ಶ್ರೀರಂಗಪಟ್ಟಣ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯುದಯಕ್ಕಾಗಿ ಶಿಕ್ಷಕರು ಶೈಕ್ಷಣಿಕ ಕಲಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಫಲಿತಾಂಶ ತರಲು ಶ್ರಮಿಸಬೇಕು ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುದೀರ್ಘ ಕಾಲ ಪ್ರೌಢಶಾಲಾ ಶಿಕ್ಷಕರಾಗಿ, ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಶೋಕ್‌ಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪ್ರಸ್ತುತ ಸರ್ಕಾರಿ ಶಾಲೆಗಳ ಶೈಕ್ಷಣಿಕ ಕಲಿಕೆಯ ವಿಚಾರದಲ್ಲಿ ಮಕ್ಕಳ ಪಾಲಕರು ಮೂಗು ಮುರಿಯುವ ನಡೆ ಹೆಚ್ಚಾಗಿ ಕಾನ್ವೆಂಟ್ ಸಂಸ್ಕೃತಿ ಕಡೆ ವಾಲುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದು, ಅತಿ ಹೆಚ್ಚು ಫಲಿತಾಂಶ ಗಳಿಸುವ ಮೂಲಕ ಸಾಧನೆ ತೋರಿದ್ದಾರೆ. ಇದರಲ್ಲಿ ಶಿಕ್ಷಕರ ಪಾತ್ರ ಗಣನೀಯವಾಗಿದ್ದು, ಮಹತ್ವಪೂರ್ಣ ಸ್ಥಾನ ಪಡೆಯಲಿದೆ. ಇದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೂ ನೆರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಗಾಂಧಿವಾದಿ ಡಾ.ಬಿ.ಸುಜಯ್ ಕುಮಾರ್, ಪುರಸಭಾ ಸದಸ್ಯ ಗಂಜಾಂ ಕೃಷ್ಣಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಶ್ರೀನಿವಾಸ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ.ಮಹೇಶ್, ಎಸ್‌ಡಿಎಂಎಸಿ ಸದಸ್ಯರಾದ ನಳಿನಾ ಸತ್ಯಪ್ಪ, ನಿಂಗರಾಜು ಇತರರಿದ್ದರು.