ಅಣ್ಣಿಗೇರಿ: ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳು ಸಾರ್ವಜನಿಕರು ಹಾಗೂ ಅರ್ಹರಿಗೆ ಸದಾವಕಾಲವೂ ದೊರೆಯುವಂತಾಗಬೇಕು ಎಂದು ಪಂಚ ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಮಂಜುನಾಥ ಮಾಯಣ್ಣನವರ ಹೇಳಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿರುವ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನದ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಹೊರಡಿಸಿದ ಗ್ಯಾರಂಟಿಗಳನ್ನು ಪಕ್ಷಾತೀತವಾಗಿ ನೀಡುತ್ತಿದೆ. ಅದರಿಂದ ಸಾರ್ವಜನಿಕರು ತಮ್ಮ ಬದುಕು ಕಟ್ಟಿಕೊಳ್ಳಲು ಬಹು ಉಪಯೋಗವಾಗಿದೆ ಎಂದರು.
ಮಹಾಂತೇಶ ನಾವಳ್ಳಿ ಮಾತನಾಡಿ, ಅಣ್ಣಿಗೇರಿಯಲ್ಲಿ ಬೆಳಗ್ಗೆ ಶಾಲೆ-ಕಾಲೇಜ್ಗಳಿಗೆ ವಿದ್ಯಾರ್ಥಿಗಳು ತೆರಳಲು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು. ಅಧ್ಯಕ್ಷ ಮಾಯಣ್ಣವರ, ಕೂಡಲೇ ಸಭೆಯಲ್ಲಿದ್ದ ಸಾರಿಗೆ ವ್ಯವಸ್ಥಾಪಕರಿಗೆ ನಗರದಲ್ಲಿ ವಿದ್ಯಾರ್ಥಿಗಳು ಗದಗ ಹಾಗೂ ಹುಬ್ಬಳ್ಳಿಯಲ್ಲಿನ ಕಾಲೇಜ್ಗಳಿಗೆ ತೆರಳಲು ಶೀಘ್ರವೇ ಬಸ್ ಸೌಲಭ್ಯ ಕಲ್ಪಿಸುವಂತೆ ತಾಕೀತು ಮಾಡಿದರು.
ತಾಪಂ ಅಧಿಕಾರಿ ಯಶವಂತ ಕುಮಾರ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಲಾಭ ಅರ್ಹರಿಗೆ ತಲುಪಿಸಲು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯವಾಗುತ್ತವೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಬಸವರಾಜ ಕುಬಸದ ಮಾತನಾಡಿ, ಜನಸಾಮಾನ್ಯರ ಸರ್ಕಾರ ಎಂದು ಹೆಸರು ಗಳಿಸಿರುವ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಅನುಷ್ಠಾನದಿಂದ ಗ್ರಾಮೀಣ ಭಾಗದ ಬಹುತೇಕ ಜನರ ಬದುಕು ಹಸನಾಗಿದೆ ಎಂದರು.
ಶಿಶು ಇಲಾಖೆ ಅಧಿಕಾರಿ ಗಾಯತ್ರಿ ಪಾಟೀಲ, ಉದ್ಯೋಗ ವಿನಿಮಯ ಕೇಂದ್ರ ಅಧಿಕಾರಿ ನಂದಿನಿ ಆರ್.ಎಸ್., ಆಹಾರ ನಾಗರಿಕ ಸರಬರಾಜು ಅಧಿಕಾರಿ ಆರ್.ವಿ. ದೊಡ್ಡಮನಿ, ಹೆಸ್ಕಾಂ ಅಧಿಕಾರಿ ವೈ.ಎಚ್. ಮದಗಟ್ಟಿ, ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಎ.ಎಂ. ಕಾಡರಕೊಪ್ಪ, ಮಹೇಶ ಪಲ್ಲೇದ, ಹುಸೇನಸಾಬ್(ಬುಡ್ಡಾ) ಬೆಟಗೇರಿ, ಶ್ರೀಕಾಂತ ಕೋಳಿವಾಡ, ಮಲ್ಲಿಕಾರ್ಜುನ ರಾಯಪೂರ ಉಪಸ್ಥಿತರಿದ್ದರು.