ಶಿವಮೊಗ್ಗ: ದೇಶಕ್ಕೆ ದಶ ದಿಕ್ಕುಗಳಿಂದಲೂ ಸಂಕಷ್ಟ ಎದುರಾಗುತ್ತಿದೆ. ದೇಶದಲ್ಲಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸನ್ನಿವೇಶದಲ್ಲಿ ದೇಶ ಮೊದಲು ಎಂಬ ಮನೋಧರ್ಮ ಪ್ರತಿಯೊಬ್ಬರಲ್ಲೂ ಬೆಳೆಯಬೇಕಿದೆ ಎಂದು ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಹೇಳಿದರು.
ಅಜೇಯ ಕೃತಿಗೆ ಸುವರ್ಣ ಸಂಭ್ರಮ ಹಾಗೂ ಆದಮ್ಯ ಕೃತಿಗೆ 40 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೋತ್ಥಾನ ಬಳಗದಿಂದ ವಿಕಾಸ ಟ್ರಸ್ಟ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ಸಂಸ್ಕಾರ ಭಾರತೀ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದವರ ಪರಂಪರೆಯಿಂದ ನಾವು ಪ್ರೇರಣೆ ಪಡೆಯಬೇಕು. ರಾಷ್ಟ್ರವೆಂಬ ಪರಿಕಲ್ಪನೆ ಅತ್ಯಂತ ಪ್ರಾಚೀನವಾದುದು. ನಮ್ಮ ದೇಶದ ವಿರುದ್ಧ ಬೇರೆ ಯಾವುದೇ ದೇಶ ಗೆಲುವು ಸಾಧಿಸಬಾರದು. ನನ್ನ ದೇಶ ಅಜೇಯವಾಗಿರಬೇಕೆಂಬ ಅದಮ್ಯ ಪ್ರೇರಣೆಯನ್ನು ನಮ್ಮದಾಗಿಸಿಕೊಳ್ಳಬೇಕು ಎಂದರು.
ವೀರ ಸಾವರ್ಕರ್ ಹೆಸರು ಹೇಳಿದರೆ ಒಂದು ಕಾಲದಲ್ಲಿ ಕಲ್ಲೇಟುಗಳು ಬೀಳುತ್ತಿದ್ದವು. ಆದರೆ ಇಂದು ಅವರ ಹೆಸರು ಹೇಳಿದರೆ ಸನ್ಮಾನಗಳಾಗುತ್ತವೆ ಎಂದ ಡಾ. ಬಾಬು ಕೃಷ್ಣಮೂರ್ತಿ, ಅಜೇಯ ನನ್ನ ನಿರೀಕ್ಷೆಗೂ ಮೀರಿ ಸಮಾಜದ ಮೇಲೆ ಪ್ರಭಾವ ಬೀರಿತು ಎಂಬ ಸಂಗತಿ ನನ್ನಲ್ಲಿ ಧನ್ಯತೆಯ ಭಾವನೆ ಮೂಡಿಸಿದೆ ಎಂದು ತಿಳಿಸಿದರು.
ನಾನು ಐದು ವರ್ಷದವನಿದ್ದಾಗಲೇ ಸಂಘದ ಸಂಪರ್ಕಕ್ಕೆ ಬಂದೆ. ಮನೆಯಲ್ಲಿ ಕ್ಷಾತ್ರತೇಜದ ಪುಸ್ತಕಗಳ ಸಂಗ್ರಹವೇ ಇತ್ತು. ನನ್ನ ಹಿರಿಯಣ್ಣ ಸ್ವಾತಂತ್ರೃ ಹೋರಾಟಗಾರನಾಗಿದ್ದ. ಅವನ ಬಳಿಕ ಕ್ರಾಂತಿಕಾರಿ ಸಂಘಟನೆ ಹಾಗೂ ಹೋರಾಟಕ್ಕೆ ಸಂಬಂಧಿಸಿದ ಅನೇಕ ಲೇಖನಗಳಿದ್ದವು. ಅದೆಲ್ಲವೂ ನನ್ನ ಮೇಲೆ ಅಪಾರ ಪರಿಣಾಮ ಉಂಟುಮಾಡಿತು ಎಂದು ಹೇಳಿದರು.
ಶಾಂತಿಯಿಂದಷ್ಟೇ ಸ್ವಾತಂತ್ರೃ ಸಿಗಲಿಲ್ಲ: ನಮ್ಮ ದೇಶದ ಸ್ವಾತಂತ್ರೃ ಹೋರಾಟದಲ್ಲಿ ಕ್ರಾಂತಿ ಚಿಂತನೆಗಳು 90 ವರ್ಷ ವಿಜೃಂಭಿಸಿದ್ದವು. ಆದರೆ ಸ್ವಾತಂತ್ರೃ ಸಿಕ್ಕಿದ್ದು ಕೇವಲ ಶಾಂತಿ ಮಂತ್ರದಿಂದ, ಚರಕದಿಂದ ಎಂಬ ಸುಳ್ಳು ಇತಿಹಾಸವನ್ನು ಸೃಷ್ಟಿ ಮಾಡಲಾಯಿತು. ಆದರೆ ಐದು ದಶಕಗಳ ಹಿಂದೆ ಅಜೇಯ ಕೃತಿಯ ಮೂಲಕ ನಿರ್ಮಾಣವಾದ ಇತಿಹಾಸ ನಮಗೆ ಕ್ರಾಂತಿಕಾರಿ ಹೋರಾಟದ ನೈಜ ಸ್ಥಿತಿಯನ್ನು ವಿವರಿಸಿತು. ಭಾರತದ ಸ್ವಾತಂತ್ರೃ ಹೋರಾಟದ ಕ್ಷಾತ್ರ ತೇಜಸ್ಸಿನ ವಿರಾಟ್ ದರ್ಶನವೇ ಅಜೇಯ ಕೃತಿ ಎಂದು ಆದರ್ಶ ಗೋಖಲೆ ಬಣ್ಣಿಸಿದರು.
ಸಂಘ ಎಲ್ಲರನ್ನೂ ಬೆಳೆಸುತ್ತದೆ: ಸಂಘಸ್ಥಾನಕ್ಕೆ ಬರುವ ಯಾರನ್ನೂ ಸಂಘ ಉಪೇಕ್ಷಿಸುವುದಿಲ್ಲ. ಆತನಲ್ಲಿನ ನ್ಯೂನತೆಯನ್ನು ಗುರುತಿಸಿ ಅದನ್ನು ಸಂಘಸ್ಥಾನದಲ್ಲಿ ಸರಿಪಡಿಸಲಾಗುತ್ತದೆ. ಆತನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಲಾಗುತ್ತದೆ. ಹೀಗೆ ಬೆಳೆದ ಅಪ್ರತಿಮ ಪ್ರತಿಭೆಗಳಲ್ಲಿ ಒಬ್ಬರು ಡಾ.ಬಾಬು ಕೃಷ್ಣಮೂರ್ತಿ. 1959ರಲ್ಲಿ ಸಂಘ ಶಿಕ್ಷಾ ವರ್ಗದಲ್ಲಿ ಇಬ್ಬರೂ ಒಟ್ಟಿಗೆ ಭಾಗವಹಿಸಿದ್ದೆವು. ಅಂದಿನಿಂದ ಅವರೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದೇನೆ ಎಂದು ಸು.ರಾಮಣ್ಣ ಹೇಳಿದರು.
ಶಿವಮೊಗ್ಗ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಡಾ. ಪಿ.ಸುಧೀಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುರೇಶ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಕಾಸ ಟ್ರಸ್ಟ್ ಅಧ್ಯಕ್ಷ ಬಿ.ಎ.ರಂಗನಾಥ್ ಉಪಸ್ಥಿತರಿದ್ದರು. ಲೇಖಕ ಆದರ್ಶ ಗೋಖಲೆ ಅವರು ಅಜೇಯ ಹಾಗೂ ಅದಮ್ಯ ಕೃತಿಗಳ ಕುರಿತು ಮಾತನಾಡಿದರು. ಆರ್‌ಎಸ್‌ಎಸ್ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಅವರು ಡಾ. ಬಾಬು ಕೃಷ್ಣಮೂರ್ತಿ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.