
ಪಾಂಡವಪುರ: ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ ದಿನವನ್ನು ಸರ್ಕಾರ ದಾಸೋಹ ದಿನವಾಗಿ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಆನಂದ್ ಒತ್ತಾಯಿಸಿದರು.
ಪಟ್ಟಣದಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಘಟಕದ ತಾಲೂಕು ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆಯನ್ನು ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ಶ್ರೀಗಳ ಪುಣ್ಯ ಸ್ಮರಣೆಯನ್ನು ರಾಜ್ಯ ಸರ್ಕಾರ ದಾಸೋಹ ದಿನ ಎಂದು ಘೋಷಣೆ ಮಾಡಿದರೆ, ಅದು ಸರ್ಕಾರದ ಘನತೆ ಹೆಚ್ಚಿಸುತ್ತದೆ. ಹೀಗಾಗಿ ಕೂಡಲೇ ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡ ಎಸ್.ಎ.ಮಲ್ಲೇಶ್ ಮಾತನಾಡಿ, ಶಿವಕುಮಾರ ಸ್ವಾಮೀಜಿ ಬಸವಣ್ಣನವರ ತತ್ವದಡಿ ಬದುಕಿದ್ದಾರೆ. ಸಿದ್ದಗಂಗಾ ಮಠದಲ್ಲಿ ನಿತ್ಯ ಸಾವಿರಾರು ಮಕ್ಕಳಿಗೆ ದಾಸೋಹ ನಡೆಯುತ್ತಿದೆ. ಶಿವಕುಮಾರ ಸ್ವಾಮೀಜಿ ಮಠದಲ್ಲಿ ಹಲವಾರು ವರ್ಷಗಳ ಹಿಂದೆ ಹಚ್ಚಿದಂತಹ ದಾಸೋಹದ ಒಲೆ ಇಂದಿಗೂ ಹಾರಿಲ್ಲ, ನಿರಂತರವಾಗಿ ದಾಸೋಹ ನಡೆಯುತ್ತಿದೆ. ಪೂಜ್ಯರು ಹಣ, ಆಸ್ತಿ ಸಂಪಾದನೆ ಮಾಡಲಿಲ್ಲ. ಮಠಕ್ಕೆ ಬರುವ ಭಕ್ತರು ಹಾಗೂ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ದಾಸೋಹ ನೀಡುವ ಮೂಲಕ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳು ನಡೆದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷರಾದ ಜಯಣ್ಣ, ಮೀನಾಕ್ಷಿ, ಪ್ರಧಾನ ಕಾರ್ಯದರ್ಶಿ ಹರೀಶ್, ಖಜಾಂಚಿ ಕಲಿಗಣೇಶ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಉಪಾಧ್ಯಕ್ಷ ಎಲ್.ಅಶೋಕ್, ತಹಸೀಲ್ದಾರ್ ಎಸ್.ಸಂತೋಷ್, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಜಿಲ್ಲಾ ಖಜಾಂಚಿ ಈರಣ್ಣ, ಮುಖಂಡರಾದ ಅಮೃತಿ ರಾಜಶೇಖರ್, ಎಸ್.ಮಂಜುನಾಥ್, ಚಂದ್ರಶೇಖರ್, ದ್ಯಾವಪ್ಪ, ಮಹದೇವಪ್ಪ, ಕೆಎಸ್‌ಆರ್‌ಟಿಸಿ ಬಿ.ನಾಗಸುಂದರ್, ದಲಿತ ಮುಖಂಡ ಬೊಮ್ಮರಾಜು, ಬಿ.ಎಸ್.ಜಯರಾಮು, ಬಿಜೆಪಿ ಅಧ್ಯಕ್ಷ ಧನಂಜಯ್, ಪುಟ್ಟಸ್ವಾಮಿ(ಪಾಪಣ್ಣ), ರುದ್ರೇಶ್ ಇತರರು ಇದ್ದರು.