ಹನುಮಸಾಗರ: ವಿದ್ಯಾರ್ಥಿಗಳು ಅನಗತ್ಯ ಆಲೋಚನೆಗನ್ನು ಬಿಟ್ಟು, ಮಿದುಳಿನ ಸಮತೋಲನ ಕಾಯ್ದುಕೊಂಡು, ಓದಿನ ಕಡೆ ಗಮನ ಹರಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಶಮಶ್ರೀ ಹೇಳಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯುನಿರ್ವಸಲ್ ನಾಲೆಡ್ಜ್ ಮತ್ತು ಗ್ರಾಮೀಣ ವಿಕಾಸ ಸಂಸ್ಥೆಯಿಂದ ಹನುಮಸಾಗರ ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಸಕಾರಾತ್ಮಕ ಮನೋಭಾವದಿಂದ ಸುಲಭ ಕಲಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು.
ಜೀವನದಲ್ಲಿ ಅನಗತ್ಯ ಆಲೋಚನೆ ಮಾಡಬಾರದು. ವಿದ್ಯಾರ್ಥಿಗಳು ಓದಲು ಕುಳಿತುಕೊಳ್ಳುವ ಮೊದಲು ಹಲವು ವಿಚಾರಗಳು ಬರುವುದು ಸಹಜ. ಅವುಗಳನ್ನು ದೂರಮಾಡಿ ಏಕಾಗ್ರತೆ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಪ್ರತಿನಿತ್ಯ ಯೋಗ ಮಾಡಬೇಕು. ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶಿಕ್ಷಣ ಸಂಯೋಜಕ ದಾವಲಸಾಬ ವಾಲಿಕಾರ ಮಾತನಾಡಿ, ಕಾರ್ಯಾಗಾರವು ಜ.21ರವೆರೆಗೆ ನಡೆಯಲಿದ್ದು, 10 ಸಾವಿರ ವಿದ್ಯಾರ್ಥಿಗಳಿಗೆ 11 ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಮುಖ್ಯಶಿಕ್ಷಕರಾದ ರಾಯಮ್ಮ ಉಕ್ಕಲಿ, ಶಿವಪ್ಪ, ಅಮರೇಶ ತಮ್ಮಣ್ಣನವರ, ಮಹೇಶ ಮಠಪತಿ, ಶಂಕ್ರಪ್ಪ, ನೀಲಮ್ಮ ವಿದ್ಯಾಧರ ಸೊಪ್ಪಿಮಠ, ಬಸವರಾಜ ಚೌಡಾಪುರ, ಲೀಲಾವತಿ ಶೆಟ್ಟರ ಇತರರಿದ್ದರು.