ವಿವಾಹದ ವಯಸ್ಸು ಹೆಚ್ಚಳವಾಗಲಿ

ಹಾಸನ: ಸಮತೋಲಿತ ಬದುಕು ಕಟ್ಟಿಕೊಳ್ಳಲು ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟಬೇಕು.ಇಲ್ಲವಾದರೆ ಭವಿಷ್ಯದಲ್ಲಿ ಉದ್ಯೋಗ, ಆಹಾರ ಮತ್ತು ವಸತಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಹೇಳಿದರು.

ನಗರದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಸರ್ಕಾರಿ ಗೃಹ ವಿಜ್ಞಾನ ಕಾಲೇಜು ವತಿಯಿಂದ ಆಯೋಜಿಸಿದ್ದ ಯುವ ರೆಡ್‌ಕ್ರಾಸ್ ಘಟಕ ಉದ್ಘಾಟನೆ ಹಾಗೂ ವಿಶ್ವ ಜನಸಂಖ್ಯಾ ಅರಿವು ದಿನಾಚರಣೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿನ ಸಂಪನ್ಮೂಲ 73 ಕೋಟಿ ಜನಸಂಖ್ಯೆ ಸದ್ಬಳಕೆ ಮಾಡಿಕೊಳ್ಳುವಷ್ಟು ಮಾತ್ರವೇ ಲಭ್ಯವಿದೆ. ಆದರೆ ಭಾರತದ ಜನಸಂಖ್ಯೆ ಅದಕ್ಕಿಂತಲೂ 57 ಕೋಟಿ ಹೆಚ್ಚಾಗಿರುವುದು ಆತಂಕಕಾರಿಯಾಗಿದೆ ಎಂದರು.

ಜನಸಂಖ್ಯಾ ಸ್ಫೋಟದಿಂದ ದೇಶದಲ್ಲಿ ಆಹಾರ ಸಮಸ್ಯೆ ಉಲ್ಬಣವಾಗಲಿದೆ. ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಗೂ ತೊಡಕಾಗ ಲಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣ ಕ್ರಮಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಹೆಣ್ಣು ಮಕ್ಕಳ ವಿವಾಹದ ವಯಸ್ಸನ್ನು 18ರಿಂದ 21ಕ್ಕೆ ಹಾಗೂ ಗಂಡಿನ ವಯಸ್ಸನ್ನು 21ರಿಂದ 25 ವರ್ಷಕ್ಕೆ ಹೆಚ್ಚಿಸಬೇಕು. ಈ ಬಗ್ಗೆ ಕಟ್ಟು ನಿಟ್ಟಿನ ಕಾಯ್ದೆ ಜಾರಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಪ್ರತಿ ಸೆಕೆಂಡಿಗೆ 30 ಮಕ್ಕಳ ಜನನ, ಪ್ರತಿ ಗಂಟೆಗೆ 1,768, ಪ್ರತಿ ದಿನಕ್ಕೆ 42,434 ಹಾಗೂ ಪ್ರತಿ ತಿಂಗಳು 12 ಲಕ್ಷ ಹಾಗೂ ವರ್ಷಕ್ಕೆ ಒಂದೂವರೆ ಕೋಟಿ ಮಕ್ಕಳ ಜನನವಾಗುತ್ತಿದೆ. ಆದರೆ ಕಾಲ ಕ್ರಮೇಣ ಮರಣ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಚ್.ಪಿ.ಮೋಹನ್ ಮಾತನಾಡಿ, ಭೂ ಗ್ರಹಕ್ಕೆ ಕೇವಲ 1 ಸಾವಿರ ಕೋಟಿ ಜನಸಂಖ್ಯೆಯನ್ನು ಮಾತ್ರ ನಿಭಾಯಿಸುವಷ್ಟು ಶಕ್ತಿ ಇದೆ. ಈಗಾಗಲೇ ವಿಶ್ವದ ಜನ ಸಂಖ್ಯೆ 777 ಕೋಟಿ ದಾಟಿದೆ. ಇದೇ ರೀತಿ ಜನನ ಪ್ರಮಾಣ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಭೂಮಂಡಲ ಅಪಾಯದ ಅಂಚಿಗೆ ತಲುಪಲಿದೆ. ಹೀಗಾಗಿ ನಾವು ಜನಸಂಖ್ಯಾ ಸ್ಫೋಟವನ್ನು ತಡೆಯಬೇಕಾದ ಅನಿವಾರ್ಯತೆ ಇದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಆವರಣದಲ್ಲಿ ಗಣ್ಯರು ಗಿಡ ನೆಟ್ಟು ನೀರೆರೆದರು.

ಪ್ರಾಂಶುಪಾಲ ಡಾ.ಕೆ.ಟಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಅನುಗನಾಳು ಕೃಷ್ಣಮೂರ್ತಿ, ನಿರ್ದೇಶಕರಾದ ವೈ.ಎಸ್.ವೀರಭದ್ರಪ್ಪ, ಶಬೀರ್ ಅಹಮ್ಮದ್, ಅಮ್ಜದ್‌ಖಾನ್, ಆರ್.ಟಿ.ನಾರಾಯಣಸ್ವಾಮಿ, ಮಂಜಪ್ಪ ಮತ್ತು ನಿರ್ಮಲಾ, ಸಂಚಾಲಕ ಕೃಷ್ಣಪ್ಪ, ಕಾಲೇಜಿನ ಯುವರೆಡ್ ಕ್ರಾಸ್ ಘಟಕದ ಸಂಚಾಲಕಿ ಡಾ.ಸುರೇಖಾ, ಉಪನ್ಯಾಸಕರಾದ ವಿಜಯ ಪಾಟೀಲ್, ಲೀಲಾವತಿ, ಪುಟ್ಟರತ್ನ, ಸತೀಶ್ ಚಂದ್ರ ಹಾಜರಿದ್ದರು.  

Leave a Reply

Your email address will not be published. Required fields are marked *