ಶಿವಮೊಗ್ಗ: ಉನ್ನತ ಪರಂಪರೆ ಹೊಂದಿರುವ ಹೊಯ್ಸಳ ಬ್ರಾಹ್ಮಣ ಸಮುದಾಯದ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಬ್ರಾಹ್ಮಣ ಸಮಾಜದ ಸಂಘಟನೆಗೂ ಇದರಿಂದ ಹಿನ್ನಡೆಯಾಗಿದೆ. ತ್ರಿಮತಸ್ಥ ಬ್ರಾಹ್ಮಣರು ಒಗ್ಗೂಡುವುದೊಂದೇ ಸಮಸ್ಯೆಗಿರುವ ಪರಿಹಾರ ಎಂದು ಸಾಂಸ್ಕೃತಿಕ ಚಿಂತಕ, ನಿವೃತ್ತ ಪ್ರಾಧ್ಯಾಪಕ ಚಂದ್ರಮೌಳಿ ಸಖರಾಯಪಟ್ಟಣ ಹೇಳಿದರು.
ಭದ್ರಾವತಿ ನ್ಯೂಟೌನ್‌ನ ದತ್ತಮಂದಿರದಲ್ಲಿ ಹೊಯ್ಸಳ ಕರ್ನಾಟಕ ಸಂಘ ಶನಿವಾರ ಏರ್ಪಡಿಸಿದ್ದ ಹೊಯ್ಸಳ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲಸ ಮತ್ತಿತರ ಕಾರಣಗಳಿಂದ ಬೇರೆಡೆ ನೆಲೆಸುವವರ ಸಂಖ್ಯೆ ಹೆಚ್ಚಿದೆ. ಇದರಿಂದ ಮನೆಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಎಲ್ಲ ತೊಂದರೆಗಳನ್ನು ಅನುಭವಿಸಿ, ಯಾರ ತಂಟೆಗೂ ಹೋಗದೆ ತಮ್ಮಷ್ಟಕ್ಕೆ ಬದುಕುತ್ತಿರುವವರು ಎಂದರೆ ಅದು ಹೊಯ್ಸಳ ಕರ್ನಾಟಕ ಬ್ರಾಹ್ಮಣರು ಮಾತ್ರ. ಯಾವುದಕ್ಕೂ ದುರಾಸೆಪಡದೆ ಅತ್ಯಂತ ತೃಪ್ತಭಾವದಲ್ಲಿ ಜೀವಿಸುವ ಮೂಲಕ ಸಮುದಾಯ ಬೇರೆಯವರಿಗೆ ಮೇಲ್ಪಂಕ್ತಿಯಾಗಿದ್ದಾರೆ ಎಂದರು.
ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ, ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಸೇರಿ ಅನೇಕ ಮಹನೀಯರು ಹೊಯ್ಸಳ ಬ್ರಾಹ್ಮಣ ಸಮಾಜದವರು ಎಂಬುದು ಹೆಮ್ಮೆಯ ಸಂಗತಿ. ಕಲೆ, ಸಾಹಿತ್ಯ, ಸಾಮಾಜಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ನಮ್ಮ ಸಮಾಜ ನೀಡಿರುವ ಕೊಡುಗೆ ದೊಡ್ಡದು ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಚ್.ಎನ್.ಸುಬ್ರಹ್ಮಣ್ಯ ಮಾತನಾಡಿ, ಭದ್ರಾವತಿಯಲ್ಲಿ ಹೊಯ್ಸಳ ಬ್ರಾಹ್ಮಣ ಸಮುದಾಯದ ಎಲ್ಲ ಮನೆಗಳಿಗೂ ಸಂಘದ ಪ್ರಮುಖರು ಭೇಟಿ ನೀಡಿ ಸಂಪರ್ಕ ಮಾಡಿದ್ದೇವೆ. ಹಲವರು ಸಂಘಕ್ಕೆ ಆರ್ಥಿಕವಾಗಿಯೂ ನೆರವು ನೀಡಿದ್ದಾರೆ. ತಿಂಗಳಿಗೆ ಒಬ್ಬರ ಮನೆಯಲ್ಲಿ ಸತ್ಸಂಗ ನಡೆಸುವ ಮೂಲಕ ಎಲ್ಲರೂ ಒಂದೆಡೆ ಬೆರೆಯುವ ವಾತಾವರಣ ರೂಪಿಸಲಾಗುತ್ತಿದೆ. ಸಂಘಟನಾತ್ಮಕ ಸಮಸ್ಯೆ ನಿವಾರಣೆಗೆ ಬ್ರಾಹ್ಮಣ ಸಮಾಜದ ಎಲ್ಲ ಒಳಪಂಗಡಗಳು ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಸಮಾಜದ ಸಾಧಕರು ಹಾಗೂ ಸಂಘಟಕರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಬಿ.ಎನ್.ಪ್ರಕಾಶ್, ಖಜಾಂಚಿ ಶೇಷಾದ್ರಿ, ನಿಕಟಪೂರ್ವ ಅಧ್ಯಕ್ಷ ಎ.ಎನ್.ಕೃಷ್ಣಸ್ವಾಮಿ ಇತರರಿದ್ದರು.