ಯೋಗವನ್ನು ಶಾಂತಿ, ಸೌಹಾರ್ದತೆ ಮತ್ತು ಪ್ರಗತಿಯ ಸಂಕೇತವನ್ನಾಗಿಸುವ ಧ್ಯೇಯವನ್ನಾಗಿಸಿಕೊಳ್ಳೋಣ: ಪ್ರಧಾನಿ ಮೋದಿ

ರಾಂಚಿ: ಯೋಗವನ್ನು ಶಾಂತಿ, ಸೌಹಾರ್ದತೆ ಮತ್ತು ಪ್ರಗತಿಯ ಸಂಕೇತವನ್ನಾಗಿಸುವ ಧ್ಯೇಯವನ್ನು ಹೊಂದೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ವಿಶ್ವ ಯೋಗ ದಿನಾಚರಣೆ ನಿಮಿತ್ತ ರಾಂಚಿಯ ಪ್ರಭಾತ್​ ತಾರಾ ಮೈದಾನದಲ್ಲಿ ಅಂದಾಜು 30 ಸಾವಿರ ಜನರೊಂದಿಗೆ ಯೋಗ ಮಾಡುವ ಮುನ್ನ ಅವರು ಮಾತನಾಡಿದರು. ನಮ್ಮ ಮೊಬೈಲ್​ಫೋನ್​ನ ಸಾಫ್ಟ್​ವೇರ್​ ಅನ್ನು ನಿರಂತರವಾಗಿ ಅಪ್ಡೇಟ್​ ಮಾಡುವ ರೀತಿಯಲ್ಲಿ ಯೋಗ ಕುರಿತ ನಮ್ಮ ಜ್ಞಾನವನ್ನು ಉತ್ತಮಪಡಿಸಿಕೊಳ್ಳುತ್ತ, ಉತ್ತಮ ಜೀವನ ನಡೆಸುವ ನಿಟ್ಟಿನಲ್ಲಿ ಸಾಗೋಣ ಎಂದರು.

ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ ಅವರು, ಭಾರತ ಸೇರಿ ವಿಶ್ವದ ನಾನಾ ಭಾಗಗಳಲ್ಲಿ ಸೂರ್ಯನ ಪ್ರಥಮ ಕಿರಣ ನೆಲಕ್ಕೆ ತಾಗುತ್ತಲೇ ಯೋಗ ಮಾಡಲು ಜಮಾಯಿಸಿರುವ ಕೋಟ್ಯಂತರ ಜನರನ್ನು ಅಭಿನಂದಿಸಿದರು.

ಯೋಗವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿತ್ತು. ಈಗಲೂ ಆಗಿದೆ. ಇದನ್ನು ಈಗ ಮತ್ತೊಂದು ಸ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ. ಯೋಗ ಎಂದರೆ ಆರೋಗ್ಯ. ಹಾಗಾಗಿ ಆಧುನಿಕ ಯೋಗದ ಪ್ರಯಾಣವನ್ನು ನಗರದಿಂದ ಗ್ರಾಮಗಳತ್ತ, ಬಡವರೆಡೆಗೆ, ಬುಡಕಟ್ಟು ಜನರೆಡೆಗೆ ಕೊಂಡೊಯ್ಯಬೇಕು. ಅನಾರೋಗ್ಯದ ಸಮಸ್ಯೆಯಿಂದ ತುಂಬಾ ತೊಂದರೆಗೆ ಒಳಗಾಗುವವರು ಇವರಾಗಿದ್ದಾರೆ. ಹಾಗಾಗಿ, ಯೋಗವನ್ನು ಬಡವರು ಮತ್ತು ಬುಡಕಟ್ಟು ಜನರ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಬೇಕು ಎಂದು ಹೇಳಿದರು.

ಯೋಗವು ಪುರಾತನವೂ ಹೌದು, ಆಧುನಿಕವೂ ಹೌದು. ಅದು ಸ್ಥಿರವಾಗಿದ್ದು, ನಿರಂತರವಾಗಿ ಸುಧಾರಣೆ ಕಾಣುತ್ತಲೇ ಇದೆ. ಯೋಗ ಎಂದರೆ ಆರೋಗ್ಯವಂತ ದೇಹ, ಸಮಚಿತ್ತ ಮತ್ತು ಏಕತೆಯ ಪ್ರತೀಕ. ಅದರ ಈ ಮಹತ್ವ ಮತ್ತು ಮೌಲ್ಯಗಳು ಅಂದಿಗೂ, ಇಂದಿಗೂ ಸ್ಥಿರವಾಗಿಯೇ ಉಳಿದಿವೆ ಎಂದರು.

* ಯೋಗವು ಜ್ಞಾನ, ಕಾಯಕ ಮತ್ತು ಆತ್ಮಸಮರ್ಪಣಾಭಾವದ ಹದಮಿಶ್ರಣವಾಗಿದೆ
* ಯೋಗವನ್ನು ರೋಗಮುಕ್ತ ಅಸ್ತ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ.
* ಯೋಗವು ಆರೋಗ್ಯವಂತ ದೇಹ, ಸಮಚಿತ್ತ ಮತ್ತು ಏಕತೆಯ ಪ್ರತೀಕವಾಗಿದೆ.