ಶನಿವಾರಸಂತೆ: ಕಷ್ಟಪಟ್ಟು ದುಡಿದು ಬೆಳೆಯುವ ಅನ್ನದಾತನ ಬದುಕು ಸದಾ ಹಸನಾಗಿರಬೇಕು ಎಂದು ತುಮಕೂರು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಆಶಿಸಿದರು.
ಸಮೀಪದ ಆಲೂರುಸಿದ್ದಾಪುರ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಲಿಂಗೈಕ್ಯ ಶತಾಯುಷಿ ಸಿದ್ದಮಲ್ಲಯ್ಯ ಅವರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಕ್ರಾಂತಿ ರೈತರ ಮೊದಲ ಮತ್ತು ಪ್ರಮುಖವಾದ ಹಬ್ಬವಾಗಿದೆ. ತಾವು ಬೆಳೆದ ಬೆಳೆಯನ್ನು ಪೂಜಿಸಿ ಪ್ರಾರ್ಥಿಸುವ ಸಂಭ್ರಮದ ಹಬ್ಬವಾಗಿದೆ ಎಂದರು.
ಸಂಕ್ರಾಂತಿಯಂದು ಸೂರ್ಯ ದಕ್ಷಿಣದಿಂದ ಉತ್ತಕ್ಕೆ ಪಥಕ್ಕೆ ಪ್ರವೇಶಿಸುವ ಕಾಲ. ಕಳೆದ ಹಲವು ವರ್ಷಗಳಿಂದ ಅವಘಡ, ಅನಾಹುತಗಳು ಸಂಭವಿಸುವೆ. ಈ ವರ್ಷ ಅಂಥ ಯಾವು ದುರ್ಘಟನೆಗಳೂ ನಡೆಯದಿರಲಿ. ಕಾಲಕಾಲಕ್ಕೆ ಮಳೆ, ಬೆಳೆಯಾಗಲಿ ಎಂದು ಆಶಿಸಿದರು.
ಕೊಡಗು ಜಿಲ್ಲೆಯನ್ನು ದಕ್ಷಿಣದ ಕಾಶ್ಮೀರ ಎಂದು ಕರೆಯುತ್ತಾರೆ. ಆದರೆ ಇಲ್ಲಿಯೂ ಕಳೆದ ಬಾರಿ ಅಕಾಲಿಕ ಮಳೆ, ಪ್ರಕೃತಿ ವೈಪರೀತ್ಯದಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟ ಅನುಭವಿಸಿದ್ದಾರೆ. ಆದರೆ ಈ ವರ್ಷ ಅದರು ಮರುಕಳಿಸಿದರಲಿ ಎಂದು ಶುಭ ಕೋರಿದರು.
ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಮತ್ತು ಆಲೂರುಸಿದ್ದಾಪುರ ನಿವಾಸಿ ಜೆ.ಎಸ್.ವಿರೂಪಾಕ್ಷಯ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿ ಮತ್ತು ಸಿ ಅಂಡ್ ಭೂಮಿ ವಿವಾದದಿಂದ ಇಲ್ಲಿನ ರೈತರು ಹಾಗೂ ಜನ ಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದರು.
ಒಂದೆಡೆ ಪ್ರಕೃತಿ ಉಳಿಯಬೇಕು ನಿಜ. ಇದರಲ್ಲಿ ರೈತನ ಪಾತ್ರವೂ ಮುಖ್ಯವಾದದ್ದು, ಈ ನಿಟ್ಟಿನಲ್ಲಿ ರೈತರು ಸಹ ಸಾಕಷ್ಟು ಗಿಡ, ಮರಗಳನ್ನು ಬೆಳೆದು ಪರಿಸರವನ್ನು ಉಳಿಸಿಕೊಂಡಿದ್ದಾರೆ ಎಂದರು.
ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಹಾಗೂ ಇತರರು ಇದ್ದರು.