ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಪೂರ್ವ ಮತ್ತು ಸೆಂಟ್ರ್ರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಇಲ್ಲಿನ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಗುರುವಾರ ನಡೆಯಿತು.

ತಾಂತ್ರಿಕ ಸಮಸ್ಯೆಯಿಂದಾಗಿ ಹಲವೆಡೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಫಲಾನುಭವಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಸಮಿತಿ ಸದಸ್ಯರು ಆಗ್ರಹಿಸಿದರು.
ಸಿಡಿಪಿಒ ಮುತ್ತಣ್ಣ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗೃಹಲಕ್ಷ್ಮೀ ಯೋಜನೆಯ 1,43,308 ಫಲಾನುಭವಿಗಳಿದ್ದಾರೆ. ಅದರಲ್ಲಿ 1,12,888 ಫಲಾನುಭವಿಗಳಿಗೆ ಹಣ ಸಂದಾಯವಾಗುತ್ತಿದ್ದು, ಇಕೆವೈಸಿ ಸಮಸ್ಯೆಯಿಂದ 1,420 ಫಲಾನುಭವಿಗಳಿಗೆ ಹಂಣ ಸಂದಾಯವಾಗುತ್ತಿಲ್ಲ. 138 ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಣಿಯಾದ ನಂತರ ಮೃತಪಟ್ಟಿದ್ದು, ಅವರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.
ಸಮಿತಿಯ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಗಣಿ ವಾಲಿ ಅಹ್ಮದ್ ಮಾತನಾಡಿ, ಎರಡು ತಿಂಗಳಿಂದ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯವಾಗಿಲ್ಲ. ಇದರಿಂದ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ ಮುತ್ತಣ್ಣ, ಸರ್ಕಾರದಿಂದ ಜೂನ್ವರೆಗೆ ಮಾತ್ರ ಹಣ ಬಿಡುಗಡೆಯಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಬಿಡುಗಡೆಯಾಗಿಲ್ಲ. ಸರ್ವರ್ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕಿ ವಸುಂಧರಾ ಹೆಗಡೆ ಮಾತನಾಡಿ, ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 31,544 ಪಡಿತರ ಚೀಟಿ ಹೊಂದಿದ ಫಲಾನುಭವಿಗಳಿದ್ದಾರೆ. ಅದರಲ್ಲಿ 30,694 ಫಲಾನುಭವಿಗಳಿಗೆ ಜೂನ್ನಲ್ಲಿ 1.83 ಕೋಟಿ ಮೊತ್ತ ಜಮಾ ಮಾಡಲಾಗಿದೆ. ಇ ಕೆವೈಸಿ ಆಗಬೇಕಿರುವ ಕಾರಣ 850 ಜನರಿಗೆ ಹಣ ಜಮಾ ಆಗಿಲ್ಲ ಎಂದು ತಿಳಿಸಿದರು.
ಸರ್ಕಾರದ 5 ಗ್ಯಾರಂಟಿ ಯೋಜನೆಯಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಪಾಲಿಕೆ ಉಪ ಆಯುಕ್ತ ಆನಂದ ಕಲ್ಲೋಳಿಕರ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪೂರ್ವ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ರಶೀದ್ ಭೋಲಾಭಾಯಿ, ಸಮಿತಿ ಸದಸ್ಯರಾದ ಅಬ್ದುಲ್ ಅಜಿಜ್ ಮುಲ್ಲಾ, ಪ್ರವೀಣ ಶಲವಡಿ, ಲಕ್ಷ ಣ ಗಡ್ಡಿ, ಸಂತೋಷ ನಾಯಕ, ಬಾಳಮ್ಮ ಜಂಗಿನವರ, ಪ್ರಕಾಶ ಮಾಯಕರ, ಉಮೇಶ ಕೋಟೆನ್ನವರ, ಆಹಾರ ನಿಗಮದ ಎಡಿ ಡಾ. ವಸುಂಧರಾ ಹೆಗಡೆ, ವಾಯವ್ಯ ಸಾರಿಗೆ ಸಂಸ್ಥೆಯ ಪಾರ್ವತಿ ಹುನಗುಂದ, ವಾದಿರಾಜ ಕುಲಕರ್ಣಿ, ವೀರಭದ್ರಯ್ಯಾ ಹಿರೇಹಾಳ, ಫಕೀರಪ್ಪ ದೊಡಮನಿ ಹಾಗೂ ಇತರರು ಇದ್ದರು.