನಡುವೆಯೇ ಕಾಂಗ್ರೆಸ್​ ನಾಯಕನ ಐಷಾರಾಮಿ ಕಾರು ಎಗರಿಸಿದ ಖತರ್ನಾಕ್​ ಖದೀಮರು!
Share This Article