ಯಲಬುರ್ಗಾ: ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಪಕ್ಷ ಸಂಘಟನೆಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಯಲಬುರ್ಗಾ ಹಾಗೂ ಕುಕನೂರು ಬ್ಲಾಕ್‌ಗಳಿಗೆ ನೇಮಕಗೊಂಡ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಣ, ಅಭಿವೃದ್ಧಿಗೆ ಕೊರತೆಯಿಲ್ಲ. ಒಂದೂವರೆ ವರ್ಷದಲ್ಲಿ ಸಾಕಷ್ಟು ಕೆಲಸ ಮಂಜೂರಾಗಿವೆ. ಕ್ಷೇತ್ರದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗುವುದು. ಅಭಿವೃದ್ಧಿ ಕೆಲಸಗಳಿಗೆ ಜನ ಸಹಕಾರ ನೀಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಬಗ್ಗೆ ಜನ ಅಪಾರ ಅಭಿಮಾನ ಹೊಂದಿದ್ದಾರೆ. ಬೈಎಲೆಕ್ಷನ್ ಗೆಲುವು ಸೇರಿ ಪ್ರಸ್ತುತ ಕಾಂಗ್ರೆಸ್‌ನ 138 ಜನ ಶಾಸಕರಾಗಿದ್ದಾರೆ. ಅನೇಕ ಜನಪರ ಯೋಜನೆ ಜಾರಿಗೆ, ಅಭಿವೃದ್ಧಿ ಕೆಲಸ ನಡೆಯುತ್ತಿವೆ. ಬಿಜೆಪಿ ಕೇವಲ ಸುಳ್ಳು, ಕೋಮುದ್ವೇಷ, ಜಾತಿ ರಾಜಕಾರಣ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮೋದಿ ಕಾಲ ಮುಗಿಯುತ್ತದೆ. ದೇಶದಲ್ಲಿ ಕಳೆದ ಹತ್ತುವರೆ ವಷರ್ದಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ಬಿಜೆಪಿ ಎಲ್ಲ ಸಮಾಜ ಕಟ್ಟಿಕೊಂಡು ಹೋಗುತ್ತಿಲ್ಲ. ವೋಟ್‌ಗಾಗಿ ಮುಸ್ಲಿಮರನ್ನು ತುಷ್ಟೀಕರಣ ಮಾಡುತ್ತಿದೆ. ಮೋದಿ ದೇಶದ ಪ್ರಧಾನಿಯಾಗಿ ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲ.
ಬಿಜೆಪಿಯವರಿಗೆ ವಕ್ಫ್ ಅಂದ್ರೆ ಏನಂತ ಗೊತ್ತಿಲ್ಲ. ಕಾನೂನು ಪ್ರಕಾರ ದೇವಸ್ಥಾನದ ಜಮೀನನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಜಾತಿ ಜಗಳ ಹಚ್ಚಲು ವಕ್ಫ್ ನೆಪವನ್ನಾಗಿ ಮಾಡಿಕೊಂಡಿದ್ದಾರೆ. ಬೊಮ್ಮಾಯಿ ಸಿಎಂ ಇದ್ದಾಗ ನೋಟಿಸ್ ಕೊಡಲಾಗಿದೆ. ಅದೇ ಈಗ ಮುಂದುವರೆದಿದೆ. ಧರ್ಮ, ಜನ, ಸರ್ಕಾರದ ಆಸ್ತಿ ಯಾರೂ ತೆಗೆದುಕೊಳ್ಳಲು ಬರುವುದಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ್, ನೂತನವಾಗಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಡಾ.ಶಿವನಗೌಡ ದಾನರಡ್ಡಿ, ಕೆರಿಬಸಪ್ಪ ನಿಡಗುಂದಿ, ವಕ್ತಾರರಾಗಿ ಆನಂದ ಉಳ್ಳಾಗಡ್ಡಿ, ರೇವಣಪ್ಪ ಸಂಗಟಿ, ಅಂದಾನಗೌಡ ಪಾಟೀಲ್, ರುದ್ರಪ್ಪ ಮರಕಟ್, ಹಂಪಯ್ಯಸ್ವಾಮಿ ಹಿರೇಮಠ ಹಾಗೂ ಕುಕನೂರು ಕಾರ್ಯಾಧ್ಯಕ್ಷರಾದ ರೆಹಮನ್‌ಸಾಬ್ ಮಕ್ಕಪ್ಪನವರ್, ಅಶೋಕ ತೋಟದ, ವಕ್ತಾರರಾದ ಸಂಗಮೇಶ ಗುತ್ತಿ, ಗಗನ ನೋಟಗಾರ, ಯಮನೂರಪ್ಪ ಕಟ್ಟಿಮನಿ, ರಫಿ ಮಂಡಲಗೇರಿ, ಮುತ್ತು ವಾಲ್ಮೀಕಿ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳಾಗಿ ಆಯ್ಕೆಯಾದವರಿಗೆ ನೇಮಕಾತಿ ಆದೇಶ ಪ್ರತಿ ನೀಡಲಾಯಿತು.
ಪ್ರಮುಖರಾದ ಎ.ಜಿ.ಭಾವಿಮನಿ, ರಾಘವೇಂದ್ರಾಚಾರ್ ಜೋಶಿ, ಯಂಕಣ್ಣ ಯರಾಶಿ, ಮಹೇಶ ಹಳ್ಳಿ, ನಾರಾಯಣಪ್ಪ ಹರಪನಹಳ್ಳಿ, ಬಿ.ಎಂ.ಶಿರೂರು ಇತರರಿದ್ದರು.