ಅರಕಲಗೂಡು: ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ ಈಡೇರಿಸದಿದ್ದರೆ ಸದನದಲ್ಲಿ ಅವರ ಪರವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಎ.ಮಂಜು ಹೇಳಿದರು.
ತಾಲೂಕು ಕಚೇರಿ ಮುಂದೆ ಕಳೆದ ಆರು ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ಹಮ್ಮಿಕೊಂಡಿರುವ ಗ್ರಾಮ ಆಡಳಿತಾಧಿಕಾರಿಗಳನ್ನು ಶನಿವಾರ ಭೇಟಿ ಮಾಡಿ ಮನವಿ ಆಲಿಸಿ ಮಾತನಾಡಿದರು.
ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರದಿಂದ ಕಂದಾಯ ಇಲಾಖೆಯಲ್ಲಿ ಆಗಬೇಕಾದ ರೈತರ ಕೆಲಸ ಕಾರ್ಯಗಳಿಗೆ ಬಹಳ ತೊಂದರೆಯಾಗಿದೆ. ಇಲಾಖೆ ಮೇಲಧಿಕಾರಿಗಳು ಕೂಡ ಇವರ ಸಮಸ್ಯೆಗಳಿಗೆ ಸ್ಪಂದಿಸಿ ಮನವಿ ಆಲಿಸುತ್ತಿಲ್ಲ. ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗ್ರಾಮ ಲೆಕ್ಕಾಧಿಕಾರಿಗಳಾದ ಪುನೀತ್, ಮೋಹನ್ ನಾಯಕ್, ಹರೀಶ್, ಕಿರಣ್ ಗೌತಮ್ ಇತರರಿದ್ದರು.