ಶನಿವಾರಸಂತೆ: ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸ್ವಸ್ಥ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ಮುಕ್ತರಾಗಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಭವಿಷ್ಯದಲ್ಲಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ್ ಮಾತನಾಡಿ, ವಿದ್ಯಾರ್ಥಿಗಳು ಧೂಮಪಾನ, ಮದ್ಯಪಾನ, ಗುಟ್ಕಾ ಮುಂತಾದ ದುಶ್ಚಟಗಳಿಂದ ದೂರ ಇರಬೇಕು. ದುಶ್ಚಟಗಳಿಂದ ದೈಹಿಕ, ಮಾನಸಿಕ ಆರೋಗ್ಯ ಹಾಳಾಗುವುದರ ಜತೆಯಲ್ಲಿ ಜೀವನವೇ ನಾಶವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ಅಗತ್ಯ ಎಂದರು.
ಕಾಲೇಜು ಪ್ರಾಂಶುಪಾಲ ಇ.ಎಂ.ದಯಾನಂದ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಎಂ.ಎನ್.ಹರೀಶ್, ಸೋಮೇಶ್, ಜಯಶ್ರೀ ಉಪನ್ಯಾಸಕರಾದ ಮೋಹನ್, ಎಚ್.ಎಂ.ವಿವೇಕ್, ಪೊನ್ನಪ್ಪ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶನಿವಾರಸಂತೆ ವಲಯ ಮೇಲ್ವಿಚಾರಕಿ ಜಯಶ್ರೀ, ಸೇವಾಪ್ರತಿನಿಧಿ ಶೋಭಾ ಸೇರಿದಂತೆ ಇತರರು ಹಾಜರಿದ್ದರು.