ಬೆಂಗಳೂರು: ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿಯವರ ಒಪ್ಪಿಗೆ ಪಡೆದ 24 ಗಂಟೆಗಳಲ್ಲಿ ಕೇಂದ್ರ ಪರಿಸರ ಸಚಿವಾಲಯದಿಂದ ಅನುಮತಿ ಕೊಡಿಸಲು ಸಿದ್ಧನಿರುವುದಾಗಿ ಸಂಸದ ತೇಜಸ್ವಿ ಸೂರ್ಯ ಅವರು ಸವಾಲು ಹಾಕಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಬೆಂಗಳೂರು ಮಹಾನಗರಕ್ಕೆ ಹೆಚ್ಚುವರಿ ನೀರನ್ನು ತರಲು ಮೇಕೆದಾಟು ಯೋಜನೆ ವರದಾನವಾಗಿದೆ. ಆದರೆ, ಪರಿಸರ ಕಾರಣದಿಂದ ಯೋಜನೆಗೆ ಅಡ್ಡಿಯಾಗಿದೆ. ಮುಖ್ಯವಾಗಿ ಪ್ರಾಜೆಕ್ಟ್ ಜಾರಿಗೆ ತಮಿಳುನಾಡು ಸರ್ಕಾರದ ಸಹಮತ ಬೇಕಿದೆ. ಸದ್ಯ ‘ಇಂಡಿಯಾ’ ಕೂಡದಲ್ಲಿರುವ ಸ್ಟಾಲಿನ್ ಅವರನ್ನು ಮನವೋಲಿಸಿ ನಮ್ಮ ಡಿಸಿಎಂ ಅನುಮತಿ ತರಲು ಪ್ರಯತ್ನ ಮಾಡಲಿ ಎಂದರು.
ಮೇಕೆದಾಟು ಯೋಜನೆ ಹಲವು ವರ್ಷಗಳಿಂದ ಕಾಗದದಲ್ಲೇ ಉಳಿಯಲು ರಾಜಕೀಯ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ. ಪ್ರಸ್ತುತ ನಗರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಜನರ ದೃಷ್ಟಿಯಿಂದ ಕಾವೇರಿ ನೀರು ಪೂರೈಕೆಯಲ್ಲಿ ಹೆಚ್ಚುವರಿ ಪಾಲು ಪಡೆಯಲು ಈ ಯೋಜನೆ ಅತ್ಯಗತ್ಯವಾಗಿದೆ. ಆದರೆ, ತಮಿಳುನಾಡು ಸಹಕಾರ ಇಲ್ಲದೆ ಪ್ರಾಜೆಕ್ಟ್ ಜಾರಿ ಕಷ್ಟ. ಈ ಸಮಸ್ಯೆಯನ್ನು ಗಮನಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಟಾಲಿನ್ ಅವರನ್ನು ಮನವೋಲಿಸಿ ಒಪ್ಪಿಗೆ ಪಡೆದುಬಂದಲ್ಲಿ ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಅನುಮೋದನೆಯನ್ನು ಕೊಡಿಸಲು ಬೆಂಗಳೂರಿನ ಸಂಸದನಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವುದಾಗಿ ತೇಜಸ್ವಿ ಸೂರ್ಯ ಪ್ರತಿಪಾದಿಸಿದರು.
ಮೂಲಸೌಕರ್ಯಕ್ಕೆ ಅತ್ಯಧಿಕ ಅನುದಾನ ಲಭ್ಯ:
ಪ್ರಸಕ್ತ ಸಂಸತ್ತಿನ ಅವಧಿಯಲ್ಲಿ ಬೆಂಗಳೂರು ನಗರದ ಮೂಲಸೌಕರ್ಯಕ್ಕೆ ಒಟ್ಟು 1.30 ಲಕ್ಷ ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಇದರಲ್ಲಿ ಮೆಟ್ರೋ, ಉಪನಗರ ರೈಲು ಯೋಜನೆ ಸೇರಿ ವಿವಿಧ ಪ್ರಾಜೆಕ್ಟ್‌ಗಳು ಸೇರಿವೆ. ಇಷ್ಟು ದೊಡ್ಡ ಮೊತ್ತವನ್ನು ಹಿಂದಿನ ಯಾವ ಸರ್ಕಾರಗಳು ಸಂಸತ್ತಿನ ಒಂದೇ ಅವಧಿಯಲ್ಲಿ ಬೆಂಗಳೂರಿಗೆ ಕೊಡುಗೆ ನೀಡಿರಲಿಲ್ಲ ಎಂದು ಸಮರ್ಥಿಸಿಕೊಂಡರು.
ಇದಲ್ಲದೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಬೆಂಗಳೂರಿನ 2.2 ಕೋಟಿ ಲಾನುಭವಿಗಳು ಲಾಭ ಪಡೆದುಕೊಂಡಿದ್ದಾರೆ. ಮಹಾನಗರದಲ್ಲಿ 3.4 ಲಕ್ಷ ಸಂಖ್ಯೆಯಷ್ಟು ಆಯುಷ್ಮಾನ್ ಕಾರ್ಡ್‌ಗಳು ವಿತರಣೆಯಾಗಿದ್ದು (ಒಟ್ಟು ಚಿಕಿತ್ಸಾ ಮೌಲ್ಯ 827 ಕೋಟಿ ರೂ.), ಈ ಪೈಕಿ 1.8 ಲಕ್ಷ ಕಾರ್ಡ್‌ಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ದೊರೆತಿದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ 27.68 ಲಕ್ಷ ಮಂದಿಗೆ ಲಸಿಕೆ ವಿತರಿಸಲಾಗಿದೆ ಎಂದು ಅವರು ವಿವರಿಸಿದರು.